Advertisement
ತುರ್ತಾಗಿ ದೆಹಲಿ, ಮುಂಬೈಗೆ ಒಂದು ದಿನ ಹೋದ ದಿನಗಳಲ್ಲೂ ಪಾಠ, ಪ್ರವಚನಗಳು ತಪ್ಪಿಸುತ್ತಿರಲಿಲ್ಲ. ಅವರ ಪ್ರವಾಸದ ಸಮಯದಲ್ಲೂ 62 ವಿದ್ಯಾರ್ಥಿಗಳನ್ನು ತಮ್ಮೊಂದಿಗೇ ಕರೆದುಕೊಂಡು ಹೋಗುತ್ತಿದ್ದರು! ಇದಕ್ಕೆಂದೇ ಎರಡು ಪ್ರತ್ಯೇಕ ವಾಹನಗಳನ್ನು ಖರೀದಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳ ಅಂತಿಮ ಬೋಧನೆಯನ್ನು ಶ್ರೀಗಳೇ ಮಾಡುತ್ತಿದ್ದರು. ಈ ಪರಿಪಾಠವನ್ನು ಶ್ರೀಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಪಾಲಿಸಿಕೊಂಡು ಬಂದರು.
Related Articles
Advertisement
ಬೆಂಗಳೂರಿನಲ್ಲಿ 2ನೇ ವೃಂದಾವನ: ಉಡುಪಿ ಸ್ವಾಮೀಜಿಯವರಲ್ಲಿ ಬಹುತೇಕರ ವೃಂದಾವನಗಳು ಸಿಗುವುದು ಸುಮಾರು 500 ವರ್ಷಗಳ ಈಚಿನದು. ಅದಕ್ಕಿಂತ ಹಿಂದಿನವರಲ್ಲಿ ಕೆಲವರು ಜಲಸಮಾಧಿಯಾಗಿರಬಹುದು ಎಂಬ ಮಾತು ಇದೆ. ಅಷ್ಟಮಠಗಳ ಸ್ವಾಮೀಜಿಯವರಲ್ಲಿ ಬಹುತೇಕರ ವೃಂದಾವನಗಳಿರುವುದು ಅವಿಭಜಿತ ದ.ಕ. ಜಿಲ್ಲೆಯಲ್ಲಿ. ಬೆಂಗಳೂರು ಮಹಾನಗರದಲ್ಲಿ ಇದುವರೆಗೆ ಶ್ರೀ ಕೃಷ್ಣಾಪುರ ಮಠದ ಮೂರು ತಲೆಮಾರು ಹಿಂದಿನ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ವೃಂದಾವನ ಮಾತ್ರ ಇತ್ತು. ಈ ವೃಂದಾವನ ಸ್ಥಾಪನೆಯಾದುದು 1881ರಲ್ಲಿ. ಇದಾಗಿ 139 ವರ್ಷಗಳ ಬಳಿಕ ಪೇಜಾವರ ಶ್ರೀಗಳ ವೃಂದಾವನ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
ಶ್ರೀ ಕೃಷ್ಣಾಪುರ ಮಠದ ಈಗಿನ ಸ್ವಾಮೀಜಿಯವರ ಪರಮಗುರುಗಳ ಗುರು ಶ್ರೀ ವಿದ್ಯಾಧೀಶತೀರ್ಥರು ತಮ್ಮ ನಾಲ್ಕನೆಯ ಪರ್ಯಾಯವನ್ನು 1878-79ರಲ್ಲಿ ಪೂರೈಸಿ 1880ರಲ್ಲಿ ತಿರುಪತಿ ಶ್ರೀನಿವಾಸನ ದರ್ಶನಕ್ಕೆ ಹೋದರು. ಅದೇ ಹೊತ್ತಿಗೆ ಇವರ ಶಿಷ್ಯರೂ ಆ ಕಾಲದಲ್ಲಿ ವಿದ್ವತ್‌ಪ್ರತಿಭೆ, ಪವಾಡಗಳನ್ನು ನಡೆಸುತ್ತಿದ್ದ ಜಮಖಂಡಿ ವಾದಿರಾಜ ಆಚಾರ್ಯರು ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿದ್ವಾಂಸರ ಬಳಿ ವಿದ್ವತ್ಸಭೆಯಲ್ಲಿ ಪಾಲ್ಗೊಂಡು ಜಯಪತಾಕೆ ಗಳಿಸಿ ತಿರುಪತಿಗೆ ಬಂದಿದ್ದರು. ಜಯಪತಾಕೆ ಎಂದಾಕ್ಷಣ ಈಗಿನಂತೆ ಪದಕ, ಪ್ರಮಾಣಪತ್ರವಲ್ಲ, ಸ್ಮರಣಿಕೆಗಳಲ್ಲ.
