Advertisement

ಮಹಿಳಾ ಕಾಲೇಜಿಗೆ ಈ ಬಾರಿಯೂ ಜೈಲೇ ಗತಿ!

11:39 PM Oct 15, 2020 | mahesh |

ಪುತ್ತೂರು: ಜಿಲ್ಲೆಯ ಎರಡನೇ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಇರುವ ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ಮಂಜೂರು ಗೊಂಡರೂ ಕಾದಿರಿಸಿದ ಜಾಗದ ಹಕ್ಕಿನ ಬಗ್ಗೆ ಇತ್ಯರ್ಥವಾಗದ ಕಾರಣದಿಂದ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ.

Advertisement

ನೂತನ ಕಟ್ಟಡ ನಿರ್ಮಿಸಲು ಬನ್ನೂರು ಪ್ರದೇಶದಲ್ಲಿ 4 ಎಕರೆ ಜಾಗ ಮಂಜೂರು ಮಾಡಿ 3 ವರ್ಷ ಕಳೆದಿದ್ದು, ಕಾಲೇಜು ಕಟ್ಟಡ ನಿರ್ಮಿಸಲು ಖಾಸಗಿ ದಾವೆ ಅಡ್ಡಿಯಾಗಿದೆ. ಹೀಗಾಗಿ ಈ ಶೈಕ್ಷಣಿಕ ಅವಧಿಯಲ್ಲಿ ಕೂಡ ಹಳೆ ಜೈಲು ಕಟ್ಟಡ ದಲ್ಲೇ ಕಾಲೇಜು ಮುಂದುವರಿಯಲಿದೆ.

5 ವರ್ಷಗಳ ಹಿಂದೆ ಮಂಜೂರು
2014-15ನೇ ಸಾಲಿನಲ್ಲಿ ಮಂಜೂ ರಾದ ಈ ಕಾಲೇಜು ಸದ್ಯಕ್ಕೆ ನಗರದ ಹಳೆಜೈಲಿನ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಿ.ಎ., ಬಿ.ಕಾಂ. ವಿಭಾಗ ಇಲ್ಲಿದ್ದು, 10 ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. 700ಕ್ಕೂ ಮಿಕ್ಕಿ ವಿದ್ಯಾರ್ಥಿನಿ ಯರನ್ನು ಹೊಂದಿದ ಕಾಲೇಜಿನಲ್ಲಿ ಸುಸಜ್ಜಿತ ಕೊಠಡಿಗಳ ಕೊರತೆ ಇದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವಧಿಯಲ್ಲಿ ಜಾಗ ಕಾದಿರಿಸಿ ಅನುದಾನ ಮೀಸಲಿಡಲು ಪ್ರಯತ್ನಿಸಿದ್ದರು.

ಹೊಸ ಕಟ್ಟಡಕ್ಕೆ ಅನುದಾನ
ನಗರದಿಂದ 3 ಕಿ.ಮೀ. ದೂರದ ಬೊಳುವಾರು- ಉಪ್ಪಿನಂಗಡಿ ರಸ್ತೆಯ ಆನೆಮಜಲಿನಲ್ಲಿ 4.70 ಎಕ್ರೆ ಕಾದಿ ರಿಸಲಾಗಿತ್ತು. ಕಾಲೇಜು ಶಿಕ್ಷಣ ಆಯುಕ್ತರ ಹೆಸರಿನಲ್ಲಿ ಪಹಣಿಪತ್ರವು ಆಗಿದೆ. ನೂತನ ಕಟ್ಟಡಕ್ಕೆ 8 ಕೋಟಿ ರೂ. ಪ್ರಸ್ತಾವನೆ ಸಲ್ಲಿಸ ಲಾಗಿತ್ತು. ಬಿಎಸ್‌ಸಿ ಕೋರ್ಸ್‌ ಗಮನದಲ್ಲಿ ಇಟ್ಟುಕೊಂಡು 25 ಕೊಠಡಿ, ಪ್ರಿನ್ಸಿಪಾಲ್‌ ಕೊಠಡಿ, ಉಪನ್ಯಾಸಕರ ಕೊಠಡಿ, ರೆಸ್ಟ್‌ ರೂಂ, ಗ್ರಂಥಾಲಯ, ಶೌಚಾಲಯ, ಮೈದಾನ ಮೊದಲಾದ ಬೇಡಿಕೆ ಸೇರಿಸ ಲಾಗಿತ್ತು. ಕಾಲೇಜು ಕಟ್ಟಡಕ್ಕೆ 4.5 ಕೋಟಿ ರೂ. ಮಂಜೂರಾಗಿದೆ.

