Advertisement

ನೇತ್ರಾವತಿ ಸೇತುವೆ-ಕಣ್ಣೂರು ರಿಂಗ್‌ ರಸ್ತೆ ನಿರ್ಮಾಣಕ್ಕೆ ಎದುರಾಗಿದೆ ಜಾಗದ ಸಮಸ್ಯೆ

10:55 PM Jan 13, 2020 | mahesh |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರಿಂದ ರಾಷ್ಟ್ರೀಯ ಹೆದ್ದಾರಿ 75 ಅನ್ನು ಸಂಪರ್ಕಿಸುವ ನೇತ್ರಾವತಿ ಸೇತುವೆ- ಕಣ್ಣೂರು ರಿಂಗ್‌ ರಸ್ತೆ ನಿರ್ಮಾ ಣಕ್ಕೆ ಇದೀಗ ಭೂಮಿ ಲಭ್ಯತೆ ಸಮಸ್ಯೆ ಎದುರಾಗಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಬಹು ನಿರೀಕ್ಷಿತ ಯೋಜನೆಯು ಅಡಕತ್ತರಿಯಲ್ಲಿ ಸಿಲುಕಿದೆ.

Advertisement

ನೇತ್ರಾವತಿ ನದಿ ಪಾತ್ರದಲ್ಲಿಯೇ 6.5 ಕಿ.ಮೀ. ಉದ್ದಕ್ಕೆ ದ್ವಿಪಥ ರಸ್ತೆ ನಿರ್ಮಾಣ ಯೋಜನೆ ಇದಾಗಿದ್ದು, ಈ ರಿಂಗ್‌ ರಸ್ತೆ ನಿರ್ಮಾಣಕ್ಕೆ ಬಹುತೇಕ ಕಡೆ ಜಮೀನು ಖಾಸಗಿ ಮೂಲಕವೇ ಹಾದು ಹೋಗ ಬೇಕಾ ಗಿರುವ ಕಾರಣ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನವೇ ದೊಡ್ಡ ಸಮಸ್ಯೆಯಾಗಿದೆ.

ಜಪ್ಪಿನಮೊಗರುನಲ್ಲಿ ಉಳ್ಳಾಲ ಸೇತುವೆಯಿಂದ ನದಿ ಬದಿಯಿಂದ ಪ್ರಾರಂಭವಾಗಿ ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ 30 ಅಡಿ ಅಗಲದ ಈ ಯೋಜನೆಗೆ 20 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಯೋಜನೆ ಕಾರ್ಯಗತಗೊಂಡರೆ ತೊಕ್ಕೊಟ್ಟು ಕಡೆಯಿಂದ ಬೆಂಗಳೂರು, ಚಿಕ್ಕಮಗ ಳೂರು ಕಡೆಗೆ ಹೋಗುವ ವಾಹನಗಳು ಕಣ್ಣೂರಿಗೆ ಬಂದು ಮುಂದೆ ರಾ.ಹೆ.75 ಮೂಲಕ ಮುಂದಕ್ಕೆ ಸಾಗಲಿದೆ. ಇದರಿಂದಾಗಿ ತಲಪಾಡಿ ಕಡೆಯಿಂದ ಬಿ.ಸಿ.ರೋಡ್‌, ಬೆಳ್ತಂಗಡಿ, ಚಿಕ್ಕಮಗಳೂರು ಹಾಗೂ ಬಿ.ಸಿ.ರೋಡ್‌ ಮೂಲಕ ಬೆಂಗಳೂರಿಗೆ ಸಾಗುವ ವಾಹನಗಳು ಪಂಪ್‌ವೆಲ್‌ಗೆ ಬರಬೇಕಾದ ಆವಶ್ಯಕತೆ ಇರುವುದಿಲ್ಲ.

ಜೆ.ಆರ್‌. ಲೋಬೋ ಅವರು ಶಾಸಕರಾಗಿದ್ದ ಸಂದರ್ಭ ಈ ಯೋಜನೆ ಪ್ರಸ್ತಾವನೆಗೆ ಬಂದಿತ್ತು. ಆಗ ಲೋಕೋಪಯೋಗಿ ಸಚಿವರಾಗಿದ್ದ ಮಹಾದೇವಪ್ಪ ಅವರು ಈ ಯೋಜನೆ ಬಗ್ಗೆ ಆಸಕ್ತಿ ತೋರ್ಪಡಿಸಿದ್ದು, ಸಮೀಕ್ಷೆ ಹಾಗೂ ಸಾಧ್ಯತಾ ವರದಿ ಸಿದ್ಧಪಡಿಸಲು ಸೂಚಿಸಿದ್ದರು. ಲೋಕೋಪಯೋಗಿ ಇಲಾಖೆಯವರ ಜತೆಗೆ ಲೋಬೋ ಅವರು ಪ್ರಾಥಮಿಕವಾಗಿ ಪರಿಶೀಲನೆ ನಡೆಸಿದ್ದರು. ಆದರೆ ಭೂಸ್ವಾಧೀನ ಸಹಿತ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಯೋಜನೆ ನನೆಗುದಿಯಲ್ಲಿದೆ.

