Advertisement

ಕಂಟೈನ್‌ಮೆಂಟ್‌ ವ್ಯಾಪ್ತಿ ಸಡಿಲಿಕೆಗೆ ವ್ಯಕ್ತವಾಗಿದೆ ಆತಂಕ

09:40 AM May 13, 2020 | Sriram |

ಬೆಂಗಳೂರು: ಕೇಂದ್ರದ ಹೊಸ ಮಾರ್ಗಸೂಚಿಯಂತೆಯೇ ಕಂಟೈನ್‌ಮೆಂಟ್‌ ಪ್ರದೇಶವನ್ನು ಮರು ವ್ಯಾಖ್ಯಾನಿಸಿ ನಿರ್ಬಂಧಿತ ವ್ಯಾಪ್ತಿಯನ್ನು ಕುಗ್ಗಿಸುವ ಬಗ್ಗೆ ಸರಕಾರದ ಟಾಸ್ಕ್ ಫೋರ್ಸ್‌ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಆದರೆ ಇದು ತಜ್ಞರ ವಲಯದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಆರೋಗ್ಯ ಸಚಿವ ಶ್ರೀರಾಮುಲು ಅಧ್ಯಕ್ಷತೆಯ ಸಮಿತಿ ಈ ಬಗ್ಗೆ ಕ್ರಿಯಾ ಯೋಜನೆ ಸಿದ್ಧ ಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ. ಕೇಂದ್ರದ ಅನುಮೋದನೆ ದೊರೆತ ರಷ್ಟೇ ಇದು ಜಾರಿಯಾಗಲಿದೆ. ಆದರೆ ಕಂಟೈನ್‌ಮೆಂಟ್‌ ವ್ಯಾಪ್ತಿಯನ್ನು ಏಕಾಏಕಿ ಇಳಿಕೆ ಮಾಡಿದರೆ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಂತಾಗಬಹುದು ಎಂಬ ಆತಂಕ ತಜ್ಞರದು.

ಕೇಂದ್ರ ಸರಕಾರವು ಇತ್ತೀಚೆಗೆ ಹೊರಡಿಸಿರುವ ಮಾರ್ಗಸೂಚಿ ಲಘು ಪ್ರಮಾಣದ ಸೋಂಕು ಪೀಡಿತರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡುವ ಮತ್ತು ಗಂಭೀರ ಪ್ರಕರಣಗಳನ್ನು ಮಾತ್ರ ಆಸ್ಪತ್ರೆಗೆ ಶಿಫಾರಸು ಮಾಡ ಬೇಕು ಎಂದು ತಿಳಿಸಿದೆ.ಈ ಅಂಶವನ್ನೇ ಆಧಾರ ವಾಗಿಟ್ಟು  ಕಂಟೈನ್‌ಮೆಂಟ್‌ ನಿರ್ಬಂಧ ವ್ಯಾಪ್ತಿಯನ್ನು ಸೋಂಕುಪೀಡಿತ ವ್ಯಕ್ತಿಯ ಮನೆಗಷ್ಟೇ ಸೀಮಿತ ಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.

ಸೋಂಕು ಪೀಡಿತರು ಪತ್ತೆಯಾದ ಕಡೆ ಮನೆ ಇಲ್ಲವೇ ಕಟ್ಟಡದ ವ್ಯಾಪ್ತಿಗೆ ಮಾತ್ರ ಕಂಟೈನ್‌ಮೆಂಟ್‌ ವಲಯ ಸೀಮಿತಗೊಳಿಸುವುದರಿಂದ ಸುತ್ತಮುತ್ತಲ ನಿವಾಸಿಗಳು, ಆ ಪ್ರದೇಶದ ಜನರಿಗೆ ತೊಂದರೆ ತಪ್ಪಿಸಿದಂತಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಕಂಟೈನ್‌ಮೆಂಟ್‌ ವ್ಯಾಪ್ತಿಯನ್ನು ಕುಗ್ಗಿಸಿದರೆ ಗಂಭೀರ ಸಮಸ್ಯೆ ತಲೆದೋರಬಹುದು ಎಂಬ ಆತಂಕ ತಜ್ಞರದು. ಹಾಗಾಗಿ ಸದ್ಯದ ಕಂಟೈನ್‌ಮೆಂಟ್‌ ವ್ಯಾಪ್ತಿಯಲ್ಲೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯ ಹಿರಿಯ ಸಚಿವರಿಂದಲೇ ಬಂದಿದೆ.

