ಮಂಡ್ಯ: ಬ್ಯಾಂಕ್ ಆಫ್ ಬರೋಡ ಮತ್ತು ಇತರೆ ಸಾರ್ವಜನಿಕ ವಲಯದ ಬ್ಯಾಂಕುಗಳ ವತಿಯಿಂದ ಅ. 22 ಮತ್ತು 23ರಂದು ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ಗ್ರಾಹಕ ಸಂಪರ್ಕ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಕೆ. ಸತ್ಯನಾರಾಯಣ ನಾಯಕ್ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಪ್ರಾಯೋಜನೆಯೊಂದಿಗೆ ಸಾರ್ವಜನಿಕ ಬ್ಯಾಂಕುಗಳು ದೇಶವ್ಯಾಪಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲ ಹಂತದಲ್ಲಿ 17 ಜಿಲ್ಲೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದೆ.
2ನೇ ಹಂತದಲ್ಲಿ ಮಂಡ್ಯ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಅ. 22ರಂದು ಬೆಳಗ್ಗೆ 10-30ಕ್ಕೆ ಸಂಸದೆ ಸುಮಲತಾ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕಾರಿ ಡಾ. ಎಂ.ವಿ. ವೆಂಕಟೇಶ್ ಭಾಗವಹಿಸುವರು. ಅ. 23ರಂದು ಶಾಸಕ ಎಂ. ಶ್ರೀನಿವಾಸ್ ಹಾಗೂ ಜಿಪಂ ಸಿಇಒ ಕೆ. ಯಾಲಕ್ಕಿಗೌಡ ಸಮಾರಂಭದಲ್ಲಿ ಭಾಗವಹಿಸುವರು ಎಂದರು.
ಕೃಷಿ ಸಾಲ, ವಾಹನ ಸಾಲ, ಗೃಹಸಾಲ, ಸಗಟು ಸಾಲ, ಮನೆ, ಎಂಎಸ್‌ಎಂಇ, ವೈಯಕ್ತಿಕ ಸಾಲಗಳು ಮಾಹಿತಿಯನ್ನು ನೀಡುವುದರ ಜತೆಗೆ ಅತ್ಯಂತ ತ್ವರಿತವಾಗಿ ಸಾಲ ಮಂಜೂರು ಮಾಡಲಾಗುವುದು. ಗ್ರಾಹಕರಿಗೆ ಭೀಮ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹಾಗೂ ಅದನ್ನು ಬಳಸುವ ಬಗ್ಗೆ ಮಾಹಿತಿ ನೀಡಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸಲು ಖಾಸಗೀ ಬ್ಯಾಂಕುಗಳು, ಎನ್‌ಬಿಎಫ್‌ಸಿ, ಎಂಎಫ್‌ಐ ಅವುಗಳಿಗೂ ಕೂಡ ಭಾಗವಹಿಸಲು ಆಮಂತ್ರಿಸಲಾಗುತ್ತದೆ. ಹಾಗೂ ಅವರಲ್ಲಿರುವ ಸಾಲ ಸೌಲಭ್ಯಗಳ ಇತರೆ ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ವ್ಯಾಪಾರಿಗಳು ಮತ್ತು ಗ್ರಾಹಕರುಗಳಿಗೆ ಅರಿವು ಮೂಡಿಸುವ ಸಲುವಾಗಿ ಈ ಜಿಲ್ಲೆಗಳ ಸುತ್ತ ಮುತ್ತ ಇರುವ ವಾಣಿಜ್ಯ ಉದ್ಯಮದಾರರು, ಮಾರಾಟಗಾರರು, ಸಂಘಗಳು, ಇತರೆ ಮಧ್ಯವರ್ತಿ ಸಲಹೆಗಾರರು ಭಾಗವಹಿಸುವರು. ಎಸ್‌ಐಡಿಬಿಇ, ನಬಾರ್ಡ್, ಡಿಇಸಿ, ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಜಿಲ್ಲೆಯಲ್ಲಿರುವ 26 ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಸಹಕಾರಿ, ಖಾಸಗಿ ಸೇರಿದಂತೆ 307 ಶಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡುವರು. ಆವರಣದಲ್ಲಿ 26 ಬ್ಯಾಂಕ್ ಗಳ ಮಳಿಗೆಗಳನ್ನು ತೆರೆಯಲಾಗುವುದು. ರಾಜ್ಯದ ಎಸ್ ಎಲ್‌ಬಿಸಿ ಮಾರ್ಗದರ್ಶನದಲ್ಲಿ ಜಿಲ್ಲಾ ಅಗ್ರಗಣ್ಯ ಬ್ಯಾಂಕುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ರಾಹಕರ ಎಲ್ಲಾ ಹಣಕಾಸಿನ ಅವಶ್ಯಕತೆಗಳಿಗೆ ಹಾಗೂ ಅನುಮಾನಗಳಿಗೆ ಒಂದೇ ಸೂರಿನಲ್ಲಿ ಪರಿಹಾರ ಸಿಗಲಿದೆ ಎಂದರು. ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎನ್. ಕದರಪ್ಪ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಕೆ.ವಿ. ಕಾಮತ್ ಇತರರು ಗೋಷ್ಠಿಯಲ್ಲಿದ್ದರು.