ಹುಬ್ಬಳ್ಳಿ: ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸಿದ ಸಂತೃಪ್ತಿ ಇದೆ. ಬಿಜೆಪಿಯಿಂದ ಆಗಿರುವ ಅನ್ಯಾಯಕ್ಕೆ
ಸ್ವಾಭಿಮಾನದ ಸಂಕೇತವಾಗಿ ಸ್ಪರ್ಧೆಗಿಳಿದಿದ್ದೇನೆ. ಮತದಾರರು ಆಶೀರ್ವದಿಸುವ ಮೂಲಕ ಮತ್ತೊಮ್ಮೆ
ಆಯ್ಕೆ ಮಾಡಬೇಕು ಎಂದು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ
ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ರವಿವಾರ ಉಣಕಲ್ಲನಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ಆರು ಬಾರಿ ನನಗೆ ಆಶೀರ್ವಾದ ಮಾಡಿದ್ದೀರಿ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಹುಬ್ಬಳ್ಳಿ ಜನತೆಯ ಭಾವನಾತ್ಮಕ ಬದುಕನ್ನು ಆವರಿಸಿಕೊಂಡಿರುವ ಉಣಕಲ್ಲ ಕೆರೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಐತಿಹಾಸಿಕ ಉಣಕಲ್ಲ ಕೆರೆ ಹಾಗೂ ಕೆರೆ ದಂಡೆಗೆ ಇರುವ ಶ್ರೀ ಸಿದ್ಧಪ್ಪಜ್ಜ ಅವರ ದೇವಸ್ಥಾನ ಜನತೆಗೆ ಭಾವನಾತ್ಮಕ-ಧಾರ್ಮಿಕತೆಯನ್ನು ಬೆಸೆದಿದೆ. ಹುಬ್ಬಳ್ಳಿ ಸಾಂಸ್ಕೃತಿಕತೆಯನ್ನು ಹೆಚ್ಚಿಸಿದ್ದು, ಉಣಕಲ್ಲ ಕೆರೆ ಇಲ್ಲಿನ ಜನತೆ ಜೀವಾಳವಾಗಿದೆ. ಹುಬ್ಬಳ್ಳಿ-ಧಾರವಾಡ ಮಧ್ಯ ಸಂಚರಿಸುವಾಗ ಉಣಕಲ್ಲ ಕೆರೆ ಸೊಬಗು ನೋಡುವುದೇ ಒಂದು ವೈಭವ ಎನ್ನುವಂತಿದೆ. ನಾನು ಕಂದಾಯ ಸಚಿವರನಾಗಿದ್ದಾಗ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಅಲ್ಲಿವರೆಗೆ ಕೆರೆಗೆ ಕೊಳಚೆ ನೀರು ಬಂದು ಸೇರುತ್ತಿತ್ತು. ಕೆರೆಯಲ್ಲಿ ಪಾಚಿ ಕಟ್ಟಿ ನೀರು ದುರ್ವಾಸನೆ ಬರುತ್ತಿತ್ತು. ಕೆರೆ ಅಭಿವೃದ್ಧಿಗೆ ಸಂಕಲ್ಪ ಮಾಡಿ ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಯಿತು.
ಸುಮಾರು 300 ಎಕರೆ ವಿಸ್ತಾರದಲ್ಲಿರುವ ಕೆರೆ ಹುಬ್ಬಳ್ಳಿಯ ಆಕರ್ಷಣೆ ಕೇಂದ್ರಗಳಲ್ಲಿ ಒಂದಾಗಿದೆ. ಕೆರೆ ಪಕ್ಕದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗಿದ್ದು, ಜಲಕ್ರೀಡೆಗಳನ್ನು ಪ್ರೊತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ. ವೈವಿಧ್ಯಮಯ ಕಾರಂಜಿ ಅಳವಡಿಸಲಾಗಿದೆ. ಲೇಸರ್ ಶೋ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉಣಕಲ್ಲ ಕೆರೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರಕ್ಕೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ ಎಂದರು.
ಮುಖಂಡರಾದ ಪ್ರಫುಲ್ಲಚಂದ ರಾಯನಗೌಡ್ರ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ನೂರಾರು ಜನರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.