Advertisement

2020ಕ್ಕೆ ಕೈಗಾದ 5, 6ನೇ ಘಟಕ ನಿರ್ಮಾಣ ಶುರು

06:00 AM Dec 04, 2018 | |

ಕಾರವಾರ(ಕೈಗಾ): ಕೈಗಾದಲ್ಲಿ 700 ಮೆಗಾವ್ಯಾಟ್‌ ಸಾಮರ್ಥ್ಯದ ಎರಡು ಹೊಸ ಘಟಕಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ನೀಡಿದ್ದು, ಪರಿಸರ ಸಂಬಂಧಿ  ಅಧ್ಯಯನಗಳು ಸಹ ಮುಗಿದಿವೆ. ಕೈಗಾದ 5 ಮತ್ತು 6ನೇ ಘಟಕಗಳ ನಿರ್ಮಾಣ 2020ರಲ್ಲಿ ಪ್ರಾರಂಭವಾಗಲಿದೆ ಎಂದು ಕೈಗಾ ಅಣುಸ್ಥಾವರ 3 ಮತ್ತು 4ನೇ ಘಟಕಗಳ ನಿರ್ದೇಶಕ ಜೆ.ಆರ್‌. ದೇಶಪಾಂಡೆ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಮತ್ತು 6ನೇ ಘಟಕಗಳು 2026ರಲ್ಲಿ ಅಣುವಿದ್ಯುತ್‌ ಉತ್ಪಾದನೆ ಆರಂಭಿಸಲಿವೆ. 1,400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಿಂದ ದೇಶದ ಅಣುವಿ ದ್ಯುತ್‌ ಉತ್ಪಾದನೆಗೆ ಕೈಗಾ ತನ್ನದೇ ಆದ ಕೊಡುಗೆ ನೀಡಲಿದೆ. ನೂತನ ಘಟಕಗಳಿಂದ ಉತ್ಪಾದನೆಯಾದ ಅಣು ವಿದ್ಯುತ್‌ನಲ್ಲಿ ಕರ್ನಾಟಕಕ್ಕೆ ಶೇ.50ರಷ್ಟು ಅಂದರೆ 700 ಮೆಗಾವ್ಯಾಟ್‌
ವಿದ್ಯುತ್‌ ದಕ್ಕಲಿದೆ. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿ, ಕೈಗಾರಿಕೆ ಸೇರಿ ವಿದ್ಯುತ್‌ ಬೇಡಿಕೆ ಪೂರೈಕೆಗೆ ನೆರವಾಗಲಿದೆ ಎಂದರು.

ಕೈಗಾ ಘಟಕ 5 ಮತ್ತು 6 ನಿರ್ಮಾಣ ಆರಂಭವಾದಾಗ ನೇರವಾಗಿ 4,000 ದಿಂದ 5,000 ಜನರಿಗೆ ಹೊರಗುತ್ತಿಗೆ ಕೆಲಸ ಸಿಗಲಿದೆ. ಪರೋಕ್ಷ ಉದ್ಯೋಗ ಸೃಷ್ಟಿ ಸಹ ಆಗಲಿದೆ. ಅಲ್ಲದೇ ಸ್ಥಳೀಯ ಗುತ್ತಿಗೆದಾರರಿಗೆ ಬಹುದೊಡ್ಡ ಪ್ರಮಾಣದಲ್ಲಿ ಗುತ್ತಿಗೆ ಸಿಗಲಿವೆ. ಘಟಕ ನಿರ್ಮಾಣದ ನಂತರ 789 ಕಾಯಂ ಉದ್ಯೋಗ ಸೃಷ್ಟಿಯಾಗಲಿದೆ. ನೂತನ ಘಟಕಗಳ ನೌಕರರಿಗೆ ಹೊಸ ಟೌನ್‌ಶಿಪ್‌ ಸಹ ನಿರ್ಮಾಣವಾಗಲಿದ್ದು, ಒಟ್ಟು ಯೋಜನಾ ವೆಚ್ಚ 21,000 ಕೋಟಿ ರೂ. ಆಗಿದೆ ಎಂದರು. ಹೊಸದಾಗಿ ಭೂಮಿ ಬೇಕಿಲ್ಲ: ಕೈಗಾದಲ್ಲಿ ಅಣುಸ್ಥಾವರ ನಿರ್ಮಿಸಲು 1987ರಲ್ಲೇ ಯೋಜನೆ ರೂಪುಗೊಂಡಾಗ 6 ಘಟಕಗಳ ಸ್ಥಾಪನೆಗೆ ಪರಿಸರ ಅನುಮತಿ ಪಡೆಯಲಾಗಿತ್ತು. ಸರ್ಕಾರ 1,665 ಹೆಕ್ಟೇರ್‌ ಭೂಮಿ ಆಗಲೇ ನೀಡಿತ್ತು. 829 ಹೆಕ್ಟೇರ್‌ ಭೂಮಿ ಕದ್ರಾ ಅಣೆಕಟ್ಟಿನ ಹಿನ್ನೀರು ವ್ಯಾಪ್ತಿಯಲ್ಲಿದೆ.
ಉಳಿದ 836 ಹೆಕ್ಟೇರ್‌ನಲ್ಲಿ 665 ಹೆಕ್ಟೇರ್‌ ಅರಣ್ಯ ಭೂಮಿಯಾ ಗಿದೆ. ಇದರಲ್ಲಿ 120 ಹೆಕ್ಟೇರ್‌ ಭೂಮಿಯನ್ನು ಕೈಗಾ ಅಣುಸ್ಥಾವರದ ಆರು ಘಟಕಗಳ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. 1988ರಲ್ಲಿ ಸ್ಥಾವರ ಸ್ಥಾಪನೆಗೆ ಸರ್ಕಾರದ ಆದೇಶ ಪತ್ರ ಸಹ
ಹೊರಡಿಸಲಾಗಿತ್ತು. ಕೈಗಾ ಘಟಕ 1-4 ನಿರ್ಮಾಣಕ್ಕೆ 65.91 ಹೆಕ್ಟೇರ್‌ ಭೂಮಿ ಬಳಸಲಾಗಿದೆ. ಘಟಕ 5-6 ಸ್ಥಾಪನೆಗೆ ಬೇಕಾದ
54.09 ಹೆಕ್ಟೇರ್‌ ಭೂಮಿ ನಮ್ಮ ಬಳಿ ಇದ್ದು, ಹೆಚ್ಚುವರಿ ಭೂಮಿ ಬೇಕಾಗಿಲ್ಲ ಎಂದರು.

