ದೇವನಹಳ್ಳಿ: ಸ್ವಾತಂತ್ರ್ಯ ಕಿಚ್ಚು ಹೆಚ್ಚಾಗಿದ್ದ ಕಾಲ ಘಟ್ಟದಲ್ಲಿ ಸ್ಥಾಪನೆಯಾಗಿದ್ದ ಶತಮಾನ ಪೂರೈಸಿರುವ ತಾಲೂಕಿನ ಆರುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಭಿವೃದ್ಧಿ ಕಾರ್ಯಕಲ್ಪ ಬೇಕಾಗಿದೆ. ಶಾಲೆಯಲ್ಲಿ ಲಭ್ಯವಿರುವ ದಾಖಲಾತಿಯಂತೆ 1884ರಲ್ಲಿ ಪ್ರಾರಂಭಗೊಂಡಿದೆ. ಈ ಮೂಲಕ ಶಾಲೆ ಸ್ಥಾಪನೆಯಾಗಿ 136 ವರ್ಷವಾಗಿದೆ. ಪ್ರಾಥಮಿಕ ಶಾಲೆ ಇದಾಗಿದ್ದು 1938 ರಲ್ಲಿ ಮಾಧ್ಯಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. 12 ಗ್ರಾಮಕ್ಕೆ ಅನುಕೂಲ ವಾಗಲು ಆರುವನಹಳ್ಳಿ ಗ್ರಾಮಸ್ಥರಾದ ಎಚ್. ಆಂಜನಪ್ಪ, ವೀರಪ್ಪ, ಎಂಬವರು ಶಾನು ಭೋಗರಿಂದ ಬ್ರಿಟಿಷ್ ಸರ್ಕಾರದ ಆಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹತ್ತಾರು ಮಕ್ಕಳನ್ನು ಸೇರಿಸಿ ಶಿಕ್ಷಣ ಪ್ರಾರಂಭಿಸಿದ್ದರು ಎಂದು ನಮ್ಮ ತಂದೆ ಹೇಳುತ್ತಿದ್ದರು ಎಂದು ಗ್ರಾಮದ ವೃದ್ಧ ನಾರಾಯಣಸ್ವಾಮಿ ನೆನಪು ಮಾಡಿಕೊಳ್ಳುತ್ತಾರೆ.
ನಾರಾಯಣಸ್ವಾಮಿ ಅವರೂ ಈ ಶಾಲೆಯ ವಿದ್ಯಾರ್ಥಿ ಆಗಿದ್ದರು. ಒಂದು ಕೊಠಡಿ ಮಳೆ ಬಂದರೆ ಸೋರುವುದು. ಮತ್ತೆರಡು ಕೊಠಡಿ ಮೇಲ್ಭಾಗದಲ್ಲಿ ಹಾಕಿರುವ ಚಪ್ಪಡಿ ಕಲ್ಲು ಬಿರುಕು ಬಿಟ್ಟಿದೆ. ಶೌಚಾಲಯಗಳು ಸಮರ್ಪಕವಾಗಿಲ್ಲ. ತಾಲೂಕಿನಲ್ಲಿ ಈಗಾಗಲೇ ಸಿಎಸ್‌ಆರ್ ಅನುದಾನದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿವಿಧ ಕಂಪನಿಗಳು ವಿವಿಧ ಶಾಲೆಗಳ ನಿರ್ಮಾಣ ಮಾಡಿದ್ದಾರೆ. ಅದೇ ಮಾದರಿಯಲ್ಲಿ 136 ವರ್ಷದ ಇತಿಹಾಸ ಹೊಂದಿರುವ ಶಾಲೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದರೆ ಶಾಲೆ ದಾಖಲಾತಿ ಪ್ರಮಾಣ ಹೆಚ್ಚಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಹಲವು ವರ್ಷ ಮನೆಯಲ್ಲಿಯೇ ಪಾಠ ಬೋಧನೆ ನಡೆಯುತ್ತಿತ್ತು. ಗ್ರಾಮಸ್ಥರೆಲ್ಲರೂ ಒಂದೆಡೆ ಶಾಲೆ ಮಾಡಬೇಕು ಎಂದು ತೀರ್ಮಾನಿಸಿ ರಾಮಸ್ವಾಮಿ, ಪದ್ಮನಾಭಯ್ಯ, ಮುನಿ ವೆಂಕಟಪ್ಪ, ಮುನಿ ಆಂಜನಪ್ಪ ಒಟ್ಟಾಗಿ ಒಂದೂವರೆ ಎಕರೆಯನ್ನು ಶಾಲೆಗೆ ದಾನ ನೀಡಿದ್ದಾರೆ. ಅದೇ ಜಾಗದಲ್ಲಿ ಪ್ರಸ್ತುತ ಶಾಲೆ ನಡೆಯುತ್ತಿದೆ. ಈ ಶಾಲೆಯಲ್ಲಿ ಓದಿದವರು ತಾಪಂ ಮಾಜಿ ಅಧ್ಯಕ್ಷರು, ಕರ್ನಾಟಕ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಜನ ಪ್ರತಿನಿಧಿಗಳಾಗಿ ಅಮೇರಿಕಾದಲ್ಲಿ ಅಂಬರೀಶ್ ಎಂಬವರು ಉದ್ಯೋಗ ಮಾಡುತ್ತಿದ್ದಾರೆ. ವೈದ್ಯರು, ಎಂಜಿನಿಯರ್, ಜೂನಿಯರ್ ವಿಜ್ಞಾನಿಗಳು, ಆಡಿಟರ್‌ಗಳೂ ಆಗಿದ್ದಾರೆ.
– ಎಸ್.ಮಹೇಶ್