Advertisement

ಕಲಿಕೆಗೆ ವಿಷಯ ಮುಖ್ಯ

10:36 PM Sep 15, 2019 | Sriram |

ನಾವೆಲ್ಲಾ ಜೀವನ ನಡೆಸುತ್ತೇವೆ. ಒಬ್ಬೊಬ್ಬರು ಒಂದೊಂದು ರೀತಿಯ ಜೀವನ. ಅವರವರಿಗೆ ಉತ್ತಮವೆನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತೇವೆ. ಆದರೆ ನಾವು ನಂಬಿಕೊಂಡ ತತ್ವಗಳನ್ನೇ ಸತ್ಯ ಎಂದು ನಂಬಿರುವ ನಾವು ಅದರಾಚೆಗಿರುವ ವಿಷಯಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಬದುಕು ತುಂಬಾ ಸಣ್ಣದು. ಹಾಗೆಂದು ಅದು ಬಾಲಿಶವಲ್ಲ. ಹಾಗಾಗಿ ನಾವಂದುಕೊಂಡ, ನಂಬಿಕೊಂಡ ತತ್ವಾದರ್ಶಗಳಾಚೆಗಿನ ಇನ್ನೊಂದಷ್ಟು ವಿಷಯಗಳನ್ನು ಕಲಿಯುವಲ್ಲಿಯೂ ಚಿತ್ತ ಹರಿಸಬೇಕು. ಏಕೆಂದರೆ ಜೀವನ ನಿರಂತರ ಕಲಿಕೆಯ ಯಾನ. ಈ ಯಾನದಲ್ಲಿ ಎಲ್ಲವನ್ನೂ ಒಪ್ಪಿಕೊಂಡು ಬದುಕು ಸಾಗಿಸುವುದಿದೆಯಲ್ಲಾ, ಎಲ್ಲರಿಂದಲೂ ಒಪ್ಪಿತವಾಗಿ ಹಾದಿ ಸವೆಸುವುದಿದೆಯಲ್ಲಾ ಆ ಸವಾಲಿನಲ್ಲಿ ಗೆದ್ದವನು ಸಮರ ವೀರನಾಗುತ್ತಾನೆ. ಸಂದರ್ಭಗಳಿಗಂಜಿ ಓಡಿ ಹೋದವನನ್ನು ಯಾರೂ ಸ್ಮರಿಸಿಕೊಳ್ಳುವುದಿಲ್ಲ.

Advertisement

ಇಲ್ಲಿ ಕಲಿಯುವುದಕ್ಕೆ ಅದೆಷ್ಟೊ ವಿಷಯಗಳಿವೆ. ನಾವು ಯಾರಿಂದ ಕಲಿಯುತ್ತೇವೆ ಎನ್ನುವುದಕ್ಕಿಂತ ಇಲ್ಲಿ ಏನನ್ನು ಕಲಿಯಲು ಹೊರಟಿದ್ದೇವೆ ಎಂಬುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಇಲ್ಲಿ ಶಿಕ್ಷಣ, ನೈತಿಕ ಮೌಲ್ಯಗಳು ವ್ಯಕ್ತಿ ಸೀಮಿತವಾಗಿರದೆ ವಸ್ತು ನಿಷ್ಠತೆಯನ್ನು ಎತ್ತಿ ಹಿಡಿದರಷ್ಟೇ ಕಲಿಯುವಿಕೆಗೂ ಅರ್ಥ ಬರುತ್ತದೆ.

ಮನುಷ್ಯ ನಾನೇ ಬುದ್ಧಿವಂತ, ನಮ್ಮಿಂದ ಎಲ್ಲವು ಸಾಧ್ಯ ಎಂದು ಭಾವಿಸುವ ನಾವು ಅತೀ ನಂಬಿಕೆಗಳಿಂದಲೇ ಮೋಸ ಹೋಗುತ್ತಿರುವವರು. ಎಲ್ಲ ಸಾಧನೆಗಳನ್ನು ಮಾಡಿದೆವು ಎಂದು ಬೀಗುವ ನಾವು, ಪ್ರಕೃತಿಯ ಸಾಧನೆಯ ಮುಂದೆ ತೃಣ ಸಮಾನರೇ ಸರಿ. ನಮ್ಮ ದುರಾಸೆ, ಅಹಂಕಾರಗಳಿಗೆ ಸರಿಯಾಗಿ ಇಂದು ನಾವೇ ನಮ್ಮ ಅವಸಾನಕ್ಕೂ ಕಾರಣರಾಗುತ್ತಿದ್ದೇವೆ ಎಂಬುದೂ ಸುಳ್ಳಲ್ಲ. ನಾವು ಪ್ರಕೃತಿಗೆ ಮಾಡುವ ಪ್ರತಿ ಅನ್ಯಾಯಕ್ಕೂ ನಿಸರ್ಗವೇ ನಮಗೆ ಸರಿಯಾದ ಪಾಠವನ್ನು ಕಾಲ ಕಾಲಕ್ಕೆ ಮನವರಿಕೆ ಮಾಡಿಕೊಡುತ್ತಿದೆ ಎನ್ನುವುದಕ್ಕಿಂತ ಬೇರೆ ಸಾಕ್ಷಿ ನಮ್ಮ ಅಹಂಕಾರಕ್ಕೆ ಬೇಕಾಗಿಲ್ಲ.

