Advertisement

ಕಲುಷಿತ ಗಾಳಿ ಮುಂಜಾಗ್ರತೆ ಅಗತ್ಯ

09:34 PM Oct 28, 2019 | mahesh |

ಮನುಷ್ಯನಿಗೆ ಬದುಕಲು ಶುದ್ಧ ನೀರು, ಶುದ್ಧ ಆಹಾರ, ಶುದ್ಧ ಗಾಳಿ ಅತೀ ಅಗತ್ಯ. ಆದರೆ ಇಂದು ಪರಿಸರ ನಾಶದಿಂದಾಗಿ ಕುಡಿಯುವ ನೀರು, ಸೇವಿಸುವ ಆಹಾರ, ಉಸಿರಾಡುವ ಗಾಳಿ ಎಲ್ಲವೂ ಕಲುಷಿತಗೊಂಡಿದೆ. ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಇಂದು ಅನೇಕ ಆರೋಗ್ಯ ಸಮಸ್ಯೆಗಳು ಮಾನವನನ್ನು ಎಡೆಬಿಡದೇಕಾಡುತ್ತಿದೆ.

Advertisement

ಜನರ ನಿರೀಕ್ಷೆ ಗಳು, ಆಸೆಗಳು ಹೆಚ್ಚಾಗುತ್ತಿದ್ದಂತೆ ಪರಿಸರದ ಮೇಲಿನ ದಾಳಿಗಳು ಹೆಚ್ಚಾಗುತ್ತಿದೆ. ಕಟ್ಟಡಗಳ ನಿರ್ಮಾಣಕ್ಕಾಗಿ ಪರಿಸರ ನಾಶ, ಐಷಾರಾಮಿ ಜೀವನಕ್ಕಾಗಿ ನಮ್ಮ ವಾತಾವರಣವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಹವಾಮಾನ ಬದಲಾಗಿದೆ. ಉಸಿರಾಟಕ್ಕೆ ಅಡಚಣೆಯುಂಟಾಗಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ನಮ್ಮೆಲ್ಲರ ನಡುವಳಿಕೆಯಿಂದ ನಮ್ಮದೇ ಆರೋಗ್ಯಕ್ಕೆ ಕುತ್ತುಬರುವಂತಾಗಿದೆ.

ಪರಿಸರ ಮಾಲಿನ್ಯಗಳಲ್ಲಿ ಪ್ರಮುಖವಾದುದು ವಾಯುಮಾಲಿನ್ಯ. ವಾಯುಮಾಲಿನ್ಯದಿಂದಾಗಿ ಜಗತ್ತಿನಲ್ಲಿ ಸುಮಾರು 30 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ನೀರು ಕಲುಷಿತವಾದ್ದಲ್ಲಿ ಶುದ್ಧ ಕುಡಿಯುವ ನೀರನ್ನು ಖರೀದಿಸಿ ಕುಡಿಯಬಹುದು. ಆದರೆ ಶುದ್ಧ ಗಾಳಿಯನ್ನು ಖರೀದಿಸುವುದು ಎಲ್ಲಿಂದ ಎಂಬ ಪ್ರಶ್ನೆಯನ್ನು ಎಲ್ಲರೂ ಹಾಕಿಕೊಳ್ಳಬೇಕಾಗಿದೆ.

