Advertisement

50:50 ಅನುಪಾತದಲ್ಲಿ ವಸತಿ ಬಡಾವಣೆಗಳ ನಿರ್ಮಾಣ

09:04 PM Jun 26, 2019 | Team Udayavani |

ಹಾಸನ: ನಗರದ ಹೊರ ವಲಯದ ಬೂವನಹಳ್ಳಿ, ಕೆಂಚಟ್ಟಹಳ್ಳಿ ಬಳಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದಿಂದ ಮತ್ತು ಯಡಿಯೂರು, ಚಿಟ್ಟನಹಳ್ಳಿ, ನಿಡೂಡಿ, ದೊಡ್ಡಕೊಂಡಗೊಳ, ರಾಂಪುರ, ದೊಡ್ಡ ಹೊನ್ನೆನಹಳ್ಳಿ ಬಳಿ ಕರ್ನಾಟಕ ಗೃಹಮಂಡಳಿಯಿಂದ ವಸತಿ ಬಡಾವಣೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ನಿರ್ದೇಶನ ನೀಡಿದರು.

Advertisement

ವಸತಿ ಬಡಾವಣೆಗಳ ನಿರ್ಮಾಣಕ್ಕೆ ಭೂ ಮಾಲೀಕರು ಸ್ವಯಂ ಪ್ರೇರಣೆಯಿಂದ ಜಮೀನನ್ನು ಬಿಟ್ಟುಕೊಡಲು ಬಯಸಿದರೆ ಅಂತಹವರಿಂದ ಸಮ್ಮತಿ ಪತ್ರ ಪಡೆದು ಬಡಾವಣೆಗಳ ನಿರ್ಮಾಣದ ಕಾಮಗಾರಿ ಆರಂಭಿಸಿ ನಿವೇಶನಗಳನ್ನು ರೂಪಿಸಬೇಕು. ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ಶೇ.50 ನಿವೇಶನಗಳನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಗೃಹ ಮಂಡಳಿ ಉಳಿಸಿಕೊಂಡು ಶೇ.50ರಷ್ಟನ್ನು ಭೂ ಮಾಲೀಕರಿಗೆ ಬಿಟ್ಟುಕೊಡಬೇಕು ಎಂದರು.

ನಿವೇಶನ ಮಾರಾಟಕ್ಕೆ ಅವಕಾಶವಿಲ್ಲ: ಶೇ.50:50 ಅನುಪಾತದಲ್ಲಿ ನವೇಶನ ಹಂಚಿಕೆ ಸೂತ್ರ ಒಪ್ಪದೇ ಭೂಮಿ ನೀಡಲು ನಿರಾಕರಿಸುವ ರೈತರಿಗೆ ಯಾವುದೇ ಒತ್ತಾಯವಿಲ್ಲ ಅವರು ಕೃಷಿಯನ್ನು ಮುಂದುವರಿಸಬಹುದು. ಆದರೆ 1-2 ಗುಂಟೆ ಪ್ರದೇಶದಲ್ಲಿ ನಿವೇಶನಗಳ ನಿರ್ಮಾಣಕ್ಕೆ ಮತ್ತು ನಿವೇಶನಗಳ ಮಾರಾಟಕ್ಕೂ ಅವಕಾಶಕೊಡುವುದಿಲ್ಲ. ಖಾಸಗಿ ಬಡಾವಣೆ ನಿರ್ಮಾಣಕ್ಕೂ ಎನ್‌ಒಸಿ ಕೊಡಕೂಡದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರ ವಿಶ್ವಾಸಗಳಿಸಿರಿ: ಬಡಾವಣೆ ಅಭಿವೃದ್ಧಿ ವೇಳೆ ಬರುವ ವಾಣಿಜ್ಯ ಉದ್ದೇಶಿತ ನಿವೇಶನಗಳಲ್ಲಿ ಕೆಲವನ್ನು ಭೂಮಾಲೀಕರಿಗೆ ಮೀಸಲಿಟ್ಟು ಪ್ರತ್ಯೇಕವಾಗಿ ಹರಾಜು ಪ್ರಕ್ರಿಯೆ ನಡೆಸಬೇಕು. ರೈತರ ಹಿತ ಕಾಯುತ್ತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯ ವೇಳೆ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ‌ ಕೆ.ಎಂ. ರಾಜೇಗೌಡ ಅವರು ಹಾಜರಿದ್ದು ಭೂಮಾಲಿಕರ ಸಮ್ಮತಿ ಪಡೆದು ನಿವೇಶನಗಳನ್ನು ಅಭಿವೃದ್ಧಿ ಪಡಿಸುವುದು ಹೆಚ್ಚು ಸಮಂಜಸ ಹಾಗೂ ರಚನಾತ್ಮಾಕ ಪ್ರಯತ್ನವಾಗಲಿದೆ ಎಂದು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು.

Advertisement

ಭೂಮಿ ನೀಡಲು ರೈತರ ಆಸಕ್ತಿ: ಬಹುತೇಕ ಭೂವನಹಳ್ಳಿ ಸೇರಿದಂತೆ ಕೆಲವು ಗ್ರಾಮಗಳ ರೈತರು ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಸಿದ್ಧರಿದ್ದು, ಸಮ್ಮತಿ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದರು. ಹೊಸ ಬಡಾವಣೆಗಳಲ್ಲಿ ವಿಶಾಲ ರಸ್ತೆಗಳು ಮತ್ತು ಬೃಹತ್‌ ವಾಣಿಜ್ಯ ಸಂಕೀರ್ಣಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗೃಹ ಮಂಡಳಿ ವತಿಯಿಂದಲೇ ನಿರ್ಮಿಸಿ ಬಾಡಿಗೆಗೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಅಕ್ರಂಪಾಷ, ಅಪರ ಜಿಲ್ಲಾಧಿಕಾರಿ ಎಂ.ಎಲ್‌. ವೈಶಾಲಿ, ವೊಶೇಷ ಭೂಸ್ವಾಧಿನಾಧಿಕಾರಿಗಳಾದ ಗಿರೀಶ್‌ ನಂದನ್‌, ಶ್ರೀನಿವಾಸಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ‌ ರಮೇಶ್‌ ಹಾಗೂ ಗೃಹ ಮಂಡಳಿ ಎಂಜಿಯರ್‌ಗಳು ಸಭೆಯಲ್ಲಿ ಹಾಜರಿದ್ದರು.

ನಿವೇಶನ ಶೀಘ್ರ ಅಭಿವೃದ್ಧಿ ಪಡಿಸಿ: ಬಡಾವಣೆಗಳ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟು ಶೇ.50:50ರಷ್ಟು ಅನುಪಾತದಲ್ಲಿ ನಿವೇಶನ ಹಂಚಿಕೆ ಒಪ್ಪುವವರಿಗೆ ಮೊದಲ ಆದ್ಯತೆ ಮೇರೆಗೆ ಮುಂದಿನ ನಾಲ್ಕು ತಿಂಗಳೊಳಗಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಬೇಕು. ಆ ನಂತರ ಒಟ್ಟಾರೆ ಬಡಾವಣೆ ನಿರ್ಮಿಸಿ ಅರ್ಜಿದಾರರಿಗೆ ಸೈಟ್‌ಗಳನ್ನು ವಿತರಿಸಬೇಕು. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ಮಂಡಳಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಚಿವ ಎಚ್‌.ಡಿ. ರೇವಣ್ಣ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next