ಕಡಬ: ಕುಮಾರಾಧಾರಾ ನದಿಗೆ ಕಡಬ ಸಮೀಪದ ಪಿಜಕಳದ ಪಾಲೋಲಿ ಎಂಬಲ್ಲಿ ನಿರ್ಮಾಣವಾಗು ತ್ತಿರುವ ಸರ್ವಋತು ಸೇತುವೆಯ ಕಾಮಗಾರಿ ಚುರುಕಾಗಿ ಸಾಗುತ್ತಿದ್ದು, ಸ್ಥಳೀಯ ಜನರ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಕಡಬ ಹಾಗೂ ಎಡಮಂಗಲ ಗ್ರಾಮಗಳನ್ನು ಬೆಸೆಯುವ ಈ ಸೇತು ವೆಯ ಕಾಮಗಾರಿ ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿದ್ದು, ಇದೇ ವರ್ಷದ ಕೊನೆಗೆ ಪೂರ್ತಿ ಕಾಮಗಾರಿ ಮುಗಿಸುವ ಗುರಿ ಇರಿಸಿಕೊಳ್ಳಲಾಗಿದೆ.
6 ತಿಂಗಳಿನಿಂದ ಕಾಮಗಾರಿ ನಡೆ ಯುತ್ತಿದ್ದು, ಮೊದಲಿಗೆ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ಪಿಲ್ಲರ್ ನಿಲ್ಲಿಸಲಾಗಿತ್ತು. ಬಳಿಕ ಸಮ ರೋಪಾದಿಯಲ್ಲಿ ಕೆಲಸ ನಡೆದು ಇದೀಗ ಸೇತುವೆ ನಿರ್ಮಾಣದಲ್ಲಿ ಪ್ರಮುಖವಾಗಿರುವ ಗರ್ಡರ್ ಬೀಮ್ ಕೂಡ ಅಳವಡಿಸಲಾಗಿದೆ. ಲೂಫ್ ಕನ್‌ಸ್ಟ್ರಕ್ಷನ್‌ನವರು ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದ್ದು, ಕಾಮಗಾರಿ ಮುಗಿಸಲು 20 ತಿಂಗಳುಗಳ ಗಡುವು ನೀಡಲಾಗಿದೆ.
19.68 ಕೋ.ರೂ. ವೆಚ್ಚದ ಸೇತುವೆ
ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಎಸ್. ಅಂಗಾರ ಅವರು ಲೋಕೋಪಯೋಗಿ ಇಲಾಖೆ ಮುಖಾಂತರ ಪಾಲೋಲಿ ಸೇತುವೆ ನಿರ್ಮಾಣಕ್ಕೆ 19.68 ಕೋಟಿ ರೂ.ಅನುದಾನ.
Related Articles
ಮಂಜೂರುಗೊಳಿಸಿ 8 ತಿಂಗಳ ಹಿಂದೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. 175 ಮೀ. ಉದ್ದದ ಈ ಸೇತುವೆ 12 ಮೀ. ಅಗಲದಲ್ಲಿ (ಒಂದು ಬದಿಯಲ್ಲಿ ಫುಟ್‌ಪಾತ್ ಸೇರಿದಂತೆ) ನಿರ್ಮಾಣವಾಗಲಿದೆ. ಸೇತುವೆಯ ಎಡಮಂಗಲ ಭಾಗದಲ್ಲಿನ 675 ಮೀ. ಸಂಪರ್ಕದ ಕಚ್ಛಾ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸೇತುವೆಯ ಎಡಮಂಗಲ ಭಾಗದ ಸಂಪರ್ಕ ರಸ್ತೆ (150 ಮೀ.) ಹಾಗೂ ಪಿಜಕಳ ಭಾಗದ ಸಂಪರ್ಕ ರಸ್ತೆ (100 ಮಿ.) ಗಳನ್ನೂ ಕಾಂಕ್ರೀಟ್ ಹಾಸಿ ಅಭಿವೃದ್ಧಿಪಡಿಸುವ ಕೆಲಸ ನಡೆಯಲಿದೆ.
ಗ್ರಾಮಸ್ಥರಿಂದಲೇ
ತಾತ್ಕಾಲಿಕ ಸೇತುವೆ
ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಊರವರೇ ಸೇರಿಕೊಂಡು ಇಲ್ಲಿ ತಾತ್ಕಾಲಿಕ ನೆಲೆಯ ಸೇತುವೆ ನಿರ್ಮಾಣ ಮಾಡಿ ಬೇಸಗೆಯಲ್ಲಿ ವಾಹನ ಸಂಚರಿಸಲು ವ್ಯವಸ್ಥೆಮಾಡಿಕೊಂಡಿದ್ದರು. ನೂತನ ಕಡಬ ತಾಲೂಕಿಗೆ ಎಡಮಂಗಲ, ಎಣ್ಮೂರು, ದೋಳ್ಪಾಡಿ, ಚಾರ್ವಾಕ ಹಾಗೂ ಕಾಣಿಯೂರು ಗ್ರಾಮಗಳು ಸೇರ್ಪಡೆಯಾಗಿದ್ದು, ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಲು ಪಾಲೋಲಿ ಮಾರ್ಗ ಅತ್ಯಂತ ಹತ್ತಿರದ ದಾರಿಯಾಗಿದೆ.
ಶೇ. 80 ರಷ್ಟು ಕಾಮಗಾರಿ ಮುಗಿಸಿದ್ದೇವೆ
ಈಗಾಗಲೇ ಶೇ. 80 ರಷ್ಟು ಕಾಮಗಾರಿ ಮುಗಿಸಿದ್ದೇವೆ. ಸೇತುವೆಯ ಇಕ್ಕೆಡೆಗಳ ಸಂಪರ್ಕ ರಸ್ತೆಗಾಗಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಮಳೆ ಶುರುವಾಗುವ ಮೊದಲು ತಡೆಗೋಡೆಯ ನಿರ್ಮಾಣ ಮುಗಿಸಿ ಅದಕ್ಕೆ ಮಣ್ಣು ತುಂಬಿಸುವ ಕೆಲಸ ಆಗಬೇಕಿದೆ. ಸೇತುವೆಯ ಮೇಲೆ ಕಾಂಕ್ರೀಟ್ ಸ್ಲಾÂಬ್ ಹಾಕಿದರೆ ಬಹುತೇಕ ಕೆಲಸ ಮುಗಿದಂತೆ. ಮಳೆಗಾಲ ಮುಗಿದ ಮೇಲೆ ಉಳಿಕೆ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿ ಸೇತುವೆಯ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಪ್ರಮೋದ್‌ಕುಮಾರ್ ಕೆ.ಕೆ.,
ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ.