ಯಲಬುರ್ಗಾ: ಗಂಡನ ಮನೆಗೆ ಹೊಸದಾಗಿ ಬಂದ ಪತ್ನಿಯ ಕುಟುಂಬದವರು ತಂದ ಬುತ್ತಿಯಲ್ಲಿನ ಆಹಾರ ಸೇವಿಸಿದ ಪರಿಣಾಮ 42 ಜನ ಅಸ್ವಸ್ಥಗೊಂಡ ಘಟನೆ ತಾಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ನಡೆದಿದೆ.
ಕುಷ್ಟಗಿ ಪಟ್ಟಣದಿಂದ ಗ್ರಾಮಕ್ಕೆ ಮದುವೆ ಬುತ್ತಿಯನ್ನು ತರಲಾಗಿತ್ತು. ಈ ಊಟವನ್ನು ಕುಟುಂಬ ಸದಸ್ಯರು ಸೇರಿದಂತೆ ಜನತೆಗೆ ಉಣಬಡಿಸಿದ್ದಾರೆ. ಊಟ ಸೇವಿಸಿದ ಜನರಲ್ಲಿ ಒಬ್ಬೊಬ್ಬರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಹೊಟ್ಟೆ ನೋವು ಆರಂಭವಾದ ಪರಿಣಾಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, 7 ಜನರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಕಿತ್ಸೆ: ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥರಾದ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಣಮುಖರಾಗುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಬೇಸಿಗೆ ಇರುವುದರಿಂದ ಆಹಾರ ಸೇವನೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿಕೊಳ್ಳಬೇಕು. ಆಹಾರವನ್ನು ಲ್ಯಾಬ್‌ಗ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ| ಪ್ರಕಾಶ ವಿ. ತಿಳಿಸಿದರು.
ಬಿಜೆಪಿ ಮುಖಂಡ ಭೇಟಿ: ಹುಲೇಗುಡ್ಡ ಗ್ರಾಮದ ಜನತೆ ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡ ಅನಿಲ ಆಚಾರ್ ಹಾಗೂ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಅವರಿಗೆ ಹಣ್ಣು, ಹಂಪಲು ವಿತರಿಸಿ ಧೈರ್ಯ ತುಂಬಿದರು. ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ ಮಾತನಾಡಿ, ಸಚಿವ ಹಾಲಪ್ಪ ಆಚಾರ್ ಅವರು ನಿರಂತರ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಉತ್ತಮ ಚಿಕಿತ್ಸೆ ನೀಡುವಂತೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ಮುಖಂಡ ಅನಿಲ ಆಚಾರ್ ಅವರು ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿದ್ದಾರೆ. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಬಾವಿಮನಿ, ಸುಧಾಕರ ದೇಸಾಯಿ, ಮಾರುತಿ ಗಾವರಾಳ, ರುದ್ರಪ್ಪ ನಡೂಲಮನಿ, ಬಾಳಪ್ಪ ಬಂಡ್ಲಿ, ಶರಣಪ್ಪ ಬಣ್ಣದಬಾವಿ, ಕರಿಬಸಯ್ಯ ಬಿನ್ನಾಳ, ಸಿದ್ದು ಉಳ್ಳಾಗಡ್ಡಿ, ಕಲ್ಲೇಶಪ್ಪ ಕರಮುಡಿ, ಶರಣಪ್ಪ ಗೋಣಿ, ಸಿದ್ದಪ್ಪ ಶಿರಗುಂಪಿ, ಶಂಕರ ಭಾವಿಮನಿ, ಚಂದ್ರು ಮರದಡ್ಡಿ ಇತರರು ಇದ್ದರು.