Advertisement

ಸಿಗ್ನಲ್ ಫ್ರೀ ಪೆರಿಫೆರಲ್ ರಿಂಗ್‌ ರಸ್ತೆ ನಿರ್ಮಾಣ

02:25 PM Sep 15, 2019 | Suhan S |

ತುಮಕೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಪ್ರಮಾಣ ತಗ್ಗಿಸಿ ಸುಗಮ ಸಂಚಾರ ಒದಗಿಸುವ ಸಲುವಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕ್ಯಾತಸಂದ್ರದಿಂದ ಗುಬ್ಬಿ ಗೇಟ್ವರೆಗೆ ಸುಮಾರು 85 ಕೋಟಿ ರೂ. ವೆಚ್ಚದಲ್ಲಿ 10.5 ಕಿ.ಮೀ ಉದ್ದದ ಸಿಗ್ನಲ್ ಫ್ರೀ ಪೆರಿಫೆರಲ್ ರಿಂಗ್‌ ರಸ್ತೆ ನಿರ್ಮಿಸಲು ಮುಂದಾಗಿದೆ.

Advertisement

ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ ಬೆಳವಣಿಗೆಯಾಗುತ್ತಿರುವ ಶೈಕ್ಷಣಿಕ ನಗರದಲ್ಲಿ ದಿನೆದಿನೇ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬೆಂಗಳೂರಿನ ನಂತರ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ತುಮಕೂರಿನ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹಾಗೂ ಜಿಲ್ಲಾದ್ಯಂತ ಕೈಗಾರಿಕಾ ವಲಯದ ಅಭಿವೃದ್ಧಿಯಿಂದ ನಗರದ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಇದನ್ನು ಮನಗಂಡ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ನಗರದಲ್ಲಿ ಸಿಗ್ನಲ್ ಫ್ರೀ ಪೆರಿಫೆರಲ್ ರಿಂಗ್‌ ರಸ್ತೆ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದೆ.

85 ಕೋಟಿ ರೂ. ವೆಚ್ಚದಲ್ಲಿ ಪಿಆರ್‌ಆರ್‌: ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಧ್ಯಕ್ಷೆ ಡಾ. ಶಾಲಿನಿ ರಜನೀಶ್‌ ಮಾರ್ಗದರ್ಶನದಲ್ಲಿ ಯೋಜನಾ ನಿರ್ವಹಣ ಸಲಹೆದಾರ ಸಂಸ್ಥೆಯಾದ ಐಪಿಇ ಗ್ಲೋಬಲ್ ಲಿ. ಈಗಾಗಲೇ ಪಿಆರ್‌ಆರ್‌ ಕಾಮಗಾರಿ ಕೈಗೊಂಡಿದ್ದು, ಪ್ರಗತಿಯಲ್ಲಿದೆ. ನಗರದ ಹೊರವಲಯದ ಕ್ಯಾತಸಂದ್ರದಿಂದ ಗುಬ್ಬಿ ಗೇಟ್ವರೆಗೆ ಸುಮಾರು 85 ಕೋಟಿ ರೂ. ವೆಚ್ಚದಲ್ಲಿ 10.5 ಕಿ.ಮೀ ಉದ್ದದ ಈ ಸಿಗ್ನಲ್ ಫ್ರೀ ಪೆರಿಫೆರಲ್ ರಿಂಗ್‌ ರಸ್ತೆ ನಿರ್ಮಿಸಲಾಗುತ್ತಿದೆ.

ಪೆರಿಫೆರಲ್ ರಿಂಗ್‌ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಲ್ಲದೆ ನಗರವನ್ನು ಕಾಡುತ್ತಿರುವ ವಾಯುಮಾಲಿನ್ಯ ಪ್ರಮಾಣವೂ ಕಡಿಮೆಯಾಗಲಿದೆ.

ಪ್ರಸ್ತುತ ಉತ್ತರ-ದಕ್ಷಿಣ ರಾಜ್ಯಗಳಿಗೆ ಸೇರಿದ ಸರಕು ಸಾಗಣೆ ವಾಹನಗಳು ತುಮಕೂರು ಮೂಲಕವೇ ಹಾದು ಹೋಗುತ್ತಿದ್ದು, ಪೆರಿಫೆರಲ್ ರಸ್ತೆ ಪೂರ್ಣಗೊಂಡ ನಂತರ ಶೇ.25 ಸಂಚಾರದ ಒತ್ತಡ‌ ಕಡಿಮೆಯಾಗಲಿದೆ.

Advertisement

ಕಾರಿಡಾರ್‌ ಮಾದರಿ: ಹಾಲಿ ಕೈಗೊಂಡಿರುವ ವರ್ತುಲ ರಸ್ತೆ ಎರಡೂ ದಿಕ್ಕಿನಲ್ಲಿ ಎರಡು ಲೇನ್‌ ಹಾಗೂ ಸರ್ವಿಸ್‌ ರಸ್ತೆ ಹೊಂದಿದೆ. ಪಿಆರ್‌ ರಸ್ತೆಯು 75 ಮೀ. ಅಗಲ ಹೊಂದಲಿದ್ದು,ಚತುಷ್ಪಥ ರಸ್ತೆಯಾಗಲಿದೆ.

ರಸ್ತೆಯು ಕಾರಿಡಾರ್‌ ಮಾದರಿಯಲ್ಲಿರುತ್ತದೆ. ಜೊತೆಗೆ ಎರಡೂ ಬದಿ ಸರ್ವಿಸ್‌ ರಸ್ತೆಯನ್ನೂ ನಿರ್ಮಿಸಲಾಗುವುದು. ಜೊತೆಗೆ ವಿಶಾಲ ಪಾದಚಾರಿ ಮಾರ್ಗದೊಂದಿಗೆ ನೀರಿನ ಕೊಳವೆ, ಕೇಬಲ್ ಸಹಿತ ವಿವಿಧ ಯುಟಿಲಿಟಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಹೊಸ ಮಾರ್ಗದಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸಬಹುದು. ಇದಲ್ಲದೆ ಭವಿಷ್ಯದಲ್ಲಿ ರೈಲು ಸಂಚರಿಸಲು ಸ್ಥಳಾವಕಾಶ ಕಾಯ್ದಿರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next