ಸ್ಥಳಕ್ಕೆ ಆಕ್ಷೇಪ
ಕಾಲೇಜಿಗೆ ಗುರುತಿಸಲಾದ ಜಾಗವು ತಮ್ಮ ಕುಮ್ಕಿ ವ್ಯಾಪ್ತಿಗೆ ಬರುತ್ತದೆ ಎಂದು ವ್ಯಕ್ತಿಯೊಬ್ಬರು ಆಕ್ಷೇಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ನ್ಯಾಯಾಲಯ ಕುಮ್ಕಿ ಹಕ್ಕು ವಿರಹಿತ ಗೊಳಿಸಿ ಆದೇಶಿಸಿದ್ದರು. ತೀರ್ಪಿನ ವಿರುದ್ಧ ಖಾಸಗಿ ವ್ಯಕ್ತಿ ಕರ್ನಾಟಕ ಅಪಲೇಟ್‌ ಟ್ರಿಬ್ಯೂನಲ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದು ಇತ್ಯರ್ಥ ಆದ ಬಳಿಕವಷ್ಟೇ ಕಟ್ಟಡ ನಿರ್ಮಾಣದ ಬಗ್ಗೆ ಸ್ಪಷ್ಟತೆ ದೊರೆಯಲಿದೆ.

Advertisement

ಹಳೆ ಜೈಲಿನಲ್ಲಿ ಕಾಲೇಜು!
ಬ್ರಿಟಿಷ್‌ ಕಾಲದ ಕಟ್ಟಡ ಆರಂಭದಲ್ಲಿ ಹಳೆ ಜೈಲು, ಅನಂತರ ಹಳೆ ತಾಲೂಕು ಕಚೇರಿ ಆಗಿ ಬದಲಾಗಿತ್ತು. ಈಗ ಮಹಿಳಾ ಕಾಲೇಜು ಆಗಿ ಬದಲಾಗಿದೆ. ಇಲ್ಲಿ ಸ್ಥಳಾವಕಾಶದ ಕೊರತೆ ಕಾಡಿದ ಕಾರಣ ಪುತ್ತೂರು ನಗರಸಭೆಯ ಹಳೆಯ ಕಟ್ಟಡದ ಕೆಲವೊಂದು ಕೋಣೆಗಳನ್ನು ಬಳಸಲಾಯಿತು. ಅನಂತರ 4 ಲಕ್ಷ ರೂ.ವೆಚ್ಚದಲ್ಲಿ ಜೈಲು ಕಟ್ಟಡದ ಆವರಣದಲ್ಲಿ 4 ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸಲಾಯಿತು.

ನ್ಯಾಯಾಲಯದಲ್ಲಿ ಪ್ರಕರಣ
ಕಾಲೇಜು ನಿರ್ಮಾಣಕ್ಕೆ ನೋಂದಣಿ ಮಾಡಿದ ಸ್ಥಳ ಖಾಸಗಿ ವ್ಯಕ್ತಿಯೊಬ್ಬರು ಅದು ತಮ್ಮ ಕುಮ್ಕಿ ವ್ಯಾಪ್ತಿಗೆ ಬರುತ್ತದೆ ಎಂದು ಆಕ್ಷೇಪ ಸಲ್ಲಿಸಿದ್ದರು. ಖಾಸಗಿ ವ್ಯಕ್ತಿ ಕರ್ನಾಟಕ ಅಪಲೇಟ್‌ ಟ್ರಿಬ್ಯೂನಲ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಕಾಲೇಜು ಕಟ್ಟಡ ನಿರ್ಮಿಸಲು 4.5 ಕೋಟಿ ರೂ. ಮಂಜೂರಾಗಿದ್ದರೂ ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಕಾಮಗಾರಿ ಪ್ರಾರಂಭಿಸಿಲ್ಲ.
-ಸಂಜೀವ ಮಠಂದೂರು ಶಾಸಕರು, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next