Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಪೈಪೋಟಿ

11:12 PM Sep 16, 2019 | Lakshmi GovindaRaju |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 13 ಅಕಾಡೆಮಿ ಮತ್ತು 3 ಪ್ರಾಧಿಕಾರಗಳ ಅಧ್ಯಕ್ಷರ ಸ್ಥಾನಕ್ಕೆ ಭಾರೀ ಪೈಪೋಟಿ ಕಂಡು ಬಂದಿದ್ದು, ಉಪ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರಿಂದಲೂ ಸುಮಾರು 150ಕ್ಕೂ ಹೆಚ್ಚು ಮಂದಿಯ ಶಿಫಾರಸು ಪತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರವಾನೆಯಾಗಿದೆ.

Advertisement

ಅದರಲ್ಲೂ ರಾಜ್ಯ ಸಚಿವ ದರ್ಜೆ ಸ್ಥಾನಮಾನವಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿರುವುದು ತಿಳಿದು ಬಂದಿದೆ. ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಶಿಫಾರಸು ಪತ್ರಗಳು ಇಲಾಖೆ ಕೈ ಸೇರಿವೆ. ಸಚಿವರಾದ ಸಿ.ಟಿ.ರವಿ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ, ಅಂತಿಮ ಪಟ್ಟಿ ಸಿದ್ಧಪಡಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕವಿ ದೊಡ್ಡರಂಗೇಗೌಡ, ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ, ನಿವೃತ್ತ ಐಎಎಸ್‌ ಅಧಿಕಾರಿ ಸಿ. ಸೋಮ ಶೇಖರ, ವೈ.ಕೆ.ಮುದ್ದುಕೃಷ್ಣ ಸೇರಿ ಹಲವರ ಹೆಸರು ಮುಂಚೂಣಿಯಲ್ಲಿವೆ. ಇನ್ನು, ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಶಿವಮೊಗ್ಗದ ಜಾನಪದ ವಿದ್ವಾಂಸ ಬಸವರಾಜ ನಲ್ಲಿಸರ, ಹಿರಿಯ ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ವೇಮಗಲ್‌ ಡಿ.ನಾರಾಯಣಸ್ವಾಮಿ, ಚಿಕ್ಕಮಗಳೂರಿನ ಸೋಬಾನೆ ಪದ ಹಾಡುಗಾರ್ತಿ ಲಕ್ಷ್ಮೀದೇವಿ, ಜಾನಪದ ಕಲಾವಿದ ಜೋಗಿಲ ಸಿದ್ದರಾಜು ಅವರ ಹೆಸರು ಕೂಡ ಕೇಳಿ ಬಂದಿದೆ.

ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಧಾರವಾಡದ ಬಸವಲಿಂಗಯ್ಯ ಹಿರೇಮಠ, ಶಿವಾನಂದ ಸಿಳ್ಳಿಕೇರಿ ಸೇರಿ ಇನ್ನೂ ಕೆಲವು ಹಿರಿಯ ಬಯಲಾಟ ಕಲಾವಿದರ ಹೆಸರು ಕೇಳಿ ಬಂದಿವೆ. ನಾಟಕ ಅಕಾಡೆಮಿ ಅಧ್ಯಕ್ಷರ ಸ್ಥಾನಕ್ಕೆ ಧಾರವಾಡ ಮೂಲದ ಗಂಗಾಧರ ಪಾಟೀಲ್‌ ಕುಲಕರ್ಣಿ, ರಂಗಾಯಣದ ಮಾಜಿ ನಿರ್ದೇಶಕ ಸುಭಾಷ್‌ ನರೇಂದ್ರ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮುಖ್ಯಸ್ಥ ಸಿ.ಬಸವಲಿಂಗಯ್ಯ ಅವರ ಹೆಸರು ಮುಂಚೂಣಿಯಲ್ಲಿವೆ.

ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹಲವು ವಿದ್ವಾಂಸರು ಪೈಪೋಟಿ ನಡೆಸಿದ್ದು, ಬಾಗಲಕೋಟೆ ಮೂಲದ ಕಲಾವಿದ ರಂಗನಾಥ್‌ ಬಡಿಗೇರ ಅವರ ಹೆಸರು ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದೆ.

Advertisement

ರಂಗಭೂಮಿ ಸಮಾನಮನಸ್ಕರ ಸಭೆ
ಬೆಂಗಳೂರು: ಅವಧಿ ಪೂರ್ಣಗೊಳ್ಳುವ ಮೊದಲೇ ವಿವಿಧ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರ ಮತ್ತು ರಂಗಾಯಣ ನಿರ್ದೇಶಕರ ನಾಮ ನಿರ್ದೇಶನ ರದ್ದು ಪಡಿಸಿರುವ ಸರ್ಕಾರದ ಧೋರಣೆ ವಿರೋಧಿಸಿ, ರಂಗಭೂಮಿಯ ಸಮಾನಮನಸ್ಕರು ಸೋಮವಾರ ಸಭೆ ನಡೆಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ.ಲೋಕೇಶ್‌, ರಂಗಕರ್ಮಿ ರಾಮಕೃಷ್ಣ ಬೇಳೂ¤ರು, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ಸಿ.ಬಸವಲಿಂಗಯ್ಯ, ಶಶಿಕಾಂತ್‌ಯಡಹಳ್ಳಿ, ವಿ.ಎಂ.ನಾಗೇಶ್‌, ಚಂದ್ರಕಾಂತ್‌ ಸೇರಿದಂತೆ ಹಲವು ರಂಗಕರ್ಮಿಗಳು ಭಾಗವಹಿಸಿದ್ದರು.

ಸಭೆ ಬಳಿಕ ಮಾತನಾಡಿದ ಜೆ.ಲೋಕೇಶ್‌, ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು. ರಂಗಾಯಣ ನಿರ್ದೇಶಕರ ಮತ್ತು ವಿವಿಧ ಅಕಾಡೆಮಿ ಅಧ್ಯಕ್ಷರ ನಾಮನಿರ್ದೇಶನ ರದ್ದತಿ ಸಂಬಂಧ ಈ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿಲ್ಲ. ಮುಂದೆ ಬರುವ ಅಧ್ಯಕ್ಷರಿಗೆ ಮತ್ತು ರಂಗಾಯಣ ನಿರ್ದೇಶಕರಿಗೆ ಹೀಗಾಗಬಾರದು ಎಂಬುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಆಯ್ಕೆ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಆದರೆ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಪ್ರಾದೇಶಿಕ ಸಮಾನತೆಗೆ ಮನ್ನಣೆ ನೀಡಲಾಗುವುದು.
-ಸಿ.ಟಿ ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next