Advertisement

ಶಾಸಕರ ಭವನ ನಿರ್ಮಾಣಕ್ಕೆ ಗುತ್ತಿಗೆ ವಿಘ್ನ!

12:31 PM Oct 28, 2021 | Team Udayavani |

ಮಸ್ಕಿ: ಬಸವೇಶ್ವರ ನಗರದಲ್ಲಿ ಬರೋಬ್ಬರಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಶಾಸಕರ ಭವನ ಕಟ್ಟಡ ಕಾಮಗಾರಿ ಗುತ್ತಿಗೆ ಜಗಳಕ್ಕೆ ಬಲಿಯಾಗಿದೆ! ಖುದ್ದು ಶಾಸಕ ಆರ್‌.ಬಸನಗೌಡ ತುರುವಿಹಾಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಹಲವು ತಿಂಗಳು ಕಳೆದಿವೆ.

Advertisement

ಆದರೆ ಹಾಲಿ-ಮಾಜಿ ಶಾಸಕರ ಹಿಂಬಾಲಕರ ನಡುವೆ ನಡೆದ ಗುತ್ತಿಗೆ ತಿಕ್ಕಾಟದಿಂದಾಗಿ ಇದುವರೆಗೂ ಕಾಮಗಾರಿ ಆರಂಭಿಸಲಾಗುತ್ತಿಲ್ಲ. ಅನುದಾನ ಬಿಡುಗಡೆ ಮಾಡಿದ ಮತ್ತು ಕಾಮಗಾರಿ ಅನುಷ್ಠಾನ ಹೊಣೆ ಹೊತ್ತ ಅಧಿಕಾರಿಗಳು ಮಾತ್ರ ಈಗ ಅಡಕತ್ತರಿಗೆ ಸಿಲುಕಿದ್ದಾರೆ.

ಏನಿದರ ಹಿನ್ನೆಲೆ?

ಸದ್ಯ ಪುರಸಭೆ ಅಧೀನದ ಮಳಿಗೆಯೊಂದರಲ್ಲಿ ತಲೆ ಎತ್ತಿರುವ ಶಾಸಕರ ಭವನ ಅಷ್ಟಾಗಿ ವಿಸ್ತರಣೆ ಹೊಂದಿಲ್ಲ. ಹಳೆಯದಾದ ಮತ್ತು ಚಿಕ್ಕ ಕೊಠಡಿಯಲ್ಲೇ ಶಾಸಕರ ಕಾರ್ಯ ಚಟುವಟಿಕೆ ನಡೆದಿವೆ. ಹಲವು ಸಮಸ್ಯೆ ಹೊಂದಿರುವ ಈ ಕಟ್ಟಡಕ್ಕೆ ಸಿಂಗಾರ ಮಾಡಲಾಗುತ್ತಿದೆ ವಿನಃ ಮರು ನಿರ್ಮಾಣ ಕಾರ್ಯ ಆಗಿಲ್ಲ. ಪದೇ-ಪದೇ ಸಮಸ್ಯೆ ಇರುವ ಕಾರಣಕ್ಕಾಗಿ ಪ್ರತ್ಯೇಕ ಶಾಸಕರ ಭವನ ಅಗತ್ಯತೆ ಪ್ರಸ್ತಾಪಿಸಿ, ಬಸವೇಶ್ವರ ನಗರದಲ್ಲಿ ಪುರಸಭೆಯಿಂದ ಸಿಎ ಸೈಟ್‌ ಹಂಚಿಕೆ ಮಾಡಲಾಗಿದೆ. ಈ ಜಾಗದಲ್ಲಿ ಭವ್ಯ ಬಂಗಲೆ ನಿರ್ಮಾಣಕ್ಕೆ ಎಸ್‌ಎಫ್‌ಸಿ ನಿಧಿಯಿಂದ 50 ಲಕ್ಷ ರೂ. ಅನುದಾನವನ್ನೂ ಹಂಚಿಕೆ ಮಾಡಲಾಗಿದೆ. ಆದರೆ ಕಾಮಗಾರಿ ಮಾತ್ರ ಇದುವರೆಗೆ ಆರಂಭವಾಗಿಲ್ಲ.

