ಜಮಖಂಡಿ: ಗ್ರೀನ್‌ವೀಕ್ ಆಚರಣೆ ನಿಮಿತ್ತ ನಗರದಲ್ಲಿ ರವಿವಾರ ನಡೆದ ಗ್ರೀನ್ ಮತ್ತು ಕ್ಲೀನ್ ಜಮಖಂಡಿ ಯೋಜನೆಯ ಶ್ರಮದಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಶ್ರಮದಾನದಲ್ಲಿ ನಗರದ 800ಕ್ಕೂ ಹೆಚ್ಚು ಜನರು 700 ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಎಸ್.ಆರ್.ಎ.ಕ್ಲಬ್ ಆವರಣದಲ್ಲಿ ರವಿವಾರ ಗ್ರೀನ್‌ವೀಕ್ ಆಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರೀನ್‌ವೀಕ್ ಶ್ರಮದಾನ ನಗರದ ಜನತೆಯ ಮನಸ್ಸು ಗೆದ್ದಿದೆ. ಸ್ವ-ಇಚ್ಚೆಯಿಂದ ಆಗಮಿಸಿದ ಜನರು, ಅಧಿಕಾರಿಗಳು ಸಸಿ ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಳ್ವತ್ವ ವಹಿಸಿದ್ದು ಶ್ಲಾಘನಿಯ. ಪ್ರತಿಯೊಬ್ಬರು ಆಸಕ್ತಿಯಿಂದ ಪಾಲ್ಗೊಳ್ಳುವ ಮುಖಾಂತರ ಸಿಕ್ಕಲಗಾರ ಬಡಾವಣೆಯಿಂದ ಎಸ್‌ಆರ್‌ಎ.ಕ್ಲಬ್‌ದವರೆಗೆ ರಸ್ತೆ ಎರಡು ಬದಿಯಲ್ಲಿ 700ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಶಿಕ್ಷಣ ಇಲಾಖೆಯಿಂದ ಮೂರು ಶಿಕ್ಷಕರ ತಂಡ ರಚಿಸಲಾಗಿದ್ದು, ಬರತಕ್ಕ ದಿನಗಳಲ್ಲಿ ಶಾಲಾ ಆವರಣದಲ್ಲಿ ಗಿಡ ಮರ ನೆಡುವುದಕ್ಕೆ ಕ್ರಿಯಾ ಯೋಜನೆ ಸಿದ್ಧತೆ ನಡೆದಿದೆ ಎಂದರು.
ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿದರು. ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಸಿ ನೆಡುವ ಶ್ರಮದಾನಕ್ಕೆ ಚಾಲನೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳಾದ ಸುರೇಶ ತೇಲಿ, ಎಸ್.ಡಿ. ಬಬಲಾದಿ, ನಗರಸಭೆ ಅಭಿಯಂತರ ಆರ್.ಆರ್. ಕುಲಕರ್ಣಿ, ಪಿಡ್ಲೂಡಿ ಅಭಿಯಂತರ ಆದಾಪುರ, ರಾಯಲ್ ಪ್ಯಾಲೇಸ್ ಶಾಲಾ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ನಗರಸಭೆ ಸದಸ್ಯರಾದ ದಾನೇಶ ಘಾಟಗೆ, ಸಿದ್ದು ಮೀಸಿ, ಉಪನ್ಯಾಸಕ ಎನ್.ವಿ.ಅಸ್ಕಿ ಇದ್ದರು.