Advertisement

ಸಮರೋಪಾದಿಯಲ್ಲಿ ಶೌಚಾಲಯ ನಿರ್ಮಾಣ

03:17 PM Nov 30, 2017 | Team Udayavani |

ಹಾವೇರಿ: ಇಡೀ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜಿಲ್ಲಾಡಳಿತ ಪಣ ತೊಟ್ಟು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ಇದೇ ರೀತಿ ಮುಂದುವರಿದರೆ ಡಿ. 10ರ ವೇಳೆಗೆ ಇಡೀ ಜಿಲ್ಲೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತಗೊಳ್ಳಲಿದೆ.

Advertisement

ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಆಂದೋಲನ ರೀತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ಆಡಳಿತ, ಪಟ್ಟಣ ಪ್ರದೇಶದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಎಲ್ಲ ಸಿಬ್ಬಂದಿಗಳನ್ನು ಶೌಚಾಲಯ ನಿರ್ಮಾಣ ಹಾಗೂ ಜಾಗೃತಿಗಾಗಿ ನಿಯೋಜಿಸಿದೆ. ಇನ್ನು ಜಿಪಂ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರನ್ನು ಬಳಸಿಕೊಳ್ಳುತ್ತಿದೆ.

ಶಾಲಾ ಶಿಕ್ಷಕರು, ಆಶಾ ಅಂಗನವಾಡಿ ಕಾರ್ಯಕರ್ತೆಯರು ಶೌಚಾಲಯ ಇಲ್ಲದ ಮನೆ ಮನೆಗೆ ಹೋಗಿ ಶೌಚಾಲಯ
ನಿರ್ಮಾಣಕ್ಕೆ ಬೇಕಾದ ಅವಶ್ಯ ದಾಖಲೆಗಳಾದ ಬಿಪಿಎಲ್‌ ಪಡಿತರ ಚೀಟಿ, ಆಧಾರ್‌ ಪತ್ರ, ಬ್ಯಾಂಕ್‌ ಪಾಸ್‌ಬುಕ್‌ ನಕಲು ಪ್ರತಿಗಳನ್ನು ಸಂಗ್ರಹಿಸುತ್ತಿದ್ದಾರೆ.  ಗ್ರಾಪಂ ಸಿಬ್ಬಂದಿಗಳು ಮಾಹಿತಿ, ದಾಖಲೆಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿ ಅಪ್‌ಲೋಡ್‌ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಾರ್ಯ ಮೇಲುಸ್ತುವಾರಿಗೆ ಹಂತ ಹಂತವಾಗಿ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ.
ಒಟ್ಟಾರೆ ಪ್ರತಿಯೊಂದು ಕುಟುಂಬ ಶೌಚಾಲಯ ಹೊಂದುವಂತೆ ಮಾಡಲು ಆಡಳಿತ ವರ್ಗ ಪಣ ತೊಟ್ಟು ಕಾರ್ಯ ನಿರ್ವಹಿಸುತ್ತಿದೆ.

6616 ಬಾಕಿ: 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 1,95,974 ಕುಟುಂಬಗಳಿದ್ದು, ಇವುಗಳಲ್ಲಿ ಈವರೆಗೆ
(ನ. 28ವರೆಗೆ) 1,89,358 ಕುಟುಂಬಗಳು ಶೌಚಾಲಯ ಹೊಂದಿವೆ. ಸಮೀಕ್ಷೆ ಮೊದಲು ಜಿಲ್ಲೆಯಲ್ಲಿ 63,548 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಈವರೆಗೆ ಹೊಸದಾಗಿ ಜಿಲ್ಲೆಯಲ್ಲಿ 1,25,810 ಶೌಚಾಲಯಗಳನ್ನು ಕಟ್ಟಲಾಗಿದೆ. ಈಗ ಜಿಲ್ಲೆಯಲ್ಲಿ 6616 ಕುಟುಂಬಗಳು  ಶೌಚಾಲಯ ಹೊಂದುವುದು ಬಾಕಿ ಇದ್ದು, ಡಿ. 10ರೊಳಗೆ ಈ ಕುಟುಂಬಗಳಿಗೂ ಶೌಚಾಲಯ ನಿರ್ಮಿಸಿ ಇಡೀ ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸಲು ಆಡಳಿತವರ್ಗ ಸಜ್ಜಾಗಿದೆ.

ಜಿಲ್ಲೆಯ ಶಿಗ್ಗಾವಿ ತಾಲೂಕು ಮಾತ್ರ ಸಂಪೂರ್ಣವಾಗಿ ಗುರಿ ಸಾಧಿಸಿದ್ದು ಇದು ಕಳೆದ ಅಕ್ಟೋಬರ್‌ 2ರಂದೇ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಘೋಷಿಸಲ್ಪಿಟ್ಟಿದೆ. ಈ ತಾಲೂಕಿನಲ್ಲಿರುವ ಎಲ್ಲ 22,839 ಗ್ರಾಮೀಣ ಕುಟುಂಬಗಳು ಶೌಚಾಲಯ ಹೊಂದಿವೆ.

Advertisement

ತಾಲೂಕುವಾರು ಪ್ರಗತಿ: ಬ್ಯಾಡಗಿ ತಾಲೂಕಿನಲ್ಲಿ 20,584 ಕುಟುಂಬಗಳಿದ್ದು, 20,275 ಕುಟುಂಬಗಳು ಶೌಚಾಲಯ ಹೊಂದಿವೆ. ಹಾನಗಲ್ಲ ತಾಲೂಕಿನಲ್ಲಿ 34974 ಕುಟುಂಬಗಳಿದ್ದು 33,621 ಕುಟುಂಬಗಳು ಶೌಚಾಲಯ ಕಟ್ಟಿಕೊಂಡಿವೆ. ಹಾವೇರಿ
ತಾಲೂಕಿನಲ್ಲಿ 30125 ಕುಟುಂಬಗಳಿದ್ದು 29,964 ಕುಟುಂಬಗಳು ಶೌಚಾಲಯ ಹೊಂದಿವೆ. ಹಿರೇಕೆರೂರು ತಾಲೂಕಿನಲ್ಲಿ 36,204 ಕುಟುಂಬಗಳಲ್ಲಿ 35582 ಕುಟುಂಬಗಳು ಶೌಚಾಲಯ ಹೊಂದಿವೆ. ರಾಣಿಬೆನ್ನೂರು ತಾಲೂಕಿನಲ್ಲಿ 32844 ಕುಟುಂಬಗಳಲ್ಲಿ 28876 ಕುಟುಂಬಗಳು ಶೌಚಾಲಯ ಕಟ್ಟಿಕೊಂಡಿವೆ. ಸವಣೂರು ತಾಲೂಕಿನಲ್ಲಿ 15384 ಕುಟುಂಬಗಳಲ್ಲಿ  18201 ಕುಟುಂಬಗಳು ಶೌಚಾಲಯ ಹೊಂದಿವೆ. 

ಬಾಕಿ ವಿವರ: ಕಟ್ಟಲು ಬಾಕಿ ಇರುವ ಶೌಚಾಲಯಗಳ ಸಂಖ್ಯೆ ಗಮನಿಸಿದರೆ ರಾಣಿಬೆನ್ನೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 3,988 ಶೌಚಾಲಯಗಳು ನಿರ್ಮಾಣವಾಗುವುದು ಬಾಕಿ ಇದೆ. ಬ್ಯಾಡಗಿ ತಾಲೂಕಿನಲ್ಲಿ 309, ಹಾನಗಲ್ಲ ತಾಲೂಕಿನಲ್ಲಿ 1353, ಹಾವೇರಿ ತಾಲೂಕಿನಲ್ಲಿ 161, ಹಿರೇಕೆರೂರು ತಾಲೂಕಿನಲ್ಲಿ 622, ಸವಣೂರು ತಾಲೂಕಿನಲ್ಲಿ 183 ಶೌಚಾಲಯ ಕಟ್ಟುವುದು ಬಾಕಿ ಇದೆ. ಇನ್ನು ಪಟ್ಟಣಗಳಲ್ಲಿ ಒಂದಿಷ್ಟು ಕುಟುಂಬಗಳು ಕಟ್ಟಿಕೊಳ್ಳುವುದು ಬಾಕಿ ಇದ್ದು ಪಪಂ, ಪುರಸಭೆ, ನಗರಸಭೆಗಳ ಎಲ್ಲ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಶೌಚಖಾನೆಗಳನ್ನು ಪ್ರತಿ ಕುಟುಂಬ ಕಡ್ಡಾಯವಾಗಿ ಕಟ್ಟಿಕೊಳ್ಳುವಂತೆ ಮಾಡಬೇಕು ಎಂದು ಪಣ ತೊಟ್ಟಿರುವ ಅಧಿಕಾರಿ ವರ್ಗ, ಈ ಬಾರಿ ಶೌಚಖಾನೆ ಕಟ್ಟಿಕೊಳ್ಳದಿದ್ದರೆ ಪಡಿತರ ಆಹಾರಧಾನ್ಯ ಕೊಡುವುದಿಲ್ಲ ಎಂದು ಫರ್ಮಾನು ಕೂಡ ಹೊರಡಿಸಿದ್ದಾರೆ. ಅಷ್ಟೆ ಅಲ್ಲ ಪಡಿತರ ಆಹಾರಧಾನ್ಯ, ವಿವಿಧ ಯೋಜನೆಗಳ ಮಾಸಾಶನ, ಸರ್ಕಾರಿ ಸೌಲಭ್ಯ ಕಡಿತಗೊಳಿಸುವ ಬೆದರಿಕೆಯೊಡ್ಡಿ ಶೌಚಾಲಯ ಕಟ್ಟುವ ಗುರಿ ತಲುಪುವ ಪ್ರಯತ್ನ ಅಧಿಕಾರಿಗಳಿಂದ ನಡೆದಿದೆ. 