ನಿರಾಶ್ರಿತರ ಸಮಸ್ಯೆಯೂ ಇಲ್ಲ: ಮೊದಲ 4 ಘಟಕಗಳ ಸ್ಥಾಪನೆಯಾದಾಗ ನಿರಾಶ್ರಿತರಾದ 96 ಕುಟುಂಬಗಳಿಗೆ ಪರಿಹಾರ  ನೀಡಲಾಗಿದೆ. ಪ್ರತಿ ಕುಟುಂಬದ ಒಬ್ಬರಿಗೆ ನೌಕರಿ ಸಹ ನೀಡಲಾಗಿದೆ. ಪ್ರಸ್ತುತ 1ರಿಂದ 4ನೇ ಘಟಕಗಳಲ್ಲಿ ಕರ್ನಾಟಕದವರೇ ಶೇ.16ರಷ್ಟು ನೌಕರರಿದ್ದಾರೆ. ಶೇ.38 ಉತ್ತರ ಕನ್ನಡ ಜಿಲ್ಲೆಯ ನೌಕರರಿದ್ದಾರೆ. ನಿರ್ಮಾಣ ಹಂತದಲ್ಲಿ ಶೇ.90ರಷ್ಟು ಕಾಮಗಾರಿ ಗುತ್ತಿಗೆಗಳು ಸ್ಥಳೀಯರಿಗೆ ದೊರೆತಿವೆ. ಘಟಕ 5 ಮತ್ತು 6 ನಿರ್ಮಾಣದ ವೇಳೆ ಸಹ ಇದೇ ಪದ್ಧತಿ ಮುಂದುವರಿಯಲಿದೆ ಎಂದರು. 

