Advertisement

ಬ್ಯಾಂಕ್‌ ಮುಷ್ಕರದಿಂದ ಗ್ರಾಹಕರ ಪರದಾಟ

12:10 PM Aug 23, 2017 | |

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಹಾಗೂ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ನೌಕರರು ಮಂಗಳವಾರ ಒಂದು ದಿನದ ಮಟ್ಟಿಗೆ ಬ್ಯಾಂಕ್‌ ವಹಿವಾಟು ಸ್ಥಗಿತಗೊಳಿಸಿದ್ದರಿಂದ ಗ್ರಾಹಕರು ಪರದಾಡಬೇಕಾಯಿತು.

Advertisement

ಕೇಂದ್ರ ಸರ್ಕಾರವು ಬ್ಯಾಂಕಿಂಗ್‌ ವಲಯದಲ್ಲಿ ಜನವಿರೋಧಿ ನೀತಿಗಳನ್ನು ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ವಿಲೀನ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದೆ. ಇದನ್ನು ವಿರೋಧಿಸಿ “ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯುನಿಯನ್‌’ ದೇಶವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿತ್ತು. ಕರ್ನಾಟಕದ ಬಹುತೇಕ ಬ್ಯಾಂಕ್‌ ನೌಕರರು ಇದಕ್ಕೆ ಬೆಂಬಲ ಸೂಚಿಸಿ ವಹಿವಾಟು ಸ್ಥಗಿತಗೊಳಿಸಿದ್ದರು. ಇದರಿಂದ ಗ್ರಾಹಕರಿಗೆ ಸಾಕಷ್ಟು ಸಮಸ್ಯೆಯಾಗಿದೆ.

ಬ್ಯಾಂಕ್‌ ಬಂದ್‌ ಇರುವ ಮಾಹಿತಿ ಇಲ್ಲದ ಅನೇಕರು ಬ್ಯಾಂಕ್‌ ವರೆಗೂ ಹೋಗಿ ವಾಪಾಸ್‌ ಬಂದಿದ್ದಾರೆ. ಇನ್ನು ಕೆಲವು ಬ್ಯಾಂಕ್‌ಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಗ್ರಾಹಕರಿಗೆ ಹಣದ ವಹಿವಾಟಿನ ವ್ಯವಸ್ಥೆ ಮಾಡಿಕೊಡಲಿಲ್ಲ.

ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬ್ಯಾಂಕ್‌ ನೌಕರರು, ಕೇಂದ್ರ ಸರ್ಕಾರದ ಜನವಿರೋಧಿ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ 90 ಸಾವಿರಕ್ಕೂ ಅಧಿಕ ನೌಕರರು ಪಾಲ್ಗೊಂಡಿದ್ದರು.

ಕಾರ್ಪೊರೇಟ್‌ ವಲಯದ ಸುಸ್ತಿ ಸಾಲಗಳು ಹೆಚ್ಚುತ್ತಿವೆ. ಗ್ರಾಹಕರ ಮೇಲೆ ಹೆಚ್ಚುವರಿ ಸೇವಾ ಶುಲ್ಕವನ್ನು ಹೇರಲಾಗುತ್ತಿದೆ. ಜನರ ಉಳಿತಾಯ ಖಾತೆಯ ಹಣಕ್ಕೆ ಅತಿ ಕಡಿಮೆ ಬಡ್ಡಿ ನೀಡಲಾಗುತ್ತಿದೆ. ಸುಸ್ತಿ ಸಾಲಗಳ ವಸೂಲಿಗೆ ಸಂಸತ್‌ ನೇಮಿಸಿರುವ ಸಮಿತಿಯ ಶಿಫಾರಸುಗಳನ್ನು ತಕ್ಷಣ ಜಾರಿ ಮಾಡಬೇಕು. ವಸೂಲಾಗದ ಸಾಲಗಳ ಮರು ಪಾವತಿಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್‌ ಯೂನಿಯನ್‌ ಸಂಚಾಲಕ ವಸಂತ ರೈ ಆಗ್ರಹಿಸಿದರು.

Advertisement

ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಖಾಲಿ ಹುದ್ದೆಗೆ ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಬೇಕು. ಈಗ ಇರುವ ಬ್ಯಾಂಕ್‌ ನೌಕರರ ಮೇಲೆ ಒತ್ತಡ ಹೆಚ್ಚುತ್ತಿದೆ.ಬ್ಯಾಂಕ್‌ಗಳಿಗೆ ಬೇಕಿರುವಷ್ಟು ಬಂಡವಾಳವನ್ನು ಸರ್ಕಾರ ಪೂರೈಸುತ್ತಿಲ್ಲ. ಇದರಿಂದ ಬ್ಯಾಂಕ್‌ಗಳ ವಿಸ್ತರಣೆಗೆ ಹಿನ್ನೆಡೆಯಾಗುತ್ತಿದೆ. ಕಾರ್ಪೊರೇಟ್‌ ವಲಯಕ್ಕೆ ಹೆಚ್ಚು ಒತ್ತು ನೀಡುವುದನ್ನು ನಿಲ್ಲಿಸಬೇಕು ಹಾಗೂ ಖಾಸಗಿ ಮತ್ತು ಸಣ್ಣ ಬ್ಯಾಂಕುಗಳ ಸ್ಥಾಪನೆಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.

ಇಂದು ನಾಳೆ ಒತ್ತಡ 
ಗೌರಿ ಗಣೇಶ ಹಬ್ಬಕ್ಕೆ ಎರಡೇ ದಿನ ಇರುವಾಗ ಬ್ಯಾಂಕ್‌ ನೌಕರರು ಪ್ರತಿಭಟನೆ ಮಾಡಿರುವುದರಿಂದ ಬುಧವಾರ ಅಥವಾ ಗುರುವಾರ ಬ್ಯಾಂಕ್‌ನಲ್ಲಿ ಒತ್ತಡ ಹೆಚ್ಚಿರುತ್ತದೆ. ಸರ್ವರ್‌ ಸಮಸ್ಯೆಯಿಂದ ಹಣ ಜಮಾ ಆಗದೇ ಉಳಿಯುವ ಸಾಧ್ಯಯೂ ಇರುತ್ತದೆ. ಬಂದ್‌ನಿಂದಾಗಿ ನಿತ್ಯ ಬ್ಯಾಂಕ್‌ ವಹಿವಾಟು ಮಾಡುವವರಿಗೂ ತೊಂದರೆ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next