ಧಾರವಾಡ: ಜಿಲ್ಲೆಗೊಂದರಂತೆ ಇರುವ ಪಾಲಿ ಕ್ಲಿನಿಕ್‌ಗೆ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣಕ್ಕೆ ಮೂರು ವರ್ಷದ ಬಳಿಕ ಚಾಲನೆ ದೊರೆತಿದೆ. ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರಿನ 100 ಅಡಿ ಉದ್ದ ಹಾಗೂ 135 ಅಗಲದ ಜಾಗದಲ್ಲಿ ಸುಸಜ್ಜಿತ ಎರಡು ಮಹಡಿಯ ಪಾಲಿ ಕ್ಲಿನಿಕ್ ನಿರ್ಮಾಣ ಆಗಲಿದೆ. ಪೂರ್ಣಗೊಂಡ ಬಳಿಕ ಇಲ್ಲಿ ತಜ್ಞ ವೈದ್ಯರ ಸೇವೆ, ಅತ್ಯಾಧುನಿಕ ಯಂತ್ರಗಳ ಸೇವೆ ಸಿಗಲಿದೆ.
2014ರಿಂದ ಜಿಲ್ಲಾಸ್ಪತ್ರೆಯ ಪರಿಕಲ್ಪನೆ ರೂಪದಲ್ಲಿ ಪಾಲಿ ಕ್ಲಿನಿಕ್ ಆರಂಭ ಆಗಿದ್ದು, ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರು ಹಾಗೂ ಎಕ್ಸರೆಯಂತಹ ಯಂತ್ರಗಳ ಕೊರತೆ ಇದೆ. ಅದಕ್ಕಾಗಿ 2017ರಲ್ಲಿ ಪಾಲಿ ಕ್ಲಿನಿಕ್ ಗೆ ಹೊಸ ಸುಸಜ್ಜಿತ ಕಟ್ಟಡ ಮಂಜೂರಾಗಿದ್ದು, 2 ಕೋಟಿಗೂ ಅಧಿಕ ಅನುದಾನ ಒದಗಿಸಲಾಗಿದೆ. 2018ರಲ್ಲಿ ಏಜೆನ್ಸಿ ಫಿಕ್ಸ್ ಆಗಿದ್ದು, ಕರ್ನಾಟಕ ಗೃಹ ಮಂಡಳಿ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದೆ.
ಕಾಮಗಾರಿಗೆ ಈಗ ವೇಗ: ಗೃಹ ಮಂಡಳಿಯು ಎಂಜಿನಿಯರ್ ತಂಡದಿಂದ ಸರ್ವೇ ಹಾಗೂ ತಪಾಸಣೆ ಮಾಡಿಸಿ ಪ್ರಮಾಣಪತ್ರ ಪಡೆದ ಬಳಿಕ 2019ರ ಜನೆವರಿಯಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರೂ ಕೆಲಸ ಆರಂಭ ಆಗಲೇ ಇಲ್ಲ. ಕಳೆದ ವರ್ಷ ಸುರಿದ ಮಳೆಯಿಂದ ಈ ಜಾಗದ ತೆಗ್ಗು ಪ್ರದೇಶದಲ್ಲಿ ನೀರು ತುಂಬಿದ್ದರಿಂದ ಆರು ತಿಂಗಳ ಕಾಲ ಕಾಮಗಾರಿ ಸಾಗಲಿಲ್ಲ. ಆದರೆ, ಈಗ ಕಳೆದ ಎರಡು ತಿಂಗಳಿನಿಂದ ಕಾಮಗಾರಿಗೆ ವೇಗ ಸಿಕ್ಕಿದ್ದು, ತಕ್ಕಮಟ್ಟಿಗೆ ಕಾಮಗಾರಿ ನಡೆದಿದೆ. ಅಡಿಪಾಯ ಹಾಕುವ ಕೆಲಸ ನಡೆದಿದೆ.
ಮೂರಕ್ಕೆ ಒಂದೇ ಹುದ್ದೆ: ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ ಹಾಗೂ ಪ್ರಸೂತಿ ಶಾಸ್ತ್ರ ಈ ಮೂರು ವಿಭಾಗದಲ್ಲಿ ತಜ್ಞ ವೈದ್ಯರ ಸೇವೆ ಕೊಡಬೇಕೆಂಬುದೇ ಪಾಲಿ ಕ್ಲಿನಿಕ್ ಉದ್ದೇಶ. ಸದ್ಯ ನಾಲ್ಕು ಕೊಠಡಿಯಲ್ಲಿ ನಡೆದಿರುವ ಈ ಕ್ಲಿನಿಕ್‌ನಲ್ಲಿ ಹುದ್ದೆಗಳ ಮರುವಿನ್ಯಾಸ ಆಗಿರುವ ಕಾರಣ ಮೂರು ಹುದ್ದೆಗಳು ಇಲ್ಲದಂತಾಗಿದೆ. ಈ ಹಿಂದೆ ಇದ್ದ ತಾಲೂಕಾಸ್ಪತ್ರೆ ವೈದ್ಯಾಧಿಕಾರಿಯನ್ನೇ ಮರುವಿನ್ಯಾಸ ಮಾಡಿ ಈಗಿರುವ ಪಾಲಿ ಕ್ಲಿನಿಕ್‌ಗೆ ಮುಖ್ಯ ಪಶು ವೈದ್ಯಾಧಿಕಾರಿಯನ್ನಾಗಿ ನೀಡಲಾಗಿದೆ. ಹೀಗಾಗಿ ಈಗ ನಿರ್ಮಾಣ ಆಗುತ್ತಿರುವ ಸುಸಜ್ಜಿತ ಕಟ್ಟಡ ಪೂರ್ಣಗೊಂಡ ಬಳಿಕ ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ ಹಾಗೂ ಪ್ರಸೂತಿ ಶಾಸ್ತ್ರ ವಿಭಾಗದಲ್ಲಿ ಪ್ರತ್ಯೇಕ ತಜ್ಞ ವೈದ್ಯರ ಹುದ್ದೆ ಸೃಷ್ಟಿಯಾಗಲಿದ್ದು, ಮೂರು ವಿಭಾಗದಲ್ಲೂ ತಜ್ಞ ವೈದ್ಯರ ಸೇವೆ ಸಿಗಲಿದೆ.
