ರಬಕವಿ-ಬನಹಟ್ಟಿ: ಸೂಕ್ತವಾದ ಪ್ರದೇಶ ನೀಡಿದರೆ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. ಸಾಧ್ಯವಾದರೆ ಇದೇ ಬಜೆಟ್‌ನಲ್ಲಿ ಜವಳಿ ಪಾರ್ಕ್ ಗೆ ಅವಕಾಶ ನೀಡಲಾಗುವುದು ಎಂದು ರಾಜ್ಯ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು. ಶುಕ್ರವಾರ ಬನಹಟ್ಟಿ ಎಸ್‌ಆರ್‌ಎ ಮೈದಾನದಲ್ಲಿ ದೇವರದಾಸಿಮಯ್ಯ ಹಟಗಾರ ಜಗದ್ಗುರು ಚಿಕ್ಕರೇವಣಸಿದ್ಧ ಶಿವಶರಣರ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜವಳಿ ಪಾರ್ಕ್ ನಿರ್ಮಾಣದಿಂದ ಈ ಭಾಗದ 25ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು. ಹಟಗಾರ ಸಮುದಾಯವರು ಆರ್ಥಿಕವಾಗಿ, ಶೈಕ್ಷಣಿಕಾಗಿ ಅಭಿವೃದ್ಧಿ ಹೊಂದಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹಟಗಾರ ಸಮುದಾಯದ ಅಭಿವೃದ್ದಿಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಇನ್ನಷ್ಟು ಸೌಲಭ್ಯ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಟಗಾರ ಸಮಾಜದ ಉಪಾಧ್ಯಕ್ಷ ಶಂಕರ ಸೋರಗಾವಿ ಮಾತನಾಡಿ, ನೇಕಾರರ ಅಭಿವೃದ್ಧಿಗೆ ಸಂಬಂಧಪಟ್ಟ ಹಲವಾರು ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಗದದಲ್ಲಿ ಮಾತ್ರ ಉಳಿದಿವೆ. ನೇಕಾರಿಕೆಯ ಉದ್ಯೋಗ ನಶಿಸಿ ಹೋಗುತ್ತಿದೆ. ಜವಳಿ ಉದ್ಯಮಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಾಣ ವಾಗಬೇಕಾಗಿದೆ. ಮಹಾರಾಷ್ಟ್ರದಲ್ಲಿ ನೇಕಾರಿಕೆಯ ಉದ್ಯೋಗವು ಸಾಕಷ್ಟು ಅಭಿವೃದ್ಧಿಯಾಗಿದೆ.
ಅಲ್ಲಿಯಂತೆ ಇಲ್ಲಿಯೂ ಕೂಡಾ ಆಧುನಿಕ ಮಗ್ಗಗಳು ಬೇಕಾಗಿವೆ. ಈ ಮಗ್ಗಗಳನ್ನು ಸರ್ಕಾರ ರಿಯಾಯಿತಿ ದರದಲ್ಲಿ ನೀಡುವಲ್ಲಿ ಗಮನ ನೀಡಬೇಕಾಗಿದೆ. ನೇಕಾರರನ್ನೇ ನೇಕಾರ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಬೇಕು. ನೇಕಾರಿಕೆ ಮತ್ತು ನೇಕಾರರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಥಮ ಜಗದ್ಗುರು ಚಿಕ್ಕರೇವಣಸಿದ್ಧ ಶಿವಶರಣರ ಮೇಲೆ ಜವಾಬ್ದಾರಿಗಳು ಬಹಳಷ್ಟಿವೆ. ಎಲ್ಲರೂ ಗುರುಗಳ ಮಾತಿನಂತೆ ಮುಂದಿನ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.
ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯರು, ಚಿಮ್ಮಡ ವಿರಕ್ತಮಠದ ಪ್ರಭುದೇವರು, ಮೈಂದರಗಿಯ ಅಭಿನವ ರೇವಣಸಿದ್ಧ ಪಟ್ಟದ್ದೇವರು, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಆಳಂದದ ಚನ್ನಬಸವ ಪಟ್ಟದದೇವರು, ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿದರು. ಪೀಠಾರೋಹಣ ಸಮಿತಿ ಅಧ್ಯಕ್ಷ ಡಾ| ಎಂ.ಎಸ್.ದಡ್ಡೆನ್ನವರ ಆಧ್ಯಕ್ಷತೆ ವಹಿಸಿದ್ದರು.
ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ರಾಜು ಅಂಬಲಿ, ರಾಜೇಂದ್ರ ಭದ್ರನವರ, ಮಲ್ಲಿಕಾರ್ಜುನ ಬಾಣಕಾರ, ಶಂಕರ ಜಾಲಿಗಿಡದ, ಸಂಜಯ ಜವಳಗಿ, ಶಂಕರ ಜುಂಜಪ್ಪನವರ, ಮಲ್ಲಪ್ಪ ಭಾವಿಕಟ್ಟಿ ಉಪಸ್ಥಿತರಿದ್ದರು.