Advertisement

ಶೀಘ್ರವೇ ವಾಲ್ಮೀಕಿ ಸಭಾಭವನ ನಿರ್ಮಾಣ

12:56 PM Oct 14, 2019 | Suhan S |

ಹಾವೇರಿ: ನೆನೆಗುದಿಗೆ ಬಿದ್ದಿರುವ ನಗರದಲ್ಲಿನ ವಾಲ್ಮೀಕಿ ಸಭಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ರವಿವಾರ ಸಂಜೆ ನಗರದ ಕೆಇಬಿ ಸಭಾ ಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಎಲ್‌.ಜಿ. ಹಾವನೂರ ಸ್ಮಾರಕ ಭವನಕ್ಕೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು. ವಾಲ್ಮೀಕಿ ವೃತ್ತ ನಿರ್ಮಾಣ ಮಾಡಲಾಗುವುದು. ಶೇ. 7.5 ಮೀಸಲಾತಿ ಕುರಿತು ರಾಜ್ಯದಲ್ಲಿ ಸಮಿತಿ ರಚಿಸಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದ ಅವರು, ವಾಲ್ಮೀಕಿ ಸಮಾಜವು ಹಿಂದುಳಿದ ಸಮಾಜವಾಗಿದ್ದು ಸಮಾಜದ ಏಳ್ಗೆಗಾಗಿ ಮೊದಲು ಶಿಕ್ಷಣ ಉದ್ಯೋಗ, ರಾಜಕೀಯ ಸ್ಥಾನ ಮಾನ ಸಿಗಬೇಕಾಗಿದೆ. ಇದಕ್ಕೆ ಸಂಘಟಿತ ಹೋರಾಟ ಅವಶ್ಯಕವಾಗಿದೆ ಎಂದರು.

ಮಹರ್ಷಿ ವಾಲ್ಮೀಕಿ ಇಡೀ ಮಾನವ ಕುಲದಗುರು. ಪರಿವರ್ತನೆಯ ಹರಿಕಾರ. ವಾಲ್ಮೀಕಿ ವಿಶ್ವಮಾನ್ಯರಾಗಿ ರಾಮಾಯಣ ಎಂಬ ಪುರಾಣ ಕೃತಿಯನ್ನು ಜಗತ್ತಿಗೆ ಕೊಟ್ಟಿದ್ದಾರೆ. ಹಲವಾರು ರಾಮಾಯಣ ಕೃತಿಗಳಿದ್ದರೂ ಅದರಲ್ಲಿ ವಾಲ್ಮೀಕಿ ಕೃತಿ ಶೇಷ್ಠ. ಆ ಕೃತಿಯಲ್ಲಿ ಗುರು-ಶಿಷ್ಯರ ಸಂಬಂಧ, ಅಣ್ಣ-ತಮ್ಮಂದಿರ ಸಂಬಂಧ, ಭಕ್ತಿ-ಭಾವದ ಸಂಬಂಧಗಳು ಇದೆ ಎಂದರು.

ಇದೇ ವೇಳೆ ರಾಣಿಬೆನ್ನೂರು, ಹಿರೇಕೆರೂರ ಭಾಗದ ಅರಣ್ಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ರಮೇಶ ತೆವರಿ ಉಪನ್ಯಾಸ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಜಿಪಂ ಸದಸ್ಯರಾದ ಸಿದ್ಧರಾಜ ಕಲಕೋಟಿ, ಎನ್‌.ಎಂ. ಈಟೇರ್‌, ಕೆ.ಆರ್‌. ಬಸೇಗಣ್ಣಿ, ವಿರುಪಾಕ್ಷಪ್ಪ ಕಡ್ಲಿ, ಪರಮೇಶಪ್ಪ ಮೇಗಳಮನಿ, ಜಿಲ್ಲಾ ಧಿಕಾರಿ ಕೃಷ್ಣ ಭಾಜಪೇಯಿ, ಎಸ್‌ಪಿ ದೇವರಾಜು, ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಸಮಾಜದ ಮುಖಂಡರು ಇದ್ದರು. ರಮೇಶ ಆನವಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾಗರಾಜ ನಡುವಿನಮಠ ನಿರೂಪಿಸಿದರು. ಭವ್ಯ ಮೆರವಣಿಗೆ: ರವಿವಾರ ಬೆಳಗ್ಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು. ಪುರಸಿದ್ಧೇಶ್ವರ ದೇವಸ್ಥಾನದ ಹತ್ತಿರ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಹುಬ್ಬಳ್ಳಿಯ ದೊಡ್ಡಹಲಗೆ ಮೇಳದವರು ಭಾಗ ವಹಿಸಿದ್ದು, ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಇನ್ನು ಡೊಳ್ಳು ತಂಡ ದವರು, ಮೇಳದವರು, ವಾದ್ಯ ವೃಂದದವರು ಭಾಗವಹಿಸಿ ತಮ್ಮ ಕಲಾಪ್ರದರ್ಶನ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ವಾಲ್ಮೀಕಿ ಸಂಘದವರು ನಿರ್ಮಾಣ ಮಾಡಿ ತಂದಿದ್ದ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next