ಹುಬ್ಬಳ್ಳಿ: ಸಬ್ ಕೆ ಸಾಥ್ ಎನ್ನುತ್ತಲೇ ಬಿಜೆಪಿಯವರು ಪ್ರಮುಖ ಸಮಾಜಗಳನ್ನು ಕಡೆಗಣಿಸಿದೆ. ಹಾಲುಮತ ಸಮಾಜಕ್ಕಾದ ಅವಮಾನ ಖಂಡಿಸಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16ರಂದು ಧಾರವಾಡ ಕಲಾಭವನದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ನುಡಿದರು.
ರಾಜ್ಯದಲ್ಲಿ ಸುಮಾರು 90 ಲಕ್ಷ ಜನಸಂಖ್ಯೆ ಇರುವ ಕುರುಬ ಸಮಾಜಕ್ಕೆ ಬಿಜೆಪಿ ಒಂದು ಟಿಕೆಟ್ ನೀಡಿಲ್ಲ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿ ಬಿಜೆಪಿ ಅವಮಾನ ಮಾಡಿದೆ ಎಂದರು.
ಕುರುಬರಿಗೆ ಎಸ್ ಟಿ ಸ್ಥಾನ ನೀಡಿಕೆಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಅನ್ಯಾಯ ಮಾಡಿತ್ತು. ಸಿದ್ಧರಾಮಯ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ಸೌಲಭ್ಯಕ್ಕೆ ಕೇಂದ್ರದಲ್ಲಿ ಯತ್ನಿಸಿ ಎಂದು ಮನವಿ ಮಾಡಿದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಂದಿಸದೆ ಅನ್ಯಾಯ ಮಾಡಿದ್ದಾರೆ.
ಬಕೇಟ್ ಹಿಡಿಯುವವರಿಗೆ ಮಾತ್ರ ಬಿಜೆಪಿಯಲ್ಲಿ ಬೆಲೆ, ಸ್ಥಾನಮಾನಗಳಿವೆ. 30 ವರ್ಷಗಳಿಂದ ಬಿಜೆಪಿಗೆ ದುಡಿದರೂ ನನಗೆ ಪಾಲಿಕೆ ಟಿಕೆಟ್ ತಪ್ಪಿಸಲಾಯಿತು, ಪದಾಧಿಕಾರಿ ಮಾಡಲಿಲ್ಲ. ಜೋಶಿಯವರ ಅಹಂಕಾರದಿಂದ ವರ್ತಿಸುತಿದ್ದು, ಸಮಾಜಕ್ಕಾದ ಅನ್ಯಾದ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಯಾವ ಹೋರಾಟದಿಂದ ಬಂದವರಲ್ಲ. ಅವರಿಗೆ ಜನ ಬೆಂಬಲ ದೊರೆಯದು ಎಂದರು.
ಈಶ್ವರಪ್ಪ ಅವರು ರಾಜ್ಯದ ಪ್ರಮುಖರ ಸಭೆಯನ್ನು ರವಿವಾರ ಶಿವಮೊಗ್ಗದಲ್ಲಿ ಕರೆದಿದ್ದಾರೆ. ಹಲವು ನಿರ್ಧಾರ ಕೈಗೊಳ್ಳಲಾಗುವುದು ಎಂದರು.