ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಿರ್ಮಾಣದ ಟೆಂಡರ್ ಲಾರ್ಸೆನ್ ಆ್ಯಂಡ್ ಟರ್ಬೊ ಸಂಸ್ಥೆಯ ಕಟ್ಟಡ ನಿರ್ಮಾಣ ಮತ್ತು ಕಾರ್ಖಾನೆ ವಹಿವಾಟು ವಿಭಾಗಕ್ಕೆ ಹಂಚಿಕೆಯಾಗಿದೆ.
ಒಟ್ಟು 3,035.9 ಕೋಟಿ ರೂ. ಮೌಲ್ಯದ ಕಾಮಗಾರಿಯಡಿ 2,55,000 ಚದರ ಅಡಿಯ 2ನೇ ಟರ್ಮಿನಲ್ ನಿರ್ಮಾಣದ ನಂತರ ವಿಮಾನ ನಿಲ್ದಾಣದ ಸಾಮರ್ಥ್ಯ ವಾರ್ಷಿಕ 25 ದಶಲಕ್ಷ ಪ್ರಯಾಣಿಕರ ಸಂಖ್ಯೆಗೆ ಹೆಚ್ಚಲಿದೆ. 2012ರ ಮಾರ್ಚ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ವಿನ್ಯಾಸ, ಇಂಜಿನಿಯರಿಂಗ್, ವಸ್ತುಗಳ ಸಂಗ್ರಹ, ನಿರ್ಮಾಣ, ಪರೀಕ್ಷೆ ಮತ್ತು ಟರ್ಮಿನಲ್ 2ಗೆ ಚಾಲನೆ ನೀಡುವ ಕಾರ್ಯ ಯೋಜನೆಯಲ್ಲಿ ಸೇರಿದೆ. ವಿಮಾನ ನಿಲ್ದಾಣದ ವ್ಯವಸ್ಥೆ, ಸೌಲಭ್ಯ ಮತ್ತು ಕಟ್ಟಡ ಒಳಗೊಂಡಿದೆ. ಎಲ್ ಆ್ಯಂಡ್ ಟಿ ಸಂಸ್ಥೆ ಸದ್ಯ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನೂತನ ದಕ್ಷಿಣ ಸಮಾನಾಂತರ ರನ್‌ವೇ, ಏಪ್ರನ್ ಮೊದಲಾದ ಕಟ್ಟಡ ಕಾಮಗಾರಿ ನಡೆಸುತ್ತಿದೆ.
ಜಾಗತಿ ಮಟ್ಟದಲ್ಲಿ ನಡೆದ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ ಆ್ಯಂಡ್ ಟಿ ಸಂಸ್ಥೆ ಟೆಂಡರ್ ಅರ್ಹತೆ ಪಡೆದಿದ್ದು, ಎರಡು ಸಂಸ್ಥೆಯ ಮುಖ್ಯಸ್ಥರು ಈ ಸಂಬಂಧ ಒಪ್ಪಂದ ಮಾಡಿಕೊಂಡಿದ್ದಾರೆ. 2ನೇ ಟರ್ಮಿನಲ್ ಯೋಜನೆ ಪೂರ್ಣಗೊಳಿಸಲು ಬೇಕಾದ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದೆ.
ಟರ್ಮಿನಲ್ ಸಿದ್ಧವಾದ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಶ್ವದರ್ಜೆಯ ಉತ್ಕೃಷ್ಠ ಸೇವೆ ಮುಂದುವರಿಸಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್ ತಿಳಿಸಿದರು.
2ನೇ ಟರ್ಮಿನಲ್‌ನ ವಿನ್ಯಾಸ ಯುಎಇ ಮೂಲದ ಸ್ಕಿಡ್‌ಮೋರ್, ಓವಿಂಗ್ಸ್ ಅಂಡ್ ಮೆರ್ರಿಲ್(ಎಸ್ ಒಎಂ) ಸಂಸ್ಥೆ ವಿನ್ಯಾಸಗೊಳಿಸಿದೆ. ಇದು ಜಗತ್ತಿನ ಅತಿದೊಡ್ಡ ವಾಸ್ತುಶಿಲ್ಪ ಮತ್ತು ನಗರ ಯೋಜನಾ ಸಂಸ್ಥೆಗಳಲ್ಲಿ ಒಂದಾಗಿದೆ. ವಿಶ್ವಾಸಾರ್ಹ ಸೇವೆ ಒದಗಿಸಲಿದ್ದೇವೆ ಎಂದು ಎಲ್ ಆ್ಯಂಡ್ ಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿದರು.