ಕಲಬುರಗಿ: ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಸುವ ಯಾವುದೇ ವಸ್ತು ಹಾಗೂ ಮನೆ ಗ್ರಾಹಕರ ವೇದಿಕೆ ವ್ಯಾಪ್ತಿಗೆ ಬರುತ್ತದೆ ಎಂದು ಕಲಬುರಗಿ ಹೈಕೋರ್ಟ್ ಸರ್ಕಾರಿ ಅಭಿಯೋಜಕಿ ಅರ್ಚನಾ ತಿವಾರಿ ಹೇಳಿದರು.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹಮ್ಮಿಕೊಂಡಿದ್ದ ಗ್ರಾಹಕರಿಗೆ ತಿಳಿವಳಿಕೆ, ಸಂರಕ್ಷಣೆ ಹಾಗೂ ಪರಿಹಾರ ಕುರಿತ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಬಿಲ್ಡರ್ಸ್‌ಗಳಿಂದ ಖರೀದಿಸಿದ ಜಾಗೆಯಲ್ಲಿ ಅವರು ಮನೆ ನಿರ್ಮಿಸಿಕೊಡದಿದ್ದರೆ ಅವರ ವಿರುದ್ಧವೂ ಗ್ರಾಹಕರ ವೇದಿಕೆಗೆ ದೂರು ನೀಡಿದರೆ ನ್ಯಾಯ ದೊರಕಿಸಿಕೊಡಲಾಗುವುದು ಎಂದರು. ಬಿಲ್ಡರ್ಸ್‌ಗಳಿಂದ ಮನೆ ಖರೀದಿಸುವವರು ಕಂತುಗಳಲ್ಲಿ ನಿಗದಿತ ಸಮಯದಲ್ಲಿ ಹಣ ಪಾವತಿಸಿರಬೇಕು.
ಅಗತ್ಯ ದಾಖಲೆಗಳೊಂದಿಗೆ ಗ್ರಾಹಕರ ವೇದಿಕೆ ದೂರು ಸಲ್ಲಿಸಬೇಕು. ಮಾರುಕಟ್ಟೆಯಲ್ಲಿ ನಿಗದಿತ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡದೇ ಇದ್ದಲ್ಲಿ, ಅಂತಹವರ ವಿರುದ್ದ ಗ್ರಾಹಕರ ವೇದಿಕೆಗೆ ದೂರು ನೀಡಿದಲ್ಲಿ ನ್ಯಾಯ ನೀಡಲಾಗುವುದು ಎಂರು ಹೇಳಿದರು.
ಸಣ್ಣಪುಟ್ಟ ಅನ್ಯಾಯದ ವಿರುದ್ದ ಗ್ರಾಹಕರ ವೇದಿಕೆಗೆ ದೂರು ನೀಡಲು ಆಗದಿದ್ದರೆ, ಗ್ರಾಹಕರ ಸಂಘದ ಮೂಲಕ ದೂರು ಸಲ್ಲಿಸಿ ಎಂದು ಸಲಹೆ ನೀಡಿದರು. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಜಿಲ್ಲಾಧ್ಯಕ್ಷ ಮಾರುತಿ ಕೆ. ಪವಾರ ಉದ್ಘಾಟಿಸಿದರು. ಅತಿಥಿಯಾಗಿ ಸಂಸ್ಥೆ ಕಾರ್ಯದರ್ಶಿ ಡಾ| ಬಿ.ಎಸ್.ಗುಳಶೆಟ್ಟಿ ಆಗಮಿಸಿದ್ದರು.
ಪ್ರಾಂಶುಪಾಲ ಪ್ರೊ| ಖಂಡೇರಾವ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಬಿರಾದಾರ, ವಿಶ್ವನಾಥ ಎಕ್ಕಳ್ಳಿ, ಬಾಲಚಂದ್ರ ಭಾಗವಹಿಸಿದ್ದರು. ಪ್ರೀತಮ ಪ್ರಾರ್ಥನಾ ಗೀತೆ ಹಾಡಿದರು, ಡಾ| ಭೀಮಣ್ಣ ಘನಾತೆ ಸ್ವಾಗತಿಸಿದರು, ಅಂಬಿಕಾ ಟೆಂಗಳಿ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.