ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಅಡಮಾನವಿರಿಸಿದ ಚಿನ್ನಾಭರಣ ಹರಾಜಿನ ಮಾಹಿತಿ ನೀಡದೆ ಹರಾಜು ಮಾಡಿದ್ದು, ಇದರಿಂದ ಹೆಂಡತಿ ತನ್ನ ಮನೆ ಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ. ಬ್ಯಾಂಕ್‌ನ ನಿರ್ಲಕ್ಷ್ಯ ಹಾಗೂ ಸೇವೆಯಲ್ಲಿ ನ್ಯೂನತೆಯನ್ನು ಪ್ರಶ್ನಿಸಿ ಪತಿ ಗ್ರಾಹಕ ನ್ಯಾಯಾಲಯದ ಕದ ತಟ್ಟಿದ್ದಾರೆ. ಬ್ಯಾಂಕ್ ಲೋಪ ಎಸಗಿರುವುದು ಸಾಬೀತಾಗಿರುವುದರಿಂದ ಬ್ಯಾಂಕ್‌ಗೆ 1.10 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕೋಲ್ಕತಾ ಮೂಲದ ವ್ಯಕ್ತಿಯೊಬ್ಬರು 2019ರಿಂದ ನಗರದ ಶಾಂತಿಕೇತನ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಇವರ ಬ್ಯಾಂಕ್ ಖಾತೆ ಕೋಲ್ಕತಾದ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಇದೆ. ಅದೇ ಖಾತೆಯಿಂದ ಗೃಹ ಸಾಲವನ್ನು ಪಡೆದಿದ್ದು, ಇದುವರೆಗೆ ಅದರ ಕಂತುಗಳನ್ನು ನಿರ್ದಿಷ್ಟ ದಿನಾಂಕದೊಳಗೆ ಪಾವತಿಸುತ್ತಿದ್ದರು. ಈ ನಡುವೆ 2019ರಲ್ಲಿ 84 ಗ್ರಾಂನ ಚಿನ್ನಾಭರಣದ ಮೇಲೆ 1.64 ಲಕ್ಷ ರೂ. ಸಾಲವನ್ನು ಪಡೆದುಕೊಂಡಿದ್ದಾರೆ.
ಆರೋಗ್ಯ ನಿಮಿತ್ತ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ. 2019ರಲ್ಲಿ ಉಳಿತಾಯ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಸಂವಹನ ನಡೆಸಲು ಅಗತ್ಯವಿರುವ ಫೋನ್ ನಂಬರ್ ಹಾಗೂ ವಿಳಾಸ ಬದಲಾಗಿರುವ ಕುರಿತು ಬ್ಯಾಂಕ್‌ಗೆ ಇ-ಮೇಲ್ ಮಾಡಿದ್ದು, ಜತೆಗೆ ಸಂಬಂಧಪಟ್ಟ ದಾಖಲೆಗಳನ್ನು ಇ-ಮೇಲ್ ಮೂಲಕವೇ ರವಾನಿಸಿದ್ದಾರೆ. ಇಷ್ಟೆಲ್ಲ ಮಾಹಿತಿ ಆಪ್‌ಡೇಟ್ ಮಾಡಿದ ಮೇಲೂ ಬ್ಯಾಂಕ್ ಯಾವುದೇ ಮಾಹಿತಿ ನೀಡದೇ 2020ರಲ್ಲಿ ಚಿನ್ನಾಭರಣಗಳನ್ನು ಹರಾಜು ಹಾಕಿದೆ. ಬ್ಯಾಂಕ್‌ನ ಈ ಧೋರಣೆ ಪ್ರಶ್ನಿಸಿ ವ್ಯಕ್ತಿಯು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಬ್ಯಾಂಕ್ ಹರಾಜು ಮಾಡಿರುವ ಚಿನ್ನಾಭರಣಗಳನ್ನು ಮದುವೆ ಸಂದರ್ಭದಲ್ಲಿ ಹೆಂಡತಿಗೆ ತವರು ಮನೆಯಿಂದ ಹಾಕಿದ್ದು, ಇದರೊಂದಿಗೆ ಅವರು ಭಾವನಾತ್ಮಕವಾದ ಸಂಬಂಧ ಬೆಳೆಸಿಕೊಂಡಿದ್ದಾರೆ. ಹೆಂಡತಿ ತಾಯಿ ಮನೆಯಲ್ಲಿ ಹಾಕಿರುವ ಚಿನ್ನಾಭರಣ ತರದೇ, ಮನೆ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಅದೇ ರೀತಿಯಾದ ಆಭರಣಗಳನ್ನು ಖರೀದಿಸಲು ಸಾಕಷ್ಟು ಕಡೆಯಲ್ಲು ಹುಡುಕಿದ್ದರೂ ದೊರಕಿಲ್ಲ. ಇದು ಅತ್ಯಂತ ಅಪರೂಪ ವಿನ್ಯಾಸದ ಆಭರಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪರಿಹಾರ ಕೋರಿಕೆ : ಬ್ಯಾಂಕ್ ಕಳುಹಿಸಿರುವ ನೋಟಿಸ್ ಕೈಸೇರಿಲ್ಲ. ಹಳೆಯ ವಿಳಾಸಕ್ಕೆ ಹೋಗಿದೆ. ಬ್ಯಾಂಕ್‌ನ ಸೇವಾ ಲೋಪದಿಂದ ಹೆಂಡತಿಯ ಕೋಪ ಗುರಿಯಾಗಿದ್ದೇನೆ. ಜತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ 5 ಲಕ್ಷ ರೂ. ಪರಿಹಾರ ಹಾಗೂ ಚಿನ್ನಾಭರಣ ಪ್ರಸ್ತುತ ಮಾರುಕಟ್ಟೆ ದರ ಅಂದರೆ ಸುಮಾರು 3.94 ಲಕ್ಷ ರೂ. ಪರಿಹಾರ ಸೇರಿದಂತೆ ಒಟ್ಟು 8.94 ಲಕ್ಷ ಕೋರಿದ್ದಾರೆ.
ನೋ-ಇ ಮೇಲ್ ಅಪ್‌ಡೇಟ್: ಸಾಮಾನ್ಯವಾಗಿ ಸೈಬರ್ ವಂಚನೆಯಾಗುತ್ತದೆ ಎನ್ನುವ ಕಾರಣಕ್ಕೆ ಇಮೇಲ್ ಆಪ್‌ಡೇಟ್ ಮಾಡುವುದಿಲ್ಲ. ಇದರಲ್ಲಿ ಯಾವುದೇ ಸೇವಾ ನ್ಯೂನತೆಯಾಗಿಲ್ಲ. ಲೋನ್ ಸಂದರ್ಭದಲ್ಲಿ ನೀಡಿದ ವಿಳಾಸಕ್ಕೆ ಪತ್ರವನ್ನು ಕಳುಹಿಸಲಾಗಿದೆ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹರಾಜು ಮಾಡಲಾಗಿದೆ ಎಂದು ಬ್ಯಾಂಕ್ ಪರವಾಗಿ ವಕೀಲರು ವಾದ ಮಂಡನೆ ಮಾಡಿದ್ದಾರೆ.
5.5 ಲಕ್ಷ ರೂ. ಪಾವತಿ ತೀರ್ಪು: ಎರಡು ಕಡೆಯ ವಾದ ಪರಿಶೀಲನೆ ನಡೆಸಿದ ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯ ಆಯೋಗವು, ಬ್ಯಾಂಕ್ ಸೇವೆಯಲ್ಲಿ ಸೇವಾ ನ್ಯೂನತೆಯಾಗಿದೆ. ಗ್ರಾಹಕರ ಚಿನ್ನಾಭರಣಕ್ಕೆ ಸಮನಾದ ಮೌಲ್ಯ ಅಂದರೆ 3.94 ಲಕ್ಷ ರೂ., ಪರಿಹಾರ 1 ಲಕ್ಷ ರೂ. ಹಾಗೂ ವ್ಯಾಜ್ಯ ಬಾಬ್ತು 10 ಸಾವಿರ ರೂ. ಸೇರಿದಂತೆ ಒಟ್ಟು 5.5 ಲಕ್ಷ ರೂ.ವನ್ನು ಪಾವತಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.