Advertisement

ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ

07:15 PM Feb 03, 2023 | Team Udayavani |

ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಸುತ್ತ ಮುತ್ತ ಸೂಕ್ತವಾದ ಪ್ರದೇಶ ನೀಡಿದರೆ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. ಸಾಧ್ಯವಾದರೆ ಇದೇ ಬಜೆಟ್‌ನಲ್ಲಿ ಜವಳಿ ಪಾರ್ಕಗೆ ಅವಕಾಶ ನೀಡಲಾಗುವುದು ಎಂದು ರಾಜ್ಯ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

Advertisement

ಶುಕ್ರವಾರ ಬನಹಟ್ಟಿ ಎಸ್‌ಆರ್‌ಎ ಮೈದಾನದಲ್ಲಿ ದೇವರದಾಸಿಮಯ್ಯ ಹಟಗಾರ ಜಗದ್ಗುರು ಚಿಕ್ಕರೇವಣಸಿದ್ಧ ಶಿವಶರಣರ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜವಳಿ ಪಾರ್ಕ್ ನಿರ್ಮಾಣದಿಂದ ಈ ಭಾಗದ ೨೫ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು. ಹಟಗಾರ ಸಮುದಾಯವರು ಆರ್ಥಿಕವಾಗಿ, ಶೈಕ್ಷಣಿಕಾಗಿ ಅಭಿವೃದ್ಧಿ ಹೊಂದಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹಟಗಾರ ಸಮುದಾಯದ ಅಭಿವೃದ್ದಿಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಇನ್ನಷ್ಟು ಸೌಲಭ್ಯಗಳನ್ನು ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಟಗಾರ ಸಮಾಜದ ಉಪಾಧ್ಯಕ್ಷ ಶಂಕರ ಸೋರಗಾವಿ ಮಾತನಾಡಿ, ನೇಕಾರರ ಅಭಿವೃದ್ಧಿಗೆ ಸಂಬಂಧಪಟ್ಟ ಹಲವಾರು ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಗದದಲ್ಲಿ ಮಾತ್ರ ಉಳಿದಿವೆ. ನೇಕಾರಿಕೆಯ ಉದ್ಯೋಗ ನಶಿಸಿ ಹೋಗುತ್ತಿದೆ. ಜವಳಿ ಉದ್ಯಮಕ್ಕೆ ಇಂದು ಸೂಕ್ತ ಮಾರುಕಟ್ಟೆ ನಿರ್ಮಾಣವಾಗಬೇಕಾಗಿದೆ. ಮಹಾರಾಷ್ಟ್ರದಲ್ಲಿ ನೇಕಾರಿಕೆಯ ಉದ್ಯೋಗವು ಸಾಕಷ್ಟು ಅಭಿವೃದ್ಧಿಯಾಗಿದೆ. ಅಲ್ಲಿಯಂತೆ ಇಲ್ಲಿಯೂ ಕೂಡಾ ಆಧುನಿಕ ಮಗ್ಗಗಳು ಬೇಕಾಗಿವೆ. ಈ ಮಗ್ಗಗಳನ್ನು ಸರ್ಕಾರ ರಿಯಾಯ್ತಿ ದರದಲ್ಲಿ ನೀಡುವಲ್ಲಿ ಗಮನ ನೀಡಬೇಕಾಗಿದೆ. ನೇಕಾರರನ್ನೇ ನೇಕಾರ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಬೇಕು ಎಂದರು.

ನೇಕಾರಿಕೆ ಮತ್ತು ನೇಕಾರರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಥಮ ಜಗದ್ಗುರು ಚಿಕ್ಕರೇವಣಸಿದ್ಧ ಶಿವಶರಣರ ಮೇಲ ಜವಾಬ್ದಾರಿಗಳು ಬಹಳಷ್ಟಿವೆ. ನಾವೆಲ್ಲರೂ ನಮ್ಮ ಗುರುಗಳ ಮಾತಿನಂತೆ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಶಂಕರ ಸೋರಗಾವಿ ತಿಳಿಸಿದರು.

Advertisement

ಹಳೇ ಹುಬ್ಬಳ್ಳಿಯ ವೀರಭಿಕ್ತಾವರ್ತಿ ಮಠದ ಶಿವಶಂಕರ ಶಿವಾಚಾರ್ಯರು, ಚಿಮ್ಮಡ ವಿರಕ್ತಮಠದ ಪ್ರಭುದೇವರು, ಮೈಂದರಗಿಯ ಅಭಿನವ ರೇವಣಸಿದ್ಧ ಪಟ್ಟದ್ದೇವರು, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಆಳಂದದ ಚನ್ನಬಸವ ಪಟ್ಟದದೇವರು, ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿದರು.

ಪೀಠಾರೋಹಣ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ದಡ್ಡೆನ್ನವರ ಆಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ರಾಜು ಅಂಬಲಿ, ರಾಜೇಂದ್ರ ಭದ್ರನವರ, ಮಲ್ಲಿಕಾರ್ಜುನ ಬಾಣಕಾರ, ಶಂಕರ ಜಾಲಿಗಿಡದ, ಸಂಜಯ ಜವಳಗಿ, ಶಂಕರ ಜುಂಜಪ್ಪನವರ, ಮಲ್ಲಪ್ಪ ಭಾವಿಕಟ್ಟಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಟಗಾರ ಸಮುದಾಯದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next