Advertisement

Mangaluru: ಬಡ್ಡಿ ಸಹಿತ ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ಆದೇಶ

11:31 PM Sep 26, 2024 | Team Udayavani |

ಮಂಗಳೂರು: ನಿವೃತ್ತ ಶಿಕ್ಷಕಿಯೊಬ್ಬರು ತನ್ನ ಪಿಂಚಣಿ ಹಣವನ್ನು 5 ವರ್ಷದ ಅವಧಿಗೆ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಿ, ಅವಧಿಗೂ ಮುನ್ನವೇ ಹಿಂಪಡೆದ ವೇಳೆ ವಿನಾಕಾರಣ ಕಡಿತಗೊಳಿಸಿದ್ದ ಮೊತ್ತವನ್ನು ಬಡ್ಡಿ ಸಹಿತ ಅವರಿಗೆ ಮರು ಪಾವತಿಸುವಂತೆ ಮಂಗಳೂರು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಪ್ರಕರಣದ ಹಿನ್ನೆಲೆ
ಮಂಗಳೂರು ಮೂಲದ ನಿವೃತ್ತ ಶಿಕ್ಷಕಿ ರೀಟಾ ನೊರೋನ್ಹಾ ಅವರು ತನ್ನ ಪಿಂಚಣಿಯ ಹಣ 22 ಲಕ್ಷ ರೂ.ಯನ್ನು ಕಂಕನಾಡಿ ಅಂಚೆ ಕಚೇರಿಯಲ್ಲಿ 5 ವರ್ಷಗಳ ಅವಧಿಗೆ 2020ರ ಫೆ. 28ರಲ್ಲಿ ಜಮೆ ಮಾಡಿದ್ದರು. ಪ್ರತೀವರ್ಷ 1,74,355 ರೂ. ಬಡ್ಡಿ ಪಾವತಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ನಡುವೆ ಹಣಕಾಸಿನ ಅಡಚಣೆ ಎದುರಾದ ಸಂದರ್ಭದಲ್ಲಿ 2023ರ ಮೇ 18ರಂದು ಜಮೆ ಮಾಡಿದ ಹಣವನ್ನು ಹಿಂಪಡೆಯಲು ಅಂಚೆ ಕಚೇರಿಗೆ ಮನವಿ ಮಾಡಿದ್ದರು.

ಅಂಚೆ ಇಲಾಖೆ 22 ಲಕ್ಷದ ಬದಲಾಗಿ 20,20,994 ರೂ. ಮೊತ್ತವನ್ನು ನಿವೃತ್ತ ಶಿಕ್ಷಕಿಯ ಖಾತೆಗೆ ವರ್ಗಾಯಿಸಿತ್ತು. 1,79,006 ರೂ.ಗಳನ್ನು ಇಲಾಖೆ ಸಮರ್ಪಕ ಮಾಹಿತಿ ನೀಡದೆ ಕಡಿತಗೊಳಿಸಿತ್ತು.

ಗ್ರಾಹಕ ನ್ಯಾಯಾಲಯದ ಮೊರೆ
ಈ ನಡುವೆ ತನಗೆ ಆಗಿರುವ ಅನ್ಯಾಯ ಪ್ರಶ್ನಿಸಿ ನಿವೃತ್ತ ಶಿಕ್ಷಕಿ 2023ರ ಜುಲೈ 13ರಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಗ್ರಾಹಕ ನ್ಯಾಯಾಲಯವು 2024ರ ಸೆ. 23ರಂದು ಅಂಚೆ ಕಚೇರಿ ತಡೆ ಹಿಡಿದಿದ್ದ 1,79,006 ರೂ.ವನ್ನು ಶೇ. 8ರ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಮರುಪಾವತಿಸುವಂತೆ ಆದೇಶ ನೀಡಿದೆ. ಅಲ್ಲದೆ 25 ಸಾವಿರ ರೂ. ಪರಿಹಾರ ಮೊತ್ತ ಹಾಗೂ 10 ಸಾವಿರ ವ್ಯಾಜ್ಯದ ಖರ್ಚು ಪಾವತಿಸುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next