Advertisement

ನಿರ್ಮಾಣ ಹಂತದ ಕಟ್ಟಡ ಕುಸಿತ: 3 ಸಾವು

06:00 AM Feb 16, 2018 | Team Udayavani |

ಬೆಂಗಳೂರು: ಕೇವಲ ನಾಲ್ಕು ತಿಂಗಳ ಅಂತರದಲ್ಲಿ ನಗರದಲ್ಲಿ ಮತ್ತೂಂದು ನಿರ್ಮಾಣ ಹಂತದ ಬೃಹತ್‌ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದು, ಒಂಬತ್ತು ಜನ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಯ ವಾಣಿಜ್ಯ ಕಟ್ಟಡ ಕುಸಿದಿದೆ. ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಒಂಬತ್ತು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಹತ್ತು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಹಾಗೂ ಪೊಲೀಸರು ತಡರಾತ್ರಿವರೆಗೂ ರಕ್ಷಣಾ ಕಾರ್ಯ ಮುಂದುವರಿದಿದೆ.

ಮೃತಪಟ್ಟವರನ್ನು ರಾಯಚೂರು ಮೂಲದ ರಾಜು (25) ಉತ್ತರ ಪ್ರದೇಶ ಗೋರಖ್‌ಪುರದ ಅನ್ವರ್‌ (24) ಹಾಗೂ ಶೇಕ್‌ (25) ಎಂದು ಗುರುತಿಸಲಾಗಿದೆ. 

ಗಾಯಗೊಂಡವರೆಲ್ಲರೂ ರಾಯಚೂರು, ಕಲಬುರಗಿ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಬಿಹಾರದವರಾಗಿದ್ದಾರೆ. ಅವರೆಲ್ಲರಿಗೂ ಸಮೀಪದ ಸೆಂಟ್‌ಜಾನ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕಸವನಹಳ್ಳಿಯಲ್ಲಿ 50x 7 0 ಅಡಿ ನಿವೇಶನದಲ್ಲಿ ದಿನಸಿ ವ್ಯಾಪಾರಿ ರಫೀಕ್‌ ಎಂಬುವರು ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದು, ಹಲವು ದಿನಗಳಿಂದ ಈ ಕಟ್ಟಡದಲ್ಲಿ ಉತ್ತರಪ್ರದೇಶ, ಒಡಿಶಾ ಹಾಗೂ ಕಲಬುರಗಿ ಮೂಲದ ಸುಮಾರು 25 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ಆವರಣದಲ್ಲಿ ತಾತ್ಕಾಲಿಕ ಶೆಡ್‌ನ‌ಲ್ಲಿ ಕಾರ್ಮಿಕರು ವಾಸವಾಗಿದ್ದರು. ಸಂಜೆ 4.30ರ ಸುಮಾರಿಗೆ ಏಕಾಏಕಿ ಕಟ್ಟಡದ ನೆಲಕ್ಕುರಳಿತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ವಿವರಿಸಿದರು.

Advertisement

ಎಂಜಿನಿಯರ್‌ ಬಂಧನ; ಮಾಲೀಕರು ವಶಕ್ಕೆ
ಆದರೆ, ಉದ್ದೇಶಿತ ಕಟ್ಟಡವು ಅಕ್ರಮವಾಗಿ ತಲೆಯೆತ್ತಿದ್ದು, ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಇಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದ ಹಾಗೂ ಈಗ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಮುನಿರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡ ಸಮೀರಾ ಎಂಬುವರಿಗೆ ಸೇರಿದ್ದು, ಇವರನ್ನು ವಶಕ್ಕೆ ಪಡೆಯಲಾಗಿದೆ. ಸಮೀರಾ ಪತಿ ರಫೀಕ್‌ ನಾಪತ್ತೆಯಾಗಿದ್ದಾರೆ. ಐಪಿಸಿ 304ರ ಅಡಿ ಪ್ರಕರಣ ದಾಖಲಾಗಿದೆ.

ಸರಣಿ ಕಟ್ಟಡ ಕುಸಿತ
ಕಳೆದ ಅಕ್ಟೋಬರ್‌ನಲ್ಲಷ್ಟೇ ಈಜಿಪುರದಲ್ಲಿ ಕಟ್ಟಡ ಕುಸಿದು ಏಳು ಜನ ಸಾವನ್ನಪ್ಪಿದ್ದರು. ಇದಾದ ಮರುದಿನವೇ ಯಶವಂತಪುರದಲ್ಲಿ ಕಟ್ಟಡ ಕುಸಿದು ನಾಲ್ವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಅಷ್ಟೇ ಅಲ್ಲ, ಕೇವಲ ನಾಲ್ಕು ದಿನಗಳ ಹಿಂದೆ ಯಶವಂತಪುರ ಮತ್ತು ಜಯನಗರದ 5ನೇ ಬ್ಲಾಕ್‌ನಲ್ಲಿ ಎರಡು ಕಟ್ಟಡಗಳು ವಾಲಿದ್ದವು. ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next