Advertisement

ಸಿಎಂಗೆ ಡಿಸಿಎಂ ಸಂಕಟ

11:25 AM Dec 15, 2019 | Team Udayavani |

ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದ ಬಳಿಕ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಬಿಜೆಪಿ ಸರಕಾರಕ್ಕೆ ಈಗ ಉಪ ಮುಖ್ಯಮಂತ್ರಿ ಹುದ್ದೆಯೇ ದೊಡ್ಡ ಸವಾಲಾಗಿದೆ. ಒಂದೆಡೆ ರಮೇಶ್‌ ಜಾರಕಿ ಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಇಲ್ಲದಿದ್ದರೆ, ಉಳಿದವರನ್ನೂ ಉಪ ಮುಖ್ಯಮಂತ್ರಿ ಪಟ್ಟದಿಂದ ಕೈಬಿಡಬೇಕು ಎಂಬ ನೂತನ ಶಾಸಕರ ಷರತ್ತು; ಇನ್ನೊಂದೆಡೆ, ಡಿಸಿಎಂ ಹುದ್ದೆಯ ಆಕಾಂಕ್ಷಿ ಸಚಿವ ಶ್ರೀರಾಮುಲು ಸರಕಾರಿ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿರುವುದು- ಈ ಘಟನೆಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

Advertisement

ಗುರುವಾರ ಸಂಪುಟ ಸಭೆಗೆ ಗೈರು ಹಾಜರಾಗಿದ್ದ ಶ್ರೀರಾಮುಲು, ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳ ಮಟ್ಟದ ಸಭೆಯಲ್ಲೂ ಭಾಗವಹಿಸಿರಲಿಲ್ಲ. ಮೈತ್ರಿ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ಬರಲು ಕಾರಣ ರಾಗಿ ರುವ ನೂತನ ಶಾಸಕರ ಬೇಡಿಕೆಗಳಿಗೆ ಮಾನ್ಯತೆ ನೀಡಿದರೆ, ಮೂಲ ಬಿಜೆಪಿಗರ ಮುನಿಸು; ವಲಸಿಗರ ಬೇಡಿಕೆ ಈಡೇರಿಸದಿದ್ದರೆ ಸರಕಾರಕ್ಕೆ ಕಂಟಕ. ಹೀಗಾಗಿ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಎಂಬ ಪಟ್ಟದ ಬಿಕ್ಕಟ್ಟು ಬಗೆಹರಿಸಲಾಗದೆ ಇಕ್ಕಟ್ಟಿಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ ವಲಸಿಗ ಶಾಸಕರನ್ನು ಸಚಿವರನ್ನಾಗಿ ಮಾಡುವ ಜತೆಗೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಎಚ್‌. ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರನ್ನು ಸಚಿವರನ್ನಾಗಿ ಮಾಡಬೇಕಿದೆ. ಆದರೆ ರಮೇಶ್‌ ಜಾರಕಿ ಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡ ಬೇಕೆಂಬ ವಲಸಿಗರ ಪಟ್ಟು ಮೂಲ ಬಿಜೆಪಿ ನಾಯಕ ಸಮುದಾಯದ ಹಿರಿಯ ನಾಯಕ ಬಿ. ಶ್ರೀರಾಮುಲು ಅವರ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.

ಎಲ್ಲ ಡಿಸಿಎಂ ಹುದ್ದೆ ರದ್ದು?
ಡಿಸಿಎಂ ಹುದ್ದೆಯೇ ಸಮಸ್ಯೆಯಾ ಗುತ್ತಿರುವುದರಿಂದ ಈ ಹುದ್ದೆಯೇ ಬೇಡ. ಎಲ್ಲರೂ ಸಚಿವರಾಗಿ ಕೆಲಸ ಮಾಡಿ. ಆಗ ಯಾರನ್ನೂ ಸಮಾಧಾನಪಡಿಸುವ ಅಗತ್ಯವೇ ಬೀಳುವುದಿಲ್ಲ. ಮುಖ್ಯಮಂತ್ರಿಗಳೇ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ. ಹೀಗಿರುವಾಗ ಮೂರ್‍ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸುವ ಅಗತ್ಯವಿಲ್ಲ ಎಂಬ ವಾದವೂ ಪಕ್ಷದಲ್ಲಿ ಬಲವಾಗಿದೆ.

