Advertisement

ಕೆರೆಯ ಒಡಲು ಸೇರುತ್ತಿದೆ ಕಲುಷಿತ ನೀರು

03:52 PM Dec 30, 2019 | Suhan S |

ಮಾಗಡಿ: ಪಟ್ಟಣದ ಒಳಚರಂಡಿಗಳ ಕಲುಷಿತ ನೀರು ಹಾಗೂ ತ್ಯಾಜ್ಯ ಚಾರಿತ್ರಿಕ ಭರ್ಗಾವತಿ ಕೆರೆಗೆ ಸೇರುತ್ತಿದ್ದು, ಈಗಾಗಲೇ ಬಿಡದಿ ಬಳಿ ಇರುವ ಬೈರಮಂಗಲದ ಕೆರೆ ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ. ಅದೇ ರೀತಿ ಭರ್ಗಾವತಿ ಕೆರೆ ಸಹ ಗಬ್ಬೆದ್ದು ನಾರುತ್ತಿದೆ. ಇದು ಸಹ ಭೈರಮಂಗಲ ಕೆರಯಾಗುತ್ತಿದೆ ಎಂಬ ಆತಂಕ ಈ ಭಾಗದ ಜನರನ್ನು ಕಾಡುತ್ತಿದೆ.

Advertisement

ಮಾಡಬಾಳ್‌ ಹೋಬಳಿ ಮಾಡಬಾಳ್‌ ರಸ್ತೆಯ ಪರಂಗಿಚಿಕ್ಕನಪಾಳ್ಯದ ಬಳಿ ಇರುವ ನಾಡಪ್ರಭು ಇಮ್ಮಡಿ ಕೆಂಪೇಗೌಡ ತನ್ನ ಮಡದಿಯ ನೆನಪಿಗಾಗಿ ಆಕೆಯ ಹೆಸರಿನಲ್ಲಿ ಕಟ್ಟಿಸಿರುವ ಪ್ರಸಿದ್ಧ ಭರ್ಗಾವತಿ ಕೆರೆಗೆ ಮಾಗಡಿ ಪಟ್ಟಣದ ಒಳ ಚರಂಡಿ ನೀರು ಮತ್ತು ತ್ಯಾಜ್ಯ ಸೇರುತ್ತಿದೆ. ಕೆರೆಯ ದುರ್ವಾಸನೆಯಿಂದ ಸುತ್ತಮುತ್ತಲ ಗ್ರಾಮೀಣ ಜನತೆ ತಾವು ವಾಸಿಸುವ ಗ್ರಾಮವನ್ನೇ ತ್ಯೆಜಿಸಬೇಕಾದ ಪರಿಸ್ಥಿತಿ ಎದು ರಾಗಬಹುದು ಎಂಬ ಆತಂಕದಲ್ಲಿದ್ದಾರೆ.

ಸಾಂಕ್ರಾಮಿಕ ರೋಗದ ಭೀತಿ: ಕಾಮಗಾರಿ ಪೂರ್ಣಗೊಳಿಸಿ ಪುರಸಭೆ ವಶಕ್ಕೆ ನೀಡಬೇಕಾದ ಕೊಳಚೆ ನಿರ್ಮೂಲನಾ ಮಂಡಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಭರ್ಗಾವತಿ ಕೆರೆ ಬಹುತೇಕ ವಿನಾಶದ ಹಂಚಿನಲ್ಲಿದ್ದು, ಕೆರೆಯ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿನ ನೀರು ಸಹ ಕಲುಷಿತಗೊಳ್ಳುತ್ತಿದ್ದು, ಅಂತರ್ಜಲ ಮಲೀನವಾಗುತ್ತಿದೆ. ಈ ನೀರನ್ನು ಕುಡಿದ ಗ್ರಾಮೀಣ ಜನರಲ್ಲಿ ಮೈ ಕೆರೆತ, ತುರಿಕೆ ಉಂಟಾಗುತ್ತಿದೆ. ಸಾಂಕ್ರಾಮಿಕ ರೋಗದ ಭೀತಿಯನ್ನು ಜನತೆ ಈಗಾಗಲೇ ಎದುರಿಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕದಲ್ಲಿ ಗ್ರಾಮೀಣ ಜನತೆ ಜೀವನ ಸಾಗಿಸುತ್ತಿದ್ದಾರೆ.

