ಬೆಂಗಳೂರು: ಪೋಷಕರ ವಿಚ್ಛೇದನದಿಂದ ದೂರವಾಗುವ ಮಕ್ಕಳ ಸಮಾನ ಪೋಷಣೆ ಹಕ್ಕಿನ ಕಾನೂನನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಕ್ರಿಸ್ಪ ಸಂಸ್ಥೆಯ ನೇತೃತ್ವದಲ್ಲಿ ಟೌನ್‌ಹಾಲ್‌ನ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಹಲವು ಮಕ್ಕಳು ಅಪ್ಪ ಬೇಕು, ನಮಗೆ ಅಪ್ಪಬೇಕು ಎಂದು ಘೋಷಣೆ ಕೂಗಿದರು. ವಿಚ್ಛೇದನದಿಂದ ಮಕ್ಕಳಿಂದ ದೂರವಾಗಿರುವ ತಂದೆಯಾದವರು ಸಮಾನ ಪೋಷಣೆ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ರಿಸ್ಪ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಕುಮಾರ್ ಜಹಗೀದಾರ್, ಪೋಷಕ ಇಚ್ಛಾಶಕ್ತಿ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಾರದು. ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯೂ ಸಮಾನವಾಗಿರಬೇಕು. ಮಕ್ಕಳಿಗೆ ತಾಯಿಯಷ್ಟೇ ತಂದೆಯ ಪ್ರೀತಿಯೂ ಮುಖ್ಯ.
ಈಗಿರುವ ಕಾನೂನಿನಲ್ಲಿ ತಂದೆಯನ್ನು ಆರೋಪಿಯಂತೆ ಬಿಂಬಿಸಲಾಗುತ್ತಿದೆ. ತಾಯಿಯ ಸುರ್ಪದಿಯಲ್ಲೇ ಬೆಳೆಯುವ ಮಕ್ಕಳಲ್ಲಿ ತಂದೆಯ ಬಗ್ಗೆ ಉದ್ದೇಶ ಪೂರ್ವಕವಾಗಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಇದು ನಿಲ್ಲಬೇಕಾದರೆ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಹರ್ಷ ಸ್ವರೂಪ್ ಮಾತನಾಡಿ, ವಿಚ್ಛೇದನವಾದಾಗ ಮಕ್ಕಳ ಸಮಾನ ಪೋಷಣೆಗೆ ಅವಕಾಶ ನೀಡಬೇಕು. ಮಕ್ಕಳು ಹಾಗೂ ಮಹಿಳಾ ಸಚಿವಾಲಯವನ್ನು ವಿಭಜಿಸಿ ಮಕ್ಕಳಿಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಬೇಕು.
ಕೆಲವರು ಉದ್ದೇಶಪೂರ್ವಕವಾಗಿ ವರದಕ್ಷಣೆ, ವೈವಾಹಿಕ ದೌರ್ಜನ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದು ನಿಲ್ಲಬೇಕು ಎಂದು ಆಗ್ರಹಿಸಿದರು. ವಿಚ್ಛೇದನಪಡೆದು ಮಕ್ಕಳಿಂದ ದೂರವಾಗಿರುವ ಪೋಷಕರು(ತಂದೆ) ಅನಾಥ ಮಕ್ಕಳೊಂದಿಗೆ ಫಾದರ್ಸ್ ಡೇ ಆಚರಿಸಿಕೊಂಡರು.