10ರೊಳಗೆ ಗುರಿ ಪೂರ್ಣ 
ಜಿಲ್ಲೆಯಲ್ಲಿ ಈವರೆಗೆ 1,89,358 ಶೌಚಾಲಯಗಳನ್ನು ಕಟ್ಟಲಾಗಿದ್ದು, ಇನ್ನು ಕೇವಲ 6616 ಶೌಚಾಲಯಗಳನ್ನು ಕಟ್ಟಬೇಕಿದೆ. ನವೆಂಬರ್‌ ಅಂತ್ಯದೊಳಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಶೇ. 100ರಷ್ಟು ಶೌಚಾಲಯ ನಿರ್ಮಾಣ ಪೂರ್ಣಗೊಳ್ಳಲಿದ್ದು ಉಳಿದ ಎರಡು ತಾಲೂಕುಗಳನ್ನು ಡಿ. 10ರೊಳಗೆ ಪೂರ್ಣಗೊಳಿಸಿ ಗುರಿ ಮುಟ್ಟಲಾಗುವುದು. ಇದಕ್ಕಾಗಿ ಅಧಿಕಾರಿ ವರ್ಗ, 
ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಮರೋಪಾದಿಯಲ್ಲಿ ಕಾರ್ಯ ನಡೆದಿದೆ.
 ಬಿ. ಗೋವಿಂದರಾಜ್‌, ಜಿಲ್ಲಾ ಸಮಾಲೋಚಕರು, ಸ್ವಚ್ಛ ಭಾರತ್‌ ಮಿಷನ್‌.

ಸಚಿವರ ಕನಸು ಜಿಲ್ಲೆಯಲ್ಲಿ ನನಸು ಗ್ರಾಪಂ ಸಿಬ್ಬಂದಿ, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರೆಲ್ಲರ
ಸಹಕಾರದೊಂದಿಗೆ ಶೌಚಾಲಯ ನಿರ್ಮಾಣ ಕಾರ್ಯ ಯುದೊಪಾದಿಯಲ್ಲಿ ನಡೆಯುತ್ತಿದೆ. ಈ ವರ್ಷದ ಡಿಸೆಂಬರ್‌ ಒಳಗೆ ಎಲ್ಲ ಕುಟುಂಬಳಿಗೆ ಶೌಚಾಲಯ ಕಟ್ಟಿಸಿ, ಇಡೀ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗುವುದು. ತನ್ಮೂಲಕ ಬಯಲು  ಬಹಿರ್ದೆಸೆ ಮುಕ್ತಗೊಳಿಸುವ ಗ್ರಾಮೀಣಾಭಿವೃದ್ಧಿ ಸಚಿವರ ಕನಸು ಜಿಲ್ಲೆಯಲ್ಲಿ ನನಸಾಗಲಿದೆ. 
 ಕೊಟ್ರೇಶಪ್ಪ ಬಸೇಗಣ್ಣಿ, ಅಧ್ಯಕ್ಷರು, ಜಿಪಂ ಹಾವೇರಿ.

Advertisement

Udayavani is now on Telegram. Click here to join our channel and stay updated with the latest news.

Next