ಅನುಮೋದನೆ

Advertisement

ಪುರಸಭೆ ವತಿಯಿಂದ 2018-19ನೇ ಸಾಲಿನಲ್ಲಿ ಎಸ್‌ಎಫ್‌ಸಿ ನಿಧಿಯಡಿ 50 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆರ್ಥಿಕ ಇಲಾಖೆ ಒಪ್ಪಿಗೆ, ಆಡಳಿತಾತ್ಮಕ ಅನುಮೋದನೆ ಸೇರಿ ಇತರೆ ಕಾರಣಕ್ಕೆ ಹಲವು ದಿನಗಳಿಂದ ವಿಳಂಬವಾಗಿತ್ತು. ಆದರೆ ಇತ್ತೀಚೆಗೆ ಈ ಕಾಮಗಾರಿ ಆರಂಭಕ್ಕೆ ಶಾಸಕ ಆರ್‌. ಬಸನಗೌಡ ತುರುವಿಹಾಳ ಪೂಜೆ ಸಲ್ಲಿಸಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಶಂಕುಸ್ಥಾಪನೆ ಮಾಡಿದ್ದೇ ಕೊನೆ, ಇದುವರೆಗೂ ಈ ಕಡೆ ಯಾರು ತಲೆ ಹಾಕಿಯೂ ನೋಡಿಲ್ಲ. ಸ್ಥಳೀಯ ಪುರಸಭೆ ಅನುದಾನವಾಗಿದ್ದರಿಂದ ಈ ಕಾಮಗಾರಿ ಕ್ರಿಯಾ ಯೋಜನೆ ತಯಾರಿಸಿ, ಅಂದಾಜು ಪಟ್ಟಿ ರೂಪಿಸಿ ಇದಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಜಿಲ್ಲಾಧಿಕಾರಿಗಳ ಅನುಮೋದನೆಯೂ ದೊರೆತಿದ್ದು ಕಾಮಗಾರಿ ಆರಂಭಕ್ಕೆ ಮತ್ತೂಂದು ವಿಘ್ನ ಎದುರಾಗಿದೆ.

ಇದನ್ನೂ ಓದಿ: ಹಾಡುಹಗಲಲ್ಲೇ ಕಳ್ಳತನ..!

ಗುತ್ತಿಗೆ ಪೈಪೋಟಿ

50 ಲಕ್ಷ ರೂ. ವೆಚ್ಚದ ಈ ಕಾಮಗಾರಿ ಟೆಂಡರ್‌ ಕರೆಯದೇ ಏಜೆನ್ಸಿಗೆ ವಹಿಸಲಾಗಿದೆ. ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಲ್ಯಾಂಡ್‌ ಆರ್ಮಿ) ಈ ಕಾಮಗಾರಿ ಅನುಷ್ಠಾನದ ಹೊಣೆ ಹೊತ್ತಿದೆ. ಆದರೆ ಗುತ್ತಿಗೆ ಏಜೆನ್ಸಿಯಿಂದ ಉಪ ಗುತ್ತಿಗೆಯಾಗಿ ಪಡೆದು ಕೆಲಸ ನಿರ್ವಹಿಸಲು ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷದಿಂದಲೂ ತಿಕ್ಕಾಟ ನಡೆದಿದೆ. ಹಾಲಿ ಶಾಸಕ ಆರ್‌. ಬಸನಗೌಡ ತುರುವಿಹಾಳ ಮತ್ತು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಿಂಬಾಲಕರ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಇದೇ ಕಾರಣಕ್ಕೆ ಹಲವು ದಿನಗಳಿಂದ ಈ ಕಾಮಗಾರಿ ಆರಂಭಕ್ಕೆ ಮುಹೂರ್ತವೇ ಸಿಗದಾಗಿದೆ.

ಕೆಲ ತಾಂತ್ರಿಕ ಕಾರಣದಿಂದ ಶಾಸಕರ ಭವನ ನಿರ್ಮಾಣ ಕೆಲಸ ವಿಳಂಬವಾಗಿದೆ. ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ. -ಆರ್‌. ಬಸನಗೌಡ ತುರವಿಹಾಳ, ಶಾಸಕರು, ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next