ಐವರು ಡಿಸಿಎಂ?
ಜಾತಿ ಅಥವಾ ಪ್ರಾದೇಶಿಕ ಆಧಾರದಲ್ಲಿ ಆಂಧ್ರ ಪ್ರದೇಶ ಮಾದರಿಯಲ್ಲಿ ಐವರನ್ನು ಉಪ ಮುಖ್ಯಮಂತ್ರಿಯನ್ನಾಗಿಸಿ, ಒಂದೊಂದು ಪ್ರಾದೇಶಿಕ ವಿಭಾಗವನ್ನು ಒಬ್ಬೊಬ್ಬರಿಗೆ ಹಂಚಿಕೆ ಮಾಡಬೇಕು ಎಂಬ ಪ್ರಸ್ತಾವನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈಗ ಇರುವ ಮೂವರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರನ್ನು ಬದಲಾಯಿಸಿ, ರಮೇಶ್‌ ಜಾರಕಿಹೊಳಿ ಅವರಿಗೆ ನೀಡಬೇಕೋ ಅಥವಾ ಹಾಲಿ ಇರುವ ಡಿಸಿಎಂಗಳ ಜತೆಗೆ ಮತ್ತೆರಡು ಹುದ್ದೆಗಳನ್ನು ಸೃಷ್ಟಿಸುವುದಾದರೆ ಈಗಾಗಲೇ ಇರುವ ಲಿಂಗಾಯತ, ಒಕ್ಕಲಿಗ ಹಾಗೂ ದಲಿತ ಸಮುದಾಯದ ಜತೆಗೆ ನಾಯಕ ಸಮುದಾಯಕ್ಕೆ ಸೇರಿರುವ ಶ್ರೀರಾಮುಲು ಅವರಿಗೂ ನೀಡಬೇಕೇ ಎಂಬುದು ಈಗಿನ ಪ್ರಶ್ನೆಯಾಗಿದೆ.

Advertisement

ಈಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವ ಅದೇ ಸಮುದಾಯದ ರಮೇಶ್‌ ಜಾರಕಿಹೊಳಿ ಪಕ್ಷಾಂತರ ಮಾಡುವ ಮೊದಲು ಉಪ ಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಮುಂದಿಟ್ಟೇ ಸರಕಾರದ ಪತನಕ್ಕೆ ಮುಂದಡಿ ಇಟ್ಟಿದ್ದರು ಎನ್ನಲಾಗಿದ್ದು, ಈ ಬಗ್ಗೆ ಯಡಿಯೂರಪ್ಪ ಅವರ ಸರಕಾರ ರಚನೆಗೂ ಮೊದಲೇ ನಿರ್ಧಾರವಾಗಿದೆ. ಆಗ ಮಾತುಕೊಟ್ಟಂತೆ ನಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಮೇಲೆ ವಲಸಿಗರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರು ನಾಯಕರಲ್ಲಿ ಯಾರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೂ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಬಣದ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಅದನ್ನು ಪರಿಹರಿಸುವುದು ಕಗ್ಗಂಟಾಗಿದೆ. ಇದರ ನಡುವೆ ಕುರುಬ ಸಮುದಾಯದ ಕೆ.ಎಸ್‌. ಈಶ್ವರಪ್ಪ ಅವರಿಗೂ ಡಿಸಿಎಂ ಸ್ಥಾನ ನೀಡಬೇಕೆಂಬ ಆಗ್ರಹ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next