Advertisement

ಸರಕಾರದ ವಿರುದ್ಧ ಒಕ್ಕೊರಲಿನಿಂದ ಹೋರಾಟ: ಶಿವಾನಂದ ಡಿ. ಶೆಟ್ಟಿ

11:38 AM Feb 05, 2022 | Team Udayavani |

ಮುಂಬಯಿ: ಮಹಾರಾಷ್ಟ್ರ ಸರಕಾರದ ಮಲತಾಯಿ ಧೋರಣೆಯಿಂದ ಹೊಟೇಲ್‌ ಉದ್ಯಮವು ಮತ್ತಷ್ಟು ಸಂಕಷ್ಟಕ್ಕೀಡಾಗಿರುವುದು ವಿಷಾಧನೀಯ. ಈಗಾಗಲೇ ಕೊರೊನಾ ಲಾಕ್‌ಡೌನ್‌ನಿಂದಾಗಿ ಉದ್ಯಮವು ಸಾಕಷ್ಟು ನಷ್ಟವನ್ನು ಅನುಭವಿಸಿದ್ದು, ಶೇ. 50ರಷ್ಟು ಪ್ರಮಾಣದಲ್ಲಿ ವ್ಯಾಪಾರವನ್ನು ಮಾಡಲು ಪ್ರಾರಂಭಿಸಿದ ಬೆನ್ನಲ್ಲೇ ಸರಕಾರವು ಮದ್ಯ ಪರವಾನಿಗೆಯ ಮೇಲೆ ಶೇ. 15ರಷ್ಟು ತೆರಿಗೆಯನ್ನು ಹೆಚ್ಚಿಸಿರುವುದು ಹೊಟೇಲಿಗರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಕೊರೊನಾ ನಿರ್ಬಂಧಗಳಿಂದ ವ್ಯಾಪಾರಕ್ಕೆ ಸಮಯದ ಮಿತಿಯನ್ನು ಘೋಷಿಸಿದ ಪರಿಣಾಮ ಉದ್ಯಮವು ಲಾಭವಿಲ್ಲದೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಹೊಟೇಲಿಗರ ಮೇಲೆ ಮತ್ತಷ್ಟು ಹೊರೆ ಹಾಕಿರುವುದು ಸೂಕ್ತವಲ್ಲ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ನುಡಿದರು.

Advertisement

ಫೆ. 3ರಂದು ಅಂಧೇರಿ ಪೂರ್ವದ ಚಕಾಲದ ಸಾಯಿಪ್ಯಾಲೇಸ್‌ ಹೊಟೇಲ್‌ನಲ್ಲಿ ಆಹಾರ್‌ ವತಿಯಿಂದ ಮಹಾರಾಷ್ಟ್ರದ ಹೊಟೇಲ್‌ ಸಂಘಟನೆಗಳೊಂದಿಗೆ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆರಿಗೆ ಶುಲ್ಕವನ್ನು ಇಳಿಸುವಂತೆ ಆಹಾರ್‌ ಈಗಾಗಲೇ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಮಾಡಿದೆ. ಈ ಮಧ್ಯೆ ಸರಕಾರ ಪರವಾನಿಗೆ ಶುಲ್ಕವನ್ನು ಏರಿಸಿ ಉದ್ಧಟತ ಮೆರೆದಿದೆ. ಇದನ್ನು ಹೊಟೇಲಿಗರು ಒಕ್ಕೊರಲಿನಿಂದ ಖಂಡಿಸುತ್ತೇವೆ. ಶೇ. 50ರಷ್ಟು ತೆರಿಗೆಯನ್ನು ಕಡಿತಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಆಹಾರ್‌ ಸತತವಾಗಿ ಸಮಯ ಮಿತಿಯನ್ನು ವಿಸ್ತರಿಸುವಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ, ಅದರ ಬಗ್ಗೆ ಚರ್ಚಿಸಿದ ಪರಿಣಾಮ ಪ್ರಸ್ತುತ ಪೂವ ನಿಗಧಿಯ ಸಮಯವನ್ನು ಅನುಷ್ಠಾನಗೊಳಿಸಿದೆ. ಈ ಬಗ್ಗೆ ಮುಂಬಯಿಯಿಂದ ಹೊರಗಿನ ಹೊಟೇಲ್‌ ಸಂಘಟನೆಗಳಿಂದ ನಮಗೆ ರಾತ್ರಿ 10 ಗಂಟೆಯ ಬಳಿಕ ವ್ಯಾಪಾರ ಮಾಡಲು ಬಿಡದೆ ಸರಕಾರದ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ದೂರುಗಳು ಬಂದಿವೆ. ಈ ಬಗ್ಗೆ ಆಹಾರ್‌ ಸಂಬಂಧಪಟ್ಟವರನ್ನು ಭೇಟಿಯಾಗಿ ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಲಿದೆ. ಫೆ. 1ರಿಂದ ರಾತ್ರಿ 1.30ರ ವರೆಗೆ ಸಮಯ ವಿಸ್ತರಣೆಯ ಆದೇಶ ಸಿಕ್ಕಿದರೂ ಆಯಾಯ ಹೊಟೇಲ್‌ ಸಂಘಟನೆಗಳು ಕೂಡ ತಮ್ಮ ಜಿಲ್ಲಾಧಿಕಾರಿಗಳಿಗೆ, ಕಮಿಷನರ್‌ಗಳಿಗೆ ಮನವಿ ಸಲ್ಲಿಸಬೇಕಾಗುತ್ತದೆ. ಆಹಾರ್‌ ಹೊಟೇಲ್‌ ಉದ್ಯಮದ ಸಂಕಷ್ಟಗಳನ್ನು ಬಗೆಹರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಸರಕಾರದ ಮಲತಾಯಿ ಧೋರಣೆಯ ವಿರುದ್ಧ ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡ ಮಾಡೋಣ ಎಂದು ನುಡಿದರು.

