ಪಿರಿಯಾಪಟ್ಟಣ: ತಾಲೂಕಿನ ನೆರೆ ಹಾವಳಿಯಿಂದ ಹಾನಿಗೊಳಗಾದ ಯಾರಾದರೂ ಸಂತ್ರಸ್ತರ ಹೆಸರು ಬಿಟ್ಟು ಹೋಗಿದ್ದರೆ ನೇರವಾಗಿ ತಮ್ಮನ್ನು ಸಂಪರ್ಕಿಸಿ ಎಂದು ಶಾಸಕ ಕೆ. ಮಹದೇವ್ ಮನವಿ ಮಾಡಿದರು. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಹಾಗೂ ದುರಸ್ತಿ ಕಾಮಗಾರಿಗೆ ಆದೇಶ ಪತ್ರ ನೀಡಿ ಅವರು ಮಾತನಾಡಿದರು.
ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ 5 ಲಕ್ಷ ರೂ. ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ 50 ಸಾವಿರ ರೂ. ಮತ್ತು ಅಲ್ಪಸ್ವಲ್ಪ ಹಾನಿಯಾದ ಮನೆಗಳಿಗೆ 25 ಸಾವಿರ ರೂ. ನೀಡಲಾಗುತ್ತಿದೆ. ನೆರೆ ಸಂತ್ರಸ್ತರ ಹೆಸರು ಬಿಟ್ಟು ಹೋಗಿದ್ದರೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದರೆ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರವಾಹದಿಂದ ಜನರ ಜೀವನ ದುಸ್ತರವಾಗಿದ್ದು, ಮನೆ ಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ತಾಲೂಕಿನಲ್ಲಿ ಅತಿ ಹೆಚ್ಚು ನೆರೆ ಸಂಭವಿಸಿ, ಹಾನಿಗೀಡಾದ ಮನೆಗಳಿಗೆ ಹಾಗೂ ಗ್ರಾಮಗಳಿಗೆ ಖುದ್ದಾಗಿ ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿದ್ದೇನೆ.
ಈ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳ ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂತ್ರಸ್ತರಿಗೆ ಅಗತ್ಯ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ, ತಾಪಂ ಇಒ ಶ್ರುತಿ, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪಾ, ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ, ತಾಪಂ ಸದಸ್ಯರಾದ ರಾಮು, ರಂಗಸ್ವಾಮಿ, ಜಯಂತಿ ಸೋಮಶೇಖರ್, ಆರ್.ಎಸ್. ಮಹದೇವ್, ಮೋಹನ್ ರಾಜ್, ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.