ಕಲ್ಲಿದ್ದಲು ಆಧಾರಿತ ವಿದ್ಯುತ್‌ ಘಟಕಗಳು ತುಂಬಾ ದಿನ ನಡೆಯುವ ಲಕ್ಷಣಗಳಿಲ್ಲ. ಗುಣಮಟ್ಟದ ಕಲ್ಲಿದ್ದಲು ದೊರೆಯುತ್ತಿಲ್ಲ. ಜಲ ವಿದ್ಯುತ್‌ ಘಟಕಗಳು ಮಳೆಯಾಶ್ರಿತವಾಗಿವೆ. ಹಾಗಾಗಿ ಭಾರತದಲ್ಲಿ ಅಣುವಿದ್ಯುತ್‌ ಮಾತ್ರ ಪರ್ಯಾಯ ಸಾಧ್ಯತೆಯಾಗಿದೆ. ಪರಿಸರ ಸ್ನೇಹಿ ಅಣುವಿದ್ಯುತ್‌ ಉತ್ಪಾದನೆ ದೇಶದಲ್ಲಿ ನಡೆದಿದೆ. ದೇಶದಲ್ಲಿ ಹತ್ತು ಹೊರ ರಿಯಾಕ್ಟರ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ದೇಶದಲ್ಲಿ 6789 ಮೆಗಾವ್ಯಾಟ್‌ ಅಣುವಿದ್ಯುತ್‌ ಉತ್ಪಾದನೆ ಆಗುತ್ತಿದೆ. 2024-25ರ ವೇಳೆಗೆ
12980 ಮೆಗಾವ್ಯಾಟ್‌ ಅಣು ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಇದರಲ್ಲಿ ಕೈಗಾದ 700 ಮೆಗಾ ವ್ಯಾಟ್‌ ಸಾಮರ್ಥ್ಯದ ಘಟಕಗಳು ಸೇರಿವೆ ಎಂದರು.  ಸುದ್ದಿಗೋಷ್ಠಿಯಲ್ಲಿ ಘಟಕ 1 ಮತ್ತು 2ರ ನಿರ್ದೇಶಕ ಜಿ.ಪಿ. ರೆಡ್ಡಿ, ಕನಸ್ಟ್ರಕ್ಷನ್‌ ಎಂಜಿನಿಯರ್‌
ಪಿ.ಮೋಹನ್‌, ಟಿ.ಪ್ರೇಮಕುಮಾರ್‌ ಇದ್ದರು.

Advertisement

ಮತ್ತೂಂದು ವಿಶ್ವ ದಾಖಲೆಯತ್ತ ಕೈಗಾ 
ಕಾರವಾರ: ಕೈಗಾ ಅಣು ಸ್ಥಾವರ ಘಟಕ-1 ಸತತವಾಗಿ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದು, ಮತ್ತೂಂದು ವಿಶ್ವ ದಾಖಲೆಯತ್ತ ಹೆಜ್ಜೆ ಹಾಕಿದೆ ಎಂದು ಕೈಗಾ ಅಣು ಸ್ಥಾವರದ ಘಟಕ 3-4ರ ಸ್ಥಾನಿಕ ನಿರ್ದೇಶಕ ಜೆ.ಆರ್‌. ದೇಶಪಾಂಡೆ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆನಡಾದ ಅಣು ವಿದ್ಯುತ್‌ ಸ್ಥಾವರ ಸತತವಾಗಿ 940 ದಿನ ಅಣು ವಿದ್ಯುತ್‌ ಉತ್ಪಾದಿಸಿದ ದಾಖಲೆ ಇದೆ. ಈ ದಾಖಲೆಯನ್ನು ಕೈಗಾ ಅಣುಸ್ಥಾವರ ಘಟಕ-1 ಇದೇ ಡಿ.10ರಂದು ಹಿಂದಿಕ್ಕಿ ವಿಶ್ವ ದಾಖಲೆ ಮಾಡಲಿದೆ. ಈಗಾಗಲೇ ಭಾರಜಲ ಅಣು ವಿದ್ಯುತ್‌ ಸ್ಥಾವರಗಳ ಪೈಕಿ 856 ದಿನ ಸತತವಾಗಿ ವಿದ್ಯುತ್‌ ಉತ್ಪಾದಿಸಿ ಕೈಗಾ ವಿಶ್ವದಾಖಲೆ ಮಾಡಿದೆ. ಉನ್ನತ ತಂತ್ರಜ್ಞಾನದ ಅಣು ಘಟಕ ಕೆನಡಾದಲ್ಲಿ 940 ದಿನ ಸತತವಾಗಿ ವಿದ್ಯುತ್‌ ಉತ್ಪಾದಿಸಿದ್ದು, ಇದನ್ನು ಮೀರಿಸುವತ್ತ ಕೈಗಾ ಘಟಕ-1ನೇ ರಿಯಾಕ್ಟರ್‌ ಕಾರ್ಯೋನ್ಮುಖ ವಾಗಿದೆ. ಇದೀಗ 934 ದಿನ ಸತತವಾಗಿ ವಿದ್ಯುತ್‌ ಉತ್ಪಾದನೆ ಕೈಗಾ ಘಟಕ-1ರಲ್ಲಿ ನಡೆದಿದೆ. ಡಿ.10ರಂದು ಕೈಗಾ ವಿಶ್ವದಾಖಲೆ ಬರೆಯಲಿದೆ. ಅಲ್ಲದೇ ಡಿ.31ರ ತನಕ ಅಣು ವಿದ್ಯುತ್‌ ಉತ್ಪಾದನೆಗೆ ಎಇಆರ್‌ಬಿ ಅನುಮತಿ ನೀಡಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next