ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಲ್ಲವರು ಶ್ರೀರಾಮನ ದೇವಸ್ಥಾನದ ಗರ್ಭಗೃಹ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.
ಕೆತ್ತಿರುವ ಮೊದಲ ಇಟ್ಟಿಗೆಯನ್ನು ಗರ್ಭಗೃಹದಲ್ಲಿಟ್ಟು ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಒಟ್ಟು ಮೂರು ಗಂಟೆ ಅವಧಿ ದೇಗುಲಕ್ಕೆ ಸಮಯ ನೀಡಲಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಾಬ್ರಿ ಮಸೀದಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ದೇವಸ್ಥಾನ 2024ರ ಲೋಕಸಭಾ ಚುನಾವಣೆಗೂ ಕೆಲಸಮಯ ಮುನ್ನ ಲೋಕಾರ್ಪಣೆಗೊಳ್ಳಲಿದೆ.
ಗರ್ಭಗೃಹ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರನಾ ಪರ್ವತದ ಅಮೃತಶಿಲೆಯನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟು 13,300 ಕ್ಯೂಬಿಕ್ ಅಡಿಗಳಷ್ಟು ಶಿಲೆಗಳು ಇಲ್ಲಿ ಬಳಕೆಯಾಗಲಿವೆ. ಇವನ್ನೆಲ್ಲ ಸುಂದರ ಕೆತ್ತನೆಗಳಿಂದ ಅಲಂಕರಿಸಲಾಗಿದೆ.
ಇಡೀ ಶ್ರೀರಾಮ ದೇಗುಲ ನಿರ್ಮಾಣಕ್ಕೆ 8ರಿಂದ 9 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಮರಳಗಲ್ಲು, 6.37 ಲಕ್ಷ ಗ್ರಾನೈಟ್, 4.70 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಗುಲಾಬಿ ಮರಳಗಲ್ಲನ್ನು ಬಳಸಿಕೊಳ್ಳಲಾಗುತ್ತದೆ.ಅಯೋಧ್ಯೆಗೆ ಯೋಗಿ ಭೇಟಿ ನೀಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ, ಮಥುರಾ ಶ್ರೀಕೃಷ್ಣ ಜನ್ಮಸ್ಥಾನ-ಶಾಹಿ ಈದ್ಗಾ ಮೈದಾನ ವಿವಾದ ಜೋರಾಗಿ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಅವರು ಅಯೋಧ್ಯೆಯಲ್ಲಿರುವುದು ರಾಜಕೀಯ ಕಾರಣಗಳಿಂದಲೂ ಮಹತ್ವ ಪಡೆದುಕೊಂಡಿದೆ.