ಹೆಚ್ಚಿನ ಸೇವೆ ಲಭ್ಯ: ಎರಡು ಮಹಡಿಯ ಕಟ್ಟಡ ನಿರ್ಮಾಣವಾದ ಬಳಿಕ ಪ್ರತ್ಯೇಕ ಶಸ್ತ್ರಚಿಕಿತ್ಸೆ ಕೊಠಡಿ, ಸ್ಕ್ಯಾನಿಂಗ್, ಎಕ್ಸರೇ ಕೊಠಡಿ ಜೊತೆಗೆ ಯಂತ್ರಗಳೂ ಲಭ್ಯವಾಗಲಿವೆ. ಮರಣೋತ್ತರ ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯೂ ಇರಲಿದೆ. ಆಡಳಿತಾತ್ಮಕ ಕೊಠಡಿಗಳೂ ಸಿಗಲಿವೆ. ಈಗ ಬರೀ 4 ಕೊಠಡಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕ್ಲಿನಿಕ್‌ಗೆ 15ರಿಂದ 20 ಕೊಠಡಿಗಳು ಲಭ್ಯವಾಗಲಿವೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಇನ್ನಾದರೂ ಆದಷ್ಟು ಶೀಘ್ರ ಕಟ್ಟಡ ಕಾಮಗಾರಿ ಪೂರ್ಣಗೊಂಡು ಬಳಕೆಗೆ ದೊರೆಯಬೇಕಿದೆ.
ಸುಸಜ್ಜಿತ ಪಾಲಿ ಕ್ಲಿನಿಕ್ ಕಟ್ಟಡ ನಿರ್ಮಾಣದ ಬಳಿಕ ಜಾನುವಾರುಗಳಿಗೆ ಮತ್ತಷ್ಟು ಚಿಕಿತ್ಸೆ ಲಭ್ಯವಾಗಲಿದೆ. ಇದಲ್ಲದೇ ಸ್ಕ್ಯಾ ನಿಂಗ್, ಎಕ್ಸರೇ ಸೇರಿದಂತೆ ಆಧುನಿಕ ಶಸ್ತ್ರಚಿಕಿತ್ಸೆ ಲಭ್ಯವಾಗಲಿದೆ. ನಿಗದಿತ ಅವಧಿಯಲ್ಲಿ ಕಟ್ಟಡ ನಿರ್ಮಾಣ ಆಗಲಿದೆ
. – ಡಾ| ಬಿ.ಎಸ್. ಲಿಂಗರಾಜು, ಮುಖ್ಯ ಪಶು ವೈದ್ಯಾಧಿಕಾರಿ, ಪಾಲಿ ಕ್ಲಿನಿಕ್, ಧಾರವಾಡ
ಶಸ್ತ್ರಚಿಕಿತ್ಸೆ ಕೊಠಡಿ ಕೊರತೆ : ಈಗಿರುವ ಪಾಲಿ ಕ್ಲಿನಿಕ್ ಕಟ್ಟಡದಲ್ಲಿ ಎಕ್ಸರೇ ವ್ಯವಸ್ಥೆ ಇಲ್ಲ. ತಾತ್ಕಾಲಿಕವಾಗಿ ಇದ್ದ ಶಸ್ತ್ರಚಿಕಿತ್ಸೆ ಕೊಠಡಿಯನ್ನೂ ಹೊಸ ಕಟ್ಟಡಕ್ಕಾಗಿ ನೆಲಸಮ ಮಾಡಿರುವ ಕಾರಣ ಈಗ ಶಸ್ತ್ರಚಿಕಿತ್ಸೆಯ ಕೊಠಡಿಯ ಕೊರತೆ ಎದುರಾಗಿದೆ. ಹೀಗಾಗಿ ಜಾನುವಾರುಗಳಿಗೆ ಬೇಗ ಉತ್ತಮ ಚಿಕಿತ್ಸೆ ಲಭಿಸಲು ಕಟ್ಟಡ ಕಾಮಗಾರಿಗೆ ವೇಗ ಸಿಗಬೇಕಿದೆ. ಈಗಾಗಲೇ ಒಂದು ವರ್ಷ ಹಾಳಾಗಿದ್ದು, ಕಾಮಗಾರಿಗೆ ವೇಗ ನೀಡಿ ಕಟ್ಟಡ ನಿರ್ಮಾಣಕ್ಕೆ ನಿಗದಿತ ಸಮಯದ ಗುರಿ ನೀಡುವ ಕೆಲಸವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮಾಡಬೇಕಿದೆ.
–ಶಶಿಧರ್ ಬುದ್ನಿ