ಗೌರಿಬಿದನೂರು: ತಾಲೂಕಿನ ರಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದುರೆ ಬ್ಯಾಲ್ಯ ಹಾಗೂ ಹೊಸ ಉಪ್ಪಾರಹಳ್ಳಿ ಕೆರೆ ಅಂಚಿನಲ್ಲಿ ಕನ್ನಡ ಕಹಳೆ, ಅಂತರ್ಜಲ ವೃದ್ಧಿ, ಸಂರಕ್ಷಣೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನೆಟ್ಟ ಗಿಡಗಳ ಮಧ್ಯೆ ನಿರ್ಮಿಸಲಾಗಿರುವ ಕರ್ನಾಟಕ ಭೂಪಟ ಮಾದರಿ ನೀರಿನ ಹೊಂಡ ಲೋಕಾರ್ಪಣೆಯಾಗಿದೆ.
ವಿಶ್ವ ಪರಿಸರ ದಿನಾಚರಣೆ ದಿನದಂದು ಶಾಸಕ ಎನ್. ಹೆಚ್.ಶಿವಶಂಕರರೆಡ್ಡಿ ಉದ್ಘಾಟಿಸಿದ್ದು, ನೋಡಲು ಬರುವವರು ಕರ್ನಾಟಕ ಮಾತೆಯ ಚಿತ್ತಾರ ಸವಿಯಬಹು ದು. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಲಾಮೃತ ಯೋಜನೆ ಜಾರಿಗೆ ಮುಂದಾಗಿದ್ದು, ತಾಲೂಕಿನ ಹೊಸೂರು ಹೋಬಳಿ ರಮಾಪುರ ಗ್ರಾಪಂ ವ್ಯಾಪ್ತಿಯ ಕುದುರೆಬ್ಯಾಲ್ಯ, ಹೊಸ ಉಪ್ಪಾರಹಳ್ಳಿ ಕುಂದಿಹಳ್ಳಿ, ಜೋಡಿಬಿಸಲಹಳ್ಳಿ ಗ್ರಾಮಗಳಲ್ಲಿ “ನಮ್ಮ ಗ್ರಾಮ ವನ್ಯಧಾಮ’ ಪರಿಕಲ್ಪನೆಯಲ್ಲಿ ಕೆರೆ ಜೀರ್ಣೋದ್ಧಾರ, ಕೆರೆ ಬದುಗಳಲ್ಲಿ ಅರಣ್ಯೀಕರಣ, ಜಲಮೂಲಗಳ ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
500 ವಿವಿಧ ಸಸಿ ನೆಡಲಾಗಿದೆ: ಈ ಯೋಜನೆಗೆ 6.60 ಲಕ್ಷ ವೆಚ್ಚ ಮಾಡಲಾಗಿದ್ದು, ಜಲಾಮೃತ ಯೋಜನೆಯಿಂದ ಜೋಡಿ ಬಸಲಹಳ್ಳಿಯ ಕೆರೆ ಅಂಚಿನಲ್ಲಿ ಅರಳಿ, ಆಲ, ನೇರಳೆ, ಹೊಂಗೆ, ಹುಣಸೆ, ಹಲಸು, ಹೂವರಸಿ, ಮಹಾಗನಿ, ನಿಂಬೆಗಿಡ, ನಾಗಲಿಂಗಪುಷ್ಟ ಪಾರಿಜಾತ, ಗಸಗಸೆ, ಬಸವನಪಾದ ಸೇರಿದಂತೆ 28 ಜಾತಿಯ 500 ವಿವಿಧ ಸಸಿಗಳನ್ನು ನೆಡಲಾಗಿದೆ.
ಕುಂದಿಹಳ್ಳಿ ಕೆರೆಯ ಅಂಚಿನಲ್ಲಿ 500 ಸಸಿ, ಕುದುರೆಬ್ಯಾಲ್ಯ- ಹೊಸ ಉಪ್ಪಾರಹಳ್ಳಿ ಕೆರೆ ಅಂಚಿನಲ್ಲಿ ಒಟ್ಟು 950 ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ. ಕೆಲ ದಿನಗಳ ಹಿಂದೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಪಂ ಸಿಇಒ ಫೌಝೀಯಾ ತರುನ್ನುಮ, ತಾಪಂ ಇಒ ಮುನಿರಾಜು ಭೇಟಿ ನೀಡಿ ವೀಕ್ಷಿಸಿ ಮೆಚ್ಚುಗೆ
ವ್ಯಕ್ತಪಡಿಸಿದ್ದರು.