ವಾಯು ಮಾಲಿನ್ಯ ದಿಂದ ಹಲವು ಸಮಸ್ಯೆಗಳು
ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗಗಳಲ್ಲೂ ಹೆಚ್ಚಾಗುತ್ತಿದೆ. ಇದರಿಂದಾಗಿ ಉಸಿರಾಟದ ತೊಂದರೆ, ಕಣ್ಣಿಗೆ ಕಿರಿಕಿರಿ, ಚರ್ಮರೋಗಗಳಿಗೂ ಕಾರಣವಾಗಿದೆ. ಒಟ್ಟಾರೆ, ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಇಂಗಾಲ, ಗಂಧಕ ಇತ್ಯಾದಿಗಳ ಹಾವಳಿ ಹೆಚ್ಚಾಗುತ್ತಿದೆ. ಇಡೀ ಪರಿಸರದ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದರೂ ನಾವೇನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೇವೆ. ದಿನೇದಿನೇ ಹೆಚ್ಚುತ್ತಿರುವ ವಾಹನಗಳು, ಅಡಿಗೆಗೆ ಇಂಧನಗಳ ಬಳಕೆ ಇತ್ಯಾದಿಯಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಎಲ್ಲರಿಗೂ ರಸ್ತೆ ಬದಿಯಲ್ಲೇ ಮನೆ ಮಾಡಬೇಕು. ನಗರ ಪ್ರದೇಶವಾದರೂ ವಾಹನಗಳ ಕಿರಿಕಿರಿ ಇದ್ದರೆ ನಮ್ಮ ದೈನಂದಿನ ಓಡಾಟಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಅಲ್ಲೇ ಮನೆ, ಅಪಾರ್ಟ್‌ಮೆಂಟ್‌ಗಳ ಖರೀದಿ ಮಾಡಲಾಗುತ್ತದೆ. ಇದರಿಂದ ರಸ್ತೆ ಧೂಳು, ವಾಹನದ ಹೊಗೆಗಳಿಂದ ವಾಯುಮಾಲಿನ್ಯವಾಗುವುದರ ಜತೆಗೆ ಆರೋಗ್ಯ ಕೆಡುತ್ತದೆ. ಬೆಳಗ್ಗೆ ಹಾಗೂ ಸಂಜೆ ತಂಪಾಗಿರುವುದರಿಂದ, ವಾಹನಗಳು ಉಗುಳಿದ ವಿಷ ಅನಿಲ ತುಂಬಿದ ಗಾಳಿ ಸುಲಭದಲ್ಲಿ ಮೇಲಕ್ಕೆ ಏರದೆ, ಮಾಲಿನ್ಯ ಕೆಳ ಮಟ್ಟದಲ್ಲೇ ಹರಡುತ್ತಿರುತ್ತದೆ. ಈ ಹೊತ್ತಿನಲ್ಲೇ ಮನೆಗಳ ಒಳಗೆ ಮಲಿನಯುಕ್ತ ಗಾಳಿ ಪ್ರವೇಶವಾಗುತ್ತದೆ. ಈ ಬಗ್ಗೆ ಬಹುತೇಕ ಮಂದಿಗೆ ಅರಿವಿರುವುದಿಲ್ಲ ಇದರಿಂದಾಗಿಯೇ ಹಲವು ರೋಗಗಳು ದೇಹ ಸೇರಿಕೊಂಡು ತೊಂದರೆಯನ್ನುಂಟು ಮಾಡುತ್ತದೆ.

ವಾಯುಮಾಲಿನ್ಯದಿಂದ ಆರೋಗ್ಯ ಸಮಸ್ಯೆ
ತಂಬಾಕು ಸೇವನೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಬಹಳ ಕೆಟ್ಟದ್ದು. ವೈದ್ಯರು, ಆರೋಗ್ಯ ಕಾಳಜಿ ಮಾಡುವವರು ತಂಬಾಕು ಸೇವನೆ ಮಾಡದಂತೆ ಎಚ್ಚರಿಸುತ್ತಾರೆ. ಆದರೆ ವಾಯುಮಾಲಿನ್ಯದ ದುಷ್ಪಾರಿಣಾಮ ಇದಕ್ಕಿಂತ ಕಡಿಮೆ ಏನೂ ಇಲ್ಲ. ನಿತ್ಯ ಸೇವಿಸುವ ವಿಷಯುಕ್ತ ಗಾಳಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಯುಮಾಲಿನ್ಯದಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಖಾಯಿಲೆ, ಮೆದುಳು ಸಂಬಂಧಿ ರೋಗಗಳು, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌ ಆವರಿಸುವ ಸಾಧ್ಯತೆ ಇದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಶುದ್ಧ ನೀರು, ಆಹಾರ ಸೇವಿಸುವುದರ ಜತೆಗೆ ಶುದ್ಧ ಗಾಳಿ ಸೇವನೆಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ.

Advertisement

ವಾಯುಮಾಲಿನ್ಯ ತಡೆಗೆ ಒಟ್ಟಾಗಿ ಪಣ
ಒಂದಿಬ್ಬರಿಂದ ಅಥವಾ ಒಂದು ತಂಡದಿಂದ ಪರಿಸರದ ಮೇಲಾಗುತ್ತಿರುವ ದಾಳಿಯನ್ನು ಕಡಿಮೆಮಾಡಲು ಸಾಧ್ಯವಿಲ್ಲ. ಎಲ್ಲರೂ ಸ್ವ ಇಚ್ಚೆಯಿಂದ ಪರಿಸರವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ. ಅದರಲ್ಲೂ ವಾಯುಮಾಲಿನ್ಯ ಹೆಚ್ಚಾಗದಂತೆ ತಡೆಯಲು ಒಟ್ಟಾಗಿ ಪಣ ತೊಡಬೇಕಾಗಿದೆ. ಕೈಗಾರಿಕೆಗಳಿಂದ ಹೊರ ಹೋಗುವ ವಿಷಯುಕ್ತ ಗಾಳಿಯನ್ನು ಸಂಸ್ಕರಿಸುವ ಬಗ್ಗೆ ಯೋಜನೆ ರೂಪಿಸಬೇಕು. ವಾಹನ ದಟ್ಟಣೆಯನ್ನು ಕಡಿಮೆ ಮಾಡುವಂತೆ ಸಾರ್ವಜನಿಕ ವಾಹನ ಬಳಕೆ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಸೇರಿದಂತೆ ವಾಯುಮಾಲಿನ್ಯ ವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು.

ವಾಯುಮಾಲಿನ್ಯಕ್ಕೆ ಕಾರಣಗಳು
ಜನರ ದೈನಂದಿನ ಚಟುವಟಿಕೆ ಗಳಿಂದಲೇ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದರ ಜತೆಗೆ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತದೆ ಎಂಬುದು ತಿಳಿದರೂ ನಮ್ಮ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಬಗ್ಗೆ ಯಾರೂ ಯೋಚಿಸುವುದಿಲ್ಲ. ಭೂಮಿಯ ಮೇಲ್ಮೈಗೆ ರಾಸಾಯನಿಕಗಳು, ಕಸಕಡ್ಡಿಗಳು ಚೆಲ್ಲುವುದು, ಮೋಟಾರು ವಾಹನಗಳು ಹೊಗೆ, ಪೈಂಟ್‌, ಸಿಂಪಡಣೆ, ವಾರ್ನಿಷ್‌ ಇತರ ದ್ರಾವಣಗಳಿಂದ ಹೊರಹೊಮ್ಮುವ ಅನಿಲ, ಮಿಥೇನ್‌, ವಿಷಕಾರಿ ಅನಿಲಗಳು, ರೋಗಾಣು, ಹಬ್ಬ ಹರಿದಿನಗಳಲ್ಲಿ ಸುಡುವ ಪಟಾಕಿ, ಸಿಡಿಮದ್ದುಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳು.

ವಾಯುಮಾಲಿನ್ಯಕ್ಕೆ ಕಾರಣಗಳು
ಜನರ ದೈನಂದಿನ ಚಟುವಟಿಕೆ ಗಳಿಂದಲೇ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದರ ಜತೆಗೆ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತದೆ ಎಂಬುದು ತಿಳಿದರೂ ನಮ್ಮ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಬಗ್ಗೆ ಯಾರೂ ಯೋಚಿಸುವುದಿಲ್ಲ. ಭೂಮಿಯ ಮೇಲ್ಮೈಗೆ ರಾಸಾಯನಿಕಗಳು, ಕಸಕಡ್ಡಿಗಳು ಚೆಲ್ಲುವುದು, ಮೋಟಾರು ವಾಹನಗಳು ಹೊಗೆ, ಪೈಂಟ್‌, ಸಿಂಪಡಣೆ, ವಾರ್ನಿಷ್‌ ಇತರ ದ್ರಾವಣಗಳಿಂದ ಹೊರಹೊಮ್ಮುವ ಅನಿಲ, ಮಿಥೇನ್‌, ವಿಷಕಾರಿ ಅನಿಲಗಳು, ರೋಗಾಣು, ಹಬ್ಬ ಹರಿದಿನಗಳಲ್ಲಿ ಸುಡುವ ಪಟಾಕಿ, ಸಿಡಿಮದ್ದುಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳು.

-ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next