ಎಚ್ಚರ ತಪ್ಪಿದರೆ ಅಪಾಯ
ಲಾಕ್‌ಡೌನ್‌,ಕಂಟೈನ್‌ಮೆಂಟ್‌,ಸೀಲ್‌ಡೌನ್‌ ಮತ್ತಿತರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸದ್ಯ ಸೋಂಕು ನಿಯಂತ್ರಣ ದಲ್ಲಿದೆ. ಇದನ್ನೇ ಧನಾತ್ಮಕವಾಗಿ ಪರಿಗಣಿಸಿ ಕಂಟೈನ್‌ಮೆಂಟ್‌ ವ್ಯಾಪ್ತಿ ಕುಗ್ಗಿಸಿದರೆ ಸಮಸ್ಯೆ ಮತ್ತೆ ಉಲ್ಬಣಿಸಿ ಗಂಭೀರ ಸ್ವರೂಪ ಪಡೆಯುವ ಅಪಾಯವಿದೆ ಎಂದು ಕೋವಿಡ್‌- 19ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿ  ಕೊಂಡಿರುವ ತಜ್ಞರು ಎಚ್ಚರಿಸಿದ್ದಾರೆ.

Advertisement

ನಿಯಂತ್ರಣದಲ್ಲಿದೆ ಎನ್ನುತ್ತಿರುವಾಗಲೇ ಸೋಂಕುಪೀಡಿತರ ಪ್ರಮಾಣ ಹೆಚ್ಚುತ್ತಿದೆ.ಜೂನ್‌ ಅಂತ್ಯದ ವರೆಗೂ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುವ ಲಕ್ಷಣ ಕಾಣುತ್ತಿದ್ದು, ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.

ಪರಿಸ್ಥಿತಿಗೆ ಅನುಗುಣ ಜಾರಿ
ಕೇಂದ್ರ ಸರಕಾರವು ರಾಷ್ಟ್ರವ್ಯಾಪಿ ಪರಿಸ್ಥಿತಿ ಅವಲೋಕಿಸಿ ಮಾರ್ಗಸೂಚಿ ಪರಿಷ್ಕರಿಸುತ್ತಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅವುಗಳನ್ನು ಜಾರಿಗೊಳಿಸುವುದು ಮುಖ್ಯ. ಕೇಂದ್ರದ ಹೊಸ ಮಾರ್ಗ ಸೂಚಿಯಂತೆ ಲಘು ಸೋಂಕುಪೀಡಿತ ಪ್ರಕರಣದಲ್ಲಿ ಸೋಂಕುಪೀಡಿತರನ್ನು ಮನೆ ಯಲ್ಲೇ ದಿಗ್ಬಂಧನಕ್ಕೆ ಒಳಪಡಿಸಲು ಅವಕಾಶವಿದೆ. ಆದರೆ ಬಡವರು,ಮಧ್ಯಮ ವರ್ಗದವರು,ಕೊಳೆಗೇರಿ ನಿವಾಸಿಗಳಲ್ಲಿ ಸೋಂಕು ಕಾಣಿಸಿ ಕೊಂಡರೆ ಅವರ ಮನೆ ಗಳಲ್ಲಿ ಪ್ರತ್ಯೇಕವಾಗಿ ಇರಿಸುವಷ್ಟು ಸ್ಥಳಾವಕಾಶ ವಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಸೋಂಕು ವ್ಯಾಪಕವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next