ಹೌದು, ಬದುಕಿನಲ್ಲಿ ನಾವು ಹಿರಿಯರಿಂದ ಯಾ ಕಿರಿಯರಿಂದ ಒಟ್ಟಿನಲ್ಲಿ ಯಾರಾದರೊಬ್ಬರಿಂದ ಸದಾ ಕಾಲ ಕಲಿಕೆಯ ಪ್ರಕ್ರಿಯೆಯಲ್ಲಿ ಮುಳುಗಿರುತ್ತೇವೆ. ಈ ಕಲಿಕೆ ಉತ್ತಮ ಜೀವನ ಮತ್ತು ಉತ್ತಮ ಸಮಾಜಕ್ಕೆ ಪೂರಕವಾಗಿದ್ದಲ್ಲಿ ಮಾತ್ರ ನಮಗೂ ಉಳಿವು.

ಹಕ್ಕಿಗಳ ಪ್ರಯೋಗ
ಎಲ್ಲ ಬಗೆಯ ಹಕ್ಕಿಗಳ ಪ್ರತಿನಿಧಿಗಳು ಯಾವ ಪ್ರಭೇದ‌ದ ಹಕ್ಕಿ ಹೆಚ್ಚು ಎತ್ತರಕ್ಕೆ ಹಾರಬಲ್ಲದು ಎಂಬುದನ್ನು ತಿಳಿಯಲು ನಿರ್ಧರಿಸಿದವು. ಇದನ್ನು ನಿರ್ಣಯಿಸಲು ಹಕ್ಕಿಗಳ ಗುಂಪು ಕೌನ್ಸಿಲ್‌ ಅನ್ನು ರಚಿಸಿ, ಈ ಪ್ರಯೋಗವನ್ನು ಆರಂಭಿಸಿದವು. ಈ ಪ್ರಯೋಗದಲ್ಲಿ ಹದ್ದನ್ನು ಹೊರತುಪಡಿಸಿ ಉಳಿದೆಲ್ಲ ಹಕ್ಕಿಗಳು ಸ್ಪರ್ಧೆಯಲ್ಲಿ ಸೋಲನುಭವಿಸಿದವು. ಇನ್ನೂ ಎತ್ತರಕ್ಕೆ ಹಾರಲಾರಂಭಿಸಿದ ಹದ್ದು, “ನೋಡಿ, ನಾನು ಎಲ್ಲರನ್ನು ಹಿಂದಿಕ್ಕಿ ಎತ್ತರಕ್ಕೆ ತಲುಪಿದ್ದೇನೆ’ ಎಂದು ಹೇಳಿತು. ಇದೇ ವೇಳೆ ಅದರ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದ ಒಂದು ಸಣ್ಣ ಗುಬ್ಬಚ್ಚಿ ತನ್ನ ರೆಕ್ಕೆಯಿಂದ ಹಾರಿ ಇನ್ನೂ ಎತ್ತರಕ್ಕೆ ಹಾರಿತು. ಏಕೆಂದರೆ ಗುಬ್ಬಚ್ಚಿ ಶಕ್ತಿಯನ್ನು ಶೇಖರಿಸಿತ್ತು. ಈ ಪ್ರಯೋಗದಲ್ಲಿ ವಿಜೇತರನ್ನು ನಿರ್ಧರಿಸಲು ಕೌನ್ಸಿಲ್‌ ಸಭೆ ಕರೆಯಿತು. ಸಭೆಯಲ್ಲಿ ಗುಬ್ಬಚ್ಚಿಯನ್ನು ವಿಜೇತ ಎಂದು ಪರಿಗಣಿಸಲಾಯಿತು. ಗುಬ್ಬಚ್ಚಿ ಚತುರನಾಗಿದ್ದ ಕಾರಣ ವಿಜೇತ ಎಂದು ನಿರ್ಧರಿಸಲಾಯಿತು. ಆದರೆ ಸಾಧನೆಯ ಮಾನ್ಯತೆ ಹದ್ದಿಗೆ ಸೇರಿತು. ಗುಬ್ಬಚ್ಚಿಯನ್ನು ಸೇರಿದಂತೆ ಉಳಿದೆಲ್ಲ ಹಕ್ಕಿಗಳನ್ನು ಮೀರಿಸಿದ ಕಾರಣ ಹದ್ದಿನ ತಾಳ್ಮೆಗೆ ಪ್ರಶಸ್ತಿ ನೀಡಲಾಯಿತು.

Advertisement

-  ಭೀಮಾ ನಾಯ್ಕ, ನಾಗತಿಕಟ್ಟೆ ತಾಂಡ

Advertisement

Udayavani is now on Telegram. Click here to join our channel and stay updated with the latest news.

Next