ಸಮಾಲೋಚನಾ ಸಭೆಯಲ್ಲಿ ಥಾಣೆ ಹೊಟೇಲ್‌ ಅಸೋಸಿ ಯೇಶನ್‌ ಅಧ್ಯಕ್ಷ ಪೊಲ್ಯ ಉಮೇಶ್‌ ಶೆಟ್ಟಿ, ವಸಾಯಿ ಹೊಟೇಲ್‌ ಅಸೋಸಿ ಯೇಶನ್‌ ಅಧ್ಯಕ್ಷ ಮಂಜಿತ್‌ ಸಿಂಗ್‌, ಮೀರಾ- ಭಾಯಂದರ್‌ ಹೊಟೇಲ್‌ ಅಸೋಸಿಯೇಶನ್‌ನ ಮಧುಕರ ಶೆಟ್ಟಿ, ನವಿಮುಂಬಯಿ ಹೊಟೇಲ್‌ ಅಸೋಸಿಯೇಶನ್‌ ಇದರ ರಾಕೇಶ್‌ ಚೌಧರಿ ಮತ್ತು ರವೀಂದ್ರ ಶೆಟ್ಟಿ, ಕಾಶೀಮೀರಾ ಹೊಟೇಲ್‌ ಅಸೋಸಿಯೇಶನ್‌ನ ಉದಯ ಶೆಟ್ಟಿ, ಸಂತೋಷ್‌ ಪುತ್ರನ್‌, ಭಿವಂಡಿ ಹೊಟೇಲ್‌ ಅಸೋಸಿಯೇಶನ್‌ನ ದೊಂಡೆರಂಗಡಿ ಭಾಸ್ಕರ್‌ ಶೆಟ್ಟಿ, ಡೊಂಬಿವಲಿ ಹೊಟೇಲ್‌ ಅಸೋಸಿಯೇಶನ್‌ನ ಸತೀಶ್‌ ಶೆಟ್ಟಿ, ಸಾಂಗ್ಲೀ ಹೊಟೇಲ್‌ ಅಸೋಸಿಯೇಶನ್‌ನ ಪ್ರವೀಣ್‌ ಶೆಟ್ಟಿ, ಉಲ್ಲಾಸ್‌ನಗರ ಹೊಟೇಲ್‌ ಅಸೋಸಿಯೇಶನ್‌ನ ರಾಜು ಭಾನುಶಾಲಿ, ಕಲ್ಯಾಣ್‌ ಹೊಟೇಲ್‌ ಅಸೋಸಿಯೇಶನ್‌ನ ಪ್ರವೀಣ್‌ ಶೆಟ್ಟಿ, ಕೊಲ್ಹಾಪುರ ಹೊಟೇಲ್‌ ಅಸೋಸಿಯೇಶನ್‌ನ ಕೈಲಾಶ್‌ ಘೊಂಡೆY, ಪಂಢರಾಪುರ ಹೊಟೇಲ್‌ ಅಸೋಸಿಯೇಶನ್‌ನ ಸಚಿನ್‌ ಸೆಹಗಲ್‌, ನಾಗ್ಪುರ ಹೊಟೇಲ್‌ ಅಸೋಸಿಯೇಶನ್‌ನ ರಾಜೀವ್‌ ಜೈಸ್ವಾಲ್‌, ಅಂಬರ್‌ನಾಥ್‌ ಹೊಟೇಲ್‌ ಅಸೋಸಿಯೇಶನ್‌ನ ಸುನೀಲ್‌ ಶೆಟ್ಟಿ, ವಸಾಯಿ ಹೊಟೇಲ್‌ ಅಸೋಸಿಯೇಶನ್‌ನ ಹರೀಶ್‌ ಪಾಂಡು ಶೆಟ್ಟಿ, ಮಹಾರಾಷ್ಟ್ರ ವಿಕ್ರೇತ್‌ ಅಸೋಸಿಯೇಶನ್‌ನ ರಾಮಲಿಂಗ ಗೋಗರಿ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಸಂಘಟನೆಗಳ ಪ್ರತಿನಿಧಿಗಳು ತಮ್ಮ ವಲಯಗಳಲ್ಲಿ ಹೊಟೇಲಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಸರಕಾರದ ಪರವಾನಿಗೆ ಶುಲ್ಕ ಏರಿಕೆಯ ವಿರುದ್ಧ ಒಮ್ಮತದ ಹೋರಾಟ ನಡೆಸಲು ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಕೆಲವು ಹೊಟೇಲ್‌ ಅಸೋಸಿಯೇಶನ್‌ಗಳ ಪ್ರತಿನಿಧಿಗಳು ವರ್ಚುವಲ್‌ ಆಗಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಆಹಾರ್‌ನ ಪದಾಧಿಕಾರಿ ಸುಧಾಕರ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಂದಿನ ಕ್ರಮಗಳ ಬಗ್ಗೆ ರೂಪುರೇಷೆಗಳನ್ನು ರಚಿಸಲಾಯಿತು. ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next