ಮಂಗಳೂರು/ ಉಡುಪಿ: ಅತ್ಯಾಧುನಿಕ ತಂತ್ರಜ್ಞಾನದಿಂದ ಒಡಗೂಡಿದ ಗುಣಮಟ್ಟದ ಸೇವಾ ಬದ್ಧತೆಯೊಂದಿಗೆ ಕಾರ್ಪೊರೇಶನ್ ಬ್ಯಾಂಕ್ ಗ್ರಾಹಕ ಸಂತೃಪ್ತಿಯ ಧನ್ಯತೆಯನ್ನು ಹೊಂದಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜೈ ಕುಮಾರ್ ಗರ್ಗ್ ಹೇಳಿದರು.
ನಗರದಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬ್ಯಾಂಕಿನ 113ನೇ ಸಂಸ್ಥಾಪನ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿನ ಸಂಸ್ಥಾಪಕ,
ಮಹಾಮುತ್ಸದ್ಧಿ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹಾದ್ದೂರ್ ಅವರ ಆಶಯದಂತೆ ಅಭಿವೃದ್ಧಿ ಮತ್ತು ಸಾಮಾಜಿಕ ಸಶಕ್ತೀಕರಣದ ಧ್ಯೇಯದೊಂದಿಗೆ ಬ್ಯಾಂಕ್ ಪ್ರಗತಿಪಥದಲ್ಲಿ ಮುನ್ನಡೆಯುತ್ತಾ ಬಂದಿದೆ ಎಂದರು.
ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜೈ ಕುಮಾರ್ ಗರ್ಗ್, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ ಭಟ್, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಭಟ್, ಕಾರ್ಪೊರೇಶನ್ ಬ್ಯಾಂಕಿನ ಮಹಾಪ್ರಬಂಧಕ ಯು.ವಿ. ಕಿಣಿ, ಪ್ರಧಾನ ವಿಚಕ್ಷಣಾ ಅಧಿಕಾರಿ ಪಿ.ವಿ.ಬಿ.ಎನ್. ಮೂರ್ತಿ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.
ಮಹಾಪ್ರಬಂಧಕ ರಾಕೇಶ್ ಶ್ರೀವಾಸ್ತವ ವಂದಿಸಿ ದರು. ಚೇತನ್ ಹಾಗೂ ವಿನೂ ನಿರೂಪಿಸಿದರು.
ಉಡುಪಿಯಲ್ಲಿ: ಕಾರ್ಪ್ ಬ್ಯಾಂಕ್ ಉಡುಪಿ ವಲಯವು ಬ್ಯಾಂಕ್‌ನ 113ನೇ ಸ್ಥಾಪನಾ ದಿನವನ್ನು ಸೋಮವಾರ ಆಚರಿಸಿತು. ಆಡಳಿತ ನಿರ್ದೇಶಕ ಜೈ ಕುಮಾರ್ ಗರ್ಗ್ ಅವರು ಬ್ಯಾಂಕಿನ ಹೆರಿಟೇಜ್ ಮ್ಯೂಸಿಯಂ, ಹಾಜಿ ಅಬ್ದುಲ್ಲಾ ಸಾಹೇಬ್ ಭವನ ಹಾಗೂ ಸ್ಥಾಪಕರ ಶಾಖೆಗೆ ಭೇಟಿ ನೀಡಿ ಬ್ಯಾಂಕ್ ಸ್ಥಾಪಕಾಧ್ಯಕ್ಷ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹಾದ್ದೂರ್ ಪ್ರತಿಮೆ, ಭಾವಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸಿದರು. ಮುಖ್ಯ
ಕಾರ್ಯಾಲಯದ ಮಹಾ ಪ್ರಬಂಧಕರಾದ ಯು. ವಸಂತ ಕಿಣಿ, ರಾಕೇಶ್ ಶ್ರೀವಾತ್ಸವ್, ಉಪ ಮಹಾಪ್ರಬಂಧಕಿ, ವಲಯ ಮುಖ್ಯಸ್ಥೆ ಡೇಲಿಯಾ ಡಯಾಸ್, ಮುಖ್ಯ ಪ್ರಬಂಧಕರಾದ ಜಗದೀಶ್ ನಾಯಕ್ ಪಿ., ಶಿವರಾಮಕೃಷ್ಣನ್ ಉಪಸ್ಥಿತರಿದ್ದರು.
ಇ-ಪಾಸ್‌ಬುಕ್ ಬಿಡುಗಡೆ
ಕಾರ್ಪ್ ಬ್ಯಾಂಕ್ ಹೊಸದಾಗಿ ರೂಪಿಸಿರುವ “ಕಾರ್ಪ್ ಇ-ಪಾಸ್‌ಬುಕ್’ ಸೌಲಭ್ಯವನ್ನು ಬಿಡುಗಡೆ ಮಾಡಲಾಯಿತು. ಹೊಸ ಸೇರ್ಪಡೆಯಾಗಿರುವ ಇ-ಪಾಸ್‌ಬುಕ್ ಸೌಲಭ್ಯವನ್ನು ಪರಿಚಯಿಸಲು ಅತೀವ ಸಂತಸ ವಾಗುತ್ತಿದೆ ಎಂದು ಜೈ ಕುಮಾರ್ ಗರ್ಗ್ ಹೇಳಿದರು. ಡಿಜಿಎಂ ಶ್ರೀಧರ್ ಅವರು ಕಾರ್ಪ್ ಇ-ಪಾಸ್‌ಬುಕ್ ಬಗ್ಗೆ ವಿವರಿಸಿದರು.