ವೆಟ್‌ವೆಲ್‌ಗೆ ಸೇರುತ್ತಿಲ್ಲ ನೀರು: ಪಟ್ಟಣದಲ್ಲಿ ಕಳೆದ 12 ವರ್ಷಗಳಿಂದಲೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಆದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗೂ ಪುರಸಭಾ ವ್ಯಾಪ್ತಿಯ ಮನೆಯ ಶೌಚಾಲಯದ ಮಲ, ಮೂತ್ರದ ತ್ಯಾಜ್ಯವನ್ನು ಅಪೂರ್ಣ ಕಾಮಗಾರಿಯಾಗಿರುವ ಒಳ ಚರಂಡಿಗೆ ಸಂಪರ್ಕ ಕಲ್ಪಿಸಿದ್ದರಿಂದ ಸಮರ್ಪಕವಾಗಿ ತ್ಯಾಜ್ಯಗೊಂಡ ನೀರು ವೆಟ್‌ವೆಲ್‌ ಸೇರುತ್ತಿಲ್ಲ. ಒಳಚರಂಡಿ ಕಲುಷಿತ ತ್ಯಾಜ್ಯದ ನೀರು ಎಲ್ಲಂದರಲ್ಲಿ ಮ್ಯಾನ್‌ ಹೋಲ್‌ಗ‌ಳಲ್ಲಿ ತುಂಬಿ ಹುಕ್ಕಿ ಹರಿಯುತ್ತದೆ.

ಕಳೆದ ಮೂರು ವರ್ಷಗಳಿಂದಲೂ ಒಳಚರಂಡಿ ಕಲುಷಿತ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ.

Advertisement

ಬಗೆಹರಿಯದ ಸಮಸ್ಯೆ: ಭರ್ಗಾವತಿ ಕೆರೆಯ ಅಣತಿ ದೂರದಲ್ಲಿಯೇ ವೆಟ್‌ವೆಲ್‌ ಸ್ಥಾಪಿಸಲಾಗಿದ್ದು, ಒಂದು ಹನಿ ತ್ಯಾಜ್ಯ ನೀರು ವೆಟ್‌ವೆಲ್‌ ಸೇರುತ್ತಿಲ್ಲ. ವೆಟ್‌ ವೆಲ್‌ನಲ್ಲಿಯೂ ಸಹ ಕರುಚಲು ಗಿಡ ಬೆಳೆದು ನಿಂತಿದ್ದು, ವಿಷ ಜಂತುಗಳ ತಾಣವಾಗಿದೆ. ಜೊತೆಗೆ ಕುಡುಕರ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಸಮಸ್ಯೆಯ ಕುರಿತು ಶಾಸಕ ಎ. ಮಂಜುನಾಥ್‌ ಅವರ ಗಮನಕ್ಕೆ ತರಲಾಗಿತ್ತು. ಅವರು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟರು. ಇನ್ನೂ ಭರವಸೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.

ಈಗಾಗಲೇ ಭರ್ಗಾವತಿ ಕೆರೆಗೆ ಒಳಚರಂಡಿ ತ್ಯಾಜ್ಯದ ನೀರು ಹರಿಯದಂತೆ ಕ್ರಮ ವಹಿಸಿದ್ದೇನೆ. ಆದಷ್ಟು ಬೇಗ ತ್ಯಾಜ್ಯ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. -ಎಂ.ಸಿ.ಮಹೇಶ್‌, ಮುಖ್ಯಾಧಿಕಾರಿ ಪುರಸಭೆ

 

ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next