ಮೂರು ಹೆದ್ದಾರಿಗಳಿಗೆ ಸಂಪರ್ಕ
ನೇತ್ರಾವತಿ ಸೇತುವೆ- ಕಣ್ಣೂರು ರಸ್ತೆ ರಿಂಗ್‌ ರೋಡ್‌ ಯೋಜನೆ ಕಾರ್ಯಗತಗೊಂಡರೆ ಮೂರು ಹೆದ್ದಾರಿಗಳ ಸಂಪರ್ಕ ಸೇತುವಾಗಲಿದೆ.

Advertisement

ಪಡೀಲ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಬಳಿಯಿಂದ ಕನ್ನಗುಡ್ಡೆ ಮೂಲಕ ಕುಲಶೇಖರವರೆಗೆ 5 ಕೋ.ರೂ. ವೆಚ್ಚದ ರಿಂಗ್‌ ರೋಡ್‌ ರಸ್ತೆ ನಿರ್ಮಾಣ ಯೋಜನೆಗೆ ಶಾಸಕ ವೇದವ್ಯಾಸ ಕಾಮತ್‌ ಶಿಲಾನ್ಯಾಸ ನೆರವೇರಿಸಿದ್ದಾರೆ. ನೇತ್ರಾವತಿ ಸೇತುವೆ- ಕಣ್ಣೂರು ರಸ್ತೆ ರಿಂಗ್‌ ರೋಡ್‌ ಯೋಜನೆಯೂ ಕಾರ್ಯಗತಗೊಂಡರೆ ನೇತ್ರಾವತಿ ಸೇತುವೆಯಿಂದ ಕುಲಶೇಖರದವರೆಗೆ ರಸ್ತೆ ನಿರ್ಮಾಣವಾಗಲಿದ್ದು, ರಾಷ್ಟ್ರೀಯ ಹೆದ್ದಾರಿಗಳಾದ 66, 75 ಹಾಗೂ 169ರ ನಡುವೆ ಸಂಪರ್ಕವೇರ್ಪಡಲಿದೆ. ಮೂಡುಬಿದಿರೆ ಕಡೆಯಿಂದ ತೊಕ್ಕೊಟ್ಟು, ಉಳ್ಳಾಲ, ಕೇರಳ ಕಡೆಗೆ ಹೋಗುವ ವಾಹನಗಳು ಮಂಗಳೂರು ನಗರಕ್ಕೆ ಪ್ರವೇಶಿಸದೆ ಕಣ್ಣೂರು ಮೂಲಕ ನೇತ್ರಾವತಿ ಸೇತುವೆಗೆ ಬಂದು ಸಾಗಬಹುದಾಗಿದೆ. ಈ ಹಾದಿಯಲ್ಲಿ ಬರುವ ಪ್ರದೇಶಗಳು ಕೂಡ ಅಭಿವೃದ್ಧಿಯಾಗಲಿದ್ದು ಹಾಗೂ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ.

ಜಾಗ ಹೊಂದಿಸಿಕೊಳ್ಳಲು ಪ್ರಯತ್ನ
ಉಳ್ಳಾಲ ಸೇತುವೆಯಿಂದ ಕಣ್ಣೂರುವರೆಗೆ ನೇತ್ರಾವತಿ ನದಿಪಾತ್ರದಲ್ಲಿ ರಸ್ತೆ ನಿರ್ಮಾಣ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಈಗಾಗಲೇ ಪ್ರಯತ್ನ ಮುಂದುವರಿದಿದೆ. ಯೋಜನೆ ಅನುಷ್ಠಾನವಾಗುವ ಬಹುತೇಕ ಪ್ರದೇಶ ಖಾಸಗಿ ಜಮೀನು ಆಗಿರುವುದರಿಂದ ಜಾಗ ಹೊಂದಿಸಿಕೊಳ್ಳುವ ಸಮಸ್ಯೆ ಎದುರಾಗಿದೆ. ಖಾಸಗಿಯವರ ಮನವೊಲಿಸಿ ಜಾಗ ಹೊಂದಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಒಂದೊಮ್ಮೆ ಜಾಗ ಲಭ್ಯವಾಗದಿದ್ದರೆ ಯೋಜನೆ ಕಾರ್ಯಗತಗೊಳ್ಳಲು ಸಮಸ್ಯೆಯಾಗುತ್ತದೆ.
– ವೇದವ್ಯಾಸ ಕಾಮತ್‌, ಶಾಸಕರು ಮಂಗಳೂರು ದಕ್ಷಿಣ ಕ್ಷೇತ್ರ

ಭೂ ಸ್ವಾಧೀನ ಸಮಸ್ಯೆ
ಶಾಸಕ ವೇದವ್ಯಾಸ ಕಾಮತ್‌ ಅವರು ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಆಸಕ್ತಿ ವಹಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಇದರಂತೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದರು. ಆದರೆ ಈ ರಸ್ತೆ ಬಹುತೇಕ ಖಾಸಗಿ ಜಮೀನುಗಳಲ್ಲಿ ಹಾದು ಹೋಗುತ್ತಿರುವುದರಿಂದ ಅವರಿಂದ ಜಾಗ ಪಡೆದುಕೊಳ್ಳಬೇಕಾಗಿದೆ. ಆದರೆ ಈಗ ಭೂ ಸ್ವಾಧೀನ ಸಮಸ್ಯೆ ಉಂಟಾಗಿರುವುದರಿಂದ ಯೋಜನೆಗೆ ತೊಡಕಾಗಿದೆ. ಜಾಗ ಲಭ್ಯವಾಗದಿದ್ದರೆ ಯೋಜನೆಯನ್ನು ಕೈಬಿಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next