ಹುಬ್ಬಳ್ಳಿ: ಪ್ರಾಮಾಣಿಕತೆ ಹಾಗೂ ವಿಶ್ವಾಸಾರ್ಹತೆಯ ಕಾರಣದಿಂದಾಗಿ ದಿ ಹುಬ್ಬಳ್ಳಿ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಶತಮಾನ ಗತಿಸಿದರೂ ಗ್ರಾಹಕರ ನಂಬಿಕೆ ಉಳಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ದಿ ಹುಬ್ಬಳ್ಳಿ ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರು ಹಾಗೂ ಸಿಬ್ಬಂದಿ ಮಕ್ಕಳಿಗೆ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರಿ ಬ್ಯಾಂಕ್‌ಗಳು ಸಾಕಷ್ಟು ಸಂಕಷ್ಟಗಳನ್ನೆದುರಿಸಿದ ಸಂದರ್ಭದಲ್ಲೂ ಹುಬ್ಬಳ್ಳಿ ಸಹಕಾರಿ ಬ್ಯಾಂಕ್ ಸ್ಥಿರವಾಗಿ ನಿಂತು ಸೇವೆ ನೀಡುತ್ತಿದೆ ಎಂದರು. ಬ್ಯಾಂಕ್‌ಗಳಲ್ಲಿ ಅವ್ಯವಹಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ 1906ರಲ್ಲಿ ಆರಂಭಗೊಂಡ ಬ್ಯಾಂಕ್ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ ಒಳ್ಳೆಯ ಬ್ಯಾಂಕ್ ಎಂಬ ಹೆಸರು ಉಳಿಸಿಕೊಂಡಿದೆ ಎಂದರು.
ಬ್ಯಾಂಕಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆಯವರು 50 ವರ್ಷಗಳ ಕಾಲ ಬ್ಯಾಂಕ್‌ನಲ್ಲಿ ನಿದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ಸತ್ಕಾರಕ್ಕೊಳಗಾದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಬೇಕು. ಪಾಲಕರು, ಶಿಕ್ಷಕರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ಬ್ಯಾಂಕ್ ಶಿಕ್ಷಣಕ್ಕಾಗಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಕಳೆದ 5 ವರ್ಷಗಳಿಂದ ಸದಸ್ಯರು ಹಾಗೂ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮಕ್ಕಳು ಹೆಚ್ಚಿನ ಸಾಧನೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. 112 ವರ್ಷ ಹಳೆಯದಾದ ಬ್ಯಾಂಕ್‌ನಲ್ಲಿ ಸದ್ಯ 165 ಕೋಟಿ ರೂ. ಠೇವಣಿಯಿದ್ದು, 112 ಕೋಟಿ ರೂ. ಸಾಲ ನೀಡಿದೆ. ಅಗತ್ಯಕ್ಕನುಗುಣವಾಗಿ ಬ್ಯಾಂಕ್ 25,000 ರೂ.ಗಳಿಂದ 1.5 ಕೋಟಿ ರೂ. ಸಾಲ ನೀಡುತ್ತದೆ ಎಂದರು. ಪುರಸ್ಕೃತರ ಪರವಾಗಿ ಅಪೂರ್ವಾ, ಪ್ರಸಿಲ್ಲಾ ಜಾಯ್ಸ ಅಭಿಪ್ರಾಯ ಹಂಚಿಕೊಂಡರು. ಪಿ.ಬಿ.ಮಠಪತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಾವುಕಾರ ನಿರೂಪಿಸಿದರು. ಉಮಾ ಅಕ್ಕೂರ ವಂದಿಸಿದರು.
ಕನ್ನಡ ನಮ್ಮ ದಿನನಿತ್ಯದ ಭಾಷೆಯಾಗಬೇಕು. ಕನ್ನಡ ಬಗ್ಗೆ ಮಕ್ಕಳಲ್ಲಿ ಅಭಿಮಾನ ಬೆಳೆಯಬೇಕು. ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಮಾತ್ರ ಸಾಧನೆ ಮಾಡಬಹುದೆಂಬ ಭ್ರಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ಮುಖ್ಯಮಂತ್ರಿ ಹುದ್ದೆಗೇರಿದ್ದೆ.
ಜಗದೀಶ ಶೆಟ್ಟರ, ಮಾಜಿ ಸಿಎಂ