ಅಣ್ಣಿಗೇರಿ: ತಾಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಅನಾವರಣಕ್ಕೆ ಮೈದಾನ ಅವಶ್ಯಕತೆಯಿದ್ದ ಕಾರಣ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಾಮಾಣಿಕ ಪ್ರಯತ್ನ-ಸಹಕಾರದಿಂದ ಕ್ರೀಡಾ ಸಮುತ್ಛಯಕ್ಕೆ 5 ಕೋಟಿ ರೂ. ಮಂಜೂರಾಗಿದ್ದು, ಅವರಿಂದಲೇ ಕಾಮಗಾರಿಗೆ ಚಾಲನೆ ಕೊಡಿಸುತ್ತಿರುವುದು ಸಂತಸ ತಂದಿದೆ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಶಾಸಕರ ಮಾದರಿ ಕೇಂದ್ರ ಶಾಲೆ-1 ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾ ಸಮುತ್ಛಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗವಿಕಲ ಮಕ್ಕಳ ಶಾಲಾ ಕಟ್ಟಡ ನಿರ್ಮಾಣಕ್ಕೆ ದಾಸೋಹ ಮಠದ ಶ್ರೀಗಳ ಬೇಡಿಕೆ ಅನ್ವಯ ಮುಂಬರುವ ದಿನಗಳಲ್ಲಿ 50 ಲಕ್ಷ ರೂ. ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಬಾಸ್ಕೆಟ್‌ಬಾಲ್, ವಾಲಿವಾಲ್, ಸ್ವಿಮ್ಮಿಂಗ್ ಪೂಲ್ ಒಳಗೊಂಡ ಕ್ರೀಡಾಂಗಣ 9 ತಿಂಗಳ ಅವ ಧಿಯಲ್ಲಿ 231 ಚಮೀ ಜಾಗದಲ್ಲಿ 4.61 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಸ್ಥಳೀಯ ಪುರಸಭೆ ಅಧಿಕಾರಿಗಳು ಕಮಿಟಿ ರಚನೆ ಮಾಡಿ, ಕ್ರೀಡಾಂಗಣ ನಿರ್ಮಾಣಗೊಂಡ ನಂತರ ಕಡಿಮೆ ದರದಲ್ಲಿ ಕ್ರೀಡಾಪಟುಗಳಿಗೆ ಮೈದಾನ ಸದ್ಬಳಕೆಗೆ ಅವಕಾಶ ಕಲ್ಪಿಸಬೇಕು. ಬಂದ ಆದಾಯ ಕ್ರೀಡಾಂಗಣ ಪ್ರಗತಿಗೆ ಬಳಸಲು ಸೂಕ್ತವಾಗುತ್ತದೆ. ಹಳೆ ಬಿಲ್ಲು ಹೊಸ ಲೆಕ್ಕಕ್ಕೆ ಜೋಡಣೆ ಮಾಡಬಾರದೆಂದು ಹೇಳಿದರು.
ಮೇ 21ರಂದು 54 ಕೋಟಿ ರೂ. ವೆಚ್ಚದಲ್ಲಿ 24×7 ನೀರು ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಾಗಲೇ 2228 ಕೋಟ ರೂ. ವೆಚ್ಚದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡಿದೆ. ಕೃಷಿ ನೀರಾವರಿಗೆ, ಜನತೆಗೆ ಕುಡಿಯುವ ನೀರು ಒದಗಿಸಲು 3 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ದೇಶದ ಕ್ರೀಡಾಪಟುಗಳು ಕ್ರೀಡಾಸೌಲಭ್ಯಗಳು, ತರಬೇತುದಾರರು, ಮೈದಾನ ಸೌಲಭ್ಯಗಳಿಲ್ಲದೇ ವಂಚಿರಾಗಿರುವುದನ್ನು ಗಮನಿಸಿ, ದೇಶದ ಎಲ್ಲಾ ತಾಲೂಕು-ಜಿಲ್ಲಾ ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ನವಲಗುಂದ ತಾಲೂಕಿನಲ್ಲಿಯೂ ಕ್ರೀಡಾ ಸಮುತ್ಛಯ ನಿರ್ಮಾಣ ಮಾಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ದಾಸೋಹ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಸದೃಢ ಶರೀರ, ಸದೃಢ ಮನಸ್ಸು ಯುವಶಕ್ತಿಗೆ ಪೂರಕವಾದ ಹಿನ್ನೆಲೆಯಲ್ಲಿ ಕ್ರೀಡಾಸಮುತ್ಛಯ ನಿರ್ಮಾಣ ಕ್ರೀಡಾಪಟುಗಳಿಗೆ ಚೇತನಶಕ್ತಿಯಾಗಿ ಪ್ರತಿಭೆ ಹೆಚ್ಚಿಸಿಕೊಳ್ಳಲು ಅನುವಾಗಲಿ ಎಂದರು.
ಕ್ರೆಡಲ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ, ಪುರಸಭೆ ಅಧ್ಯಕ್ಷೆ ಗಂಗಾ ಆರ್. ಕರೆಟ್ಟನವರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬ. ಜಕರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾಜಾನ ಮುಲ್ಲಾನವರ, ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ತಹಶೀಲ್ದಾರ್ ಮಂಜುನಾಥ ಅಮಾಸಿ, ಶಿವಯೋಗಿ ಸುರಕೋಡ, ಶಿವಾನಂದ ಹೊಸಳ್ಳಿ, ಲೋಕೋಪಯೋಗಿ ಇಲಾಖೆ ಅಭಿಯಂತ ಎಸ್.ಬಿ. ಚೌಡಣ್ಣವರ, ಎಸ್ಪಿ ಕೃಷ್ಣಕಾಂತ ಮೊದಲಾದವರಿದ್ದರು. ಕೆ.ಎಸ್. ಬಾಳ್ಳೋಜಿ ಸ್ವಾಗತಿಸಿ, ನಿರೂಪಿಸಿದರು.