ಅವರು ಕಾಶ್ಮೀರದ ರಾಜನಿಂದ ಜಯಪತಾಕೆ ಉಡುಗೊರೆಯಾಗಿ ಸ್ವೀಕರಿಸಿದ್ದು ಸುವರ್ಣಾಲಂಕೃತ ಗಜದಂತದ ಪಲ್ಲಕ್ಕಿಯನ್ನು. ಇದನ್ನು ತಿರುಪತಿಯಲ್ಲಿ ವಿದ್ಯಾಗುರುಗಳಿಗೆ ಸಮರ್ಪಿಸಿದರು. ದೇವರ ದರ್ಶನ ಪಡೆದ ಅನಂತರ ಸ್ವಾಮೀಜಿಯವರು ಉಡುಪಿಗೆ ಹಿಂದಿರುಗುವವರಿದ್ದರು. ಆದರೆ ಬೆಂಗಳೂರಿನಲ್ಲಿ ಅವರು ನಿರ್ಯಾಣ ಹೊಂದಿದರು. ಅವರ ವೃಂದಾವನವನ್ನು ಸೆಂಟ್ರಲ್ ಮಾರ್ಕೆಟ್ ಹಿಂಬದಿ ಗುಂಡೋಪಂತ ಛತ್ರದ ಬಳಿ ನಿರ್ಮಿಸಲಾಯಿತು.
ಅಲ್ಲಿ ಅನಂತರ ಕೃಷ್ಣಮಂದಿರವನ್ನು ನಿರ್ಮಿಸಲಾಯಿತು. ವಾದಿರಾಜ ಆಚಾರ್ಯರು ಕೊಟ್ಟ ಪಲ್ಲಕ್ಕಿ ಶ್ರೀ ವಿದ್ಯಾಧೀಶತೀರ್ಥರ ಶಿಷ್ಯ ಶ್ರೀ ವಿದ್ಯಾಪೂರ್ಣತೀರ್ಥರಿಗೆ ಬಂತು. ಅವರು ಪಲ್ಲಕ್ಕಿಯಲ್ಲಿದ್ದ ಚಿನ್ನ ಮತ್ತು ತಮ್ಮ ಮಠದ ಚಿನ್ನವನ್ನೂ ಸೇರಿಸಿ ಶ್ರೀಕೃಷ್ಣನಿಗೆ ಸುವರ್ಣ ಪಲ್ಲಕ್ಕಿ ಮಾಡಿದರು. ಈ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರು 2006ರ ಅವರದೇ ಪರ್ಯಾಯದವರೆಗೂ ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಬರುತ್ತಿದ್ದರು. ಅದು ಶಿಥಿಲವಾದ ಕಾರಣ ಬಳಿಕ ಹೊಸ ಪಲ್ಲಕ್ಕಿ ಮಾಡಿಸಿದರು. ಹಳೆಯ ಐತಿಹಾಸಿಕ ಪಲ್ಲಕ್ಕಿ ಈಗಲೂ ಕೃಷ್ಣಾಪುರ ಮಠದಲ್ಲಿದೆ.
ಬೆಂಗಳೂರಿನಲ್ಲಿ ವೃಂದಾವನಸ್ಥರಾದ ಶ್ರೀ ವಿದ್ಯಾಧೀಶತೀರ್ಥರು ಆ ಕಾಲದಲ್ಲಿ ದಾಖಲೆಯಾದ 12 ಸುಧಾ ಮಂಗಲೋತ್ಸವವನ್ನು ನಡೆಸಿದವರು ಎಂಬ ಪ್ರಖ್ಯಾತಿ ಇತ್ತು. ಈಗ ಪೇಜಾವರ ಶ್ರೀ ವಿಶ್ವೇಶತೀರ್ಥರು 39ನೆಯ ಸುಧಾ ಮಂಗಲೋತ್ಸವ ನಡೆಸಲು ಅಣಿಯಾಗಿದ್ದರು. ಆಗ ಶ್ರೀ ವಿದ್ಯಾಧೀಶತೀರ್ಥರು ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಹಿಂದಿರುಗುವಾಗ ನಿರ್ಯಾಣ ಹೊಂದಿದರೆ, ಈಗ ಪೇಜಾವರ ಶ್ರೀಗಳು ಡಿ. 17ರಂದು ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಹಿಂದಿರುಗುವಾಗ ಜ್ವರಬಾಧೆ ಬಂದು ಡಿ. 29ರಂದು ಇಹಲೋಕ ತ್ಯಜಿಸಿದರು.
* ರಾಜು ಖಾರ್ವಿ ಕೊಡೇರಿ