Advertisement

ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣ : ರೈಲ್ವೇ ಇಲಾಖೆಯಿಂದ ಗ್ರೀನ್‌ ಸಿಗ್ನಲ್‌

12:13 AM Feb 24, 2021 | Team Udayavani |

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣಕ್ಕೆ 2017ರಲ್ಲಿ ಅನುಮತಿ ಕೋರಿ ಕೊಂಕಣ ರೈಲ್ವೇಗೆ ಸಲ್ಲಿಸಿದ್ದ ಮನವಿಗೆ ಸ್ಪಂದನೆ ಲಭಿಸಿದೆ. ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ಮೇಲ್ಸೇತುವೆ ನಿರ್ಮಿಸಬಹುದು ಎಂದು ರೈಲ್ವೇ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಹೆದ್ದಾರಿ ಇಲಾಖೆಯವರಿಗೆ ಅನುಮತಿಯನ್ನು ನೀಡಿದ್ದಾರೆ.

Advertisement

ತೀರ್ಥಹಳ್ಳಿ- ಕಲ್ಸಂಕ ರಾ.ಹೆ. 169(ಎ) ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡು 3 ವರ್ಷಗಳು ಕಳೆದಿವೆ. ಇಂದ್ರಾಳಿಯ ಕೊಂಕಣ ರೈಲ್ವೇಯ ಮೇಲ್ಸೇತುವೆ ಹಳೆಯ ದ್ವಿಪಥದಲ್ಲಿ ವ್ಯವಸ್ಥೆಯಲ್ಲಿ ಮುಂದುವರಿಯುತ್ತಿದ್ದರಿಂದ ವಾಹನ ಚಾಲಕರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದರು. ವೇಗವಾಗಿ ಬರುವ ವಾಹನಗಳು ಕೂಡಲೇ ಅಗಲ ಕಿರಿದಾಗುವ ಸೇತುವೆಗೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದರಿಂದಾಗಿ ನಿತ್ಯ ರಸ್ತೆಯಲ್ಲಿ ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು.

ಸಿಆರ್‌ಎಸ್‌ ಅನುಮತಿ
ರಾಷ್ಟ್ರೀಯ ಹೆದ್ದಾರಿ 169(ಎ) ಇಂದ್ರಾಳಿ ರೈಲ್ವೇ ಬ್ರಿಡ್ಜ್ ವಿನ್ಯಾಸವನ್ನು ಐಐಟಿ ಮದ್ರಾಸ್‌ ಪರಿಶೀಲನೆ ನಡೆಸಿ, ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಎನ್‌ಒಸಿಯನ್ನು ನೀಡಲು ಸಿಆರ್‌ಎಸ್‌ಗೆ ಕಳುಹಿಸಲಾಗಿತ್ತು. ಇದು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯದಡಿ ಬರುವ ರೈಲ್ವೇಯ ಒಂದು ವಿಭಾಗ. ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಸುರಕ್ಷಾ ಆಯುಕ್ತರು ಈಗ ಸೇತುವೆ ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

3 ತಿಂಗಳು ಅಗತ್ಯ
ಸೇತುವೆ ನಿರ್ಮಾಣಕ್ಕೆ ಕನಿಷ್ಠ ಎಂದರೂ 3 ತಿಂಗಳುಗಳ ಕಾಲ ಸಮಯಾವಕಾಶ ತಗಲುವ ನಿರೀಕ್ಷೆ ಇದೆ. ಇಂದ್ರಾಳಿ ರೈಲ್ವೇ ಬ್ರಿಡ್ಜ್ ವಿನ್ಯಾಸದಂತೆ ರೈಲ್ವೇ ಹಾಗೂ ವಿದ್ಯುತ್ಛಕ್ತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗ ದಂತೆ ಸುರಕ್ಷಾ ಕ್ರಮಗಳೊಂದಿಗೆ ಸೇತುವೆ ನಿರ್ಮಿಸುವ ಸವಾಲು ಹೆದ್ದಾರಿ ಇಲಾಖೆಯ ಮುಂದಿದೆ.

ಪಿಲ್ಲರ್‌ ಬಳಿಕ ಗರ್ಡರ್‌ ಲಾಂಚಿಂಗ್‌
ಸೇತುವೆ ನಿರ್ಮಾಣಗೊಳ್ಳುವ ಮೊದಲು ರಸ್ತೆಯ ಆಚೀಚೆ ಬದಿ ಸ್ತಂಭಗಳನ್ನು ನಿರ್ಮಿಸಬೇಕು. ಈ ಕಾಮಗಾರಿ ನಡೆಸಲು ಅನುಮತಿಯನ್ನು ಕೊಂಕಣ ರೈಲ್ವೇ ನಿಗಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದೆ. ಸ್ತಂಭಗಳನ್ನು ನಿರ್ಮಿಸಿದ ಬಳಿಕ ಸಿದ್ಧಪಡಿಸಿದ ಸೇತುವೆಯನ್ನು (ಗರ್ಡರ್‌ ಲಾಂಚಿಂಗ್‌) ತಂದು ಜೋಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾತ್ರ ಪ್ರಾಧಿಕಾರದವರು ಮತ್ತೆ ಸಿಆರ್‌ಎಸ್‌ ಗಮನಕ್ಕೆ ತಂದು ಅನುಮತಿಯನ್ನು ತೆಗೆದುಕೊಳ್ಳಬೇಕು. ಗರ್ಡರ್‌ ಲಾಂಚಿಂಗ್‌ ಮಾಡುವಾಗ ರೈಲ್ವೇ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ನಾಲ್ಕೈದು ಕ್ರೇನ್‌ಗಳ ಮೂಲಕ ಇದನ್ನು ನಿರ್ವಹಿಸ
ಲಾಗುತ್ತದೆ. ರೈಲ್ವೇ ಸಂಚಾರದ ಸುರಕ್ಷೆಗಾಗಿ ಈ ಮುತುವರ್ಜಿ ವಹಿಸಲಾಗುತ್ತಿದೆ.

Advertisement

ಪ್ರಾಧಿಕಾರಕ್ಕೆ ಅನುಮತಿ ಪತ್ರ
ಕೊಂಕಣ ರೈಲ್ವೇ ಸತತ ಪ್ರಯತ್ನದಿಂದ ಸೇತುವೆ ನಿರ್ಮಿಸಲು ಬೇಕಾದ ಅನುಮತಿ ಪತ್ರವನ್ನು ಸಿಆರ್‌ಎಸ್‌ನಿಂದ ಪಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ನೀಡಲಾಗಿದೆ.
– ಸುಧಾ ಕೃಷ್ಣಮೂರ್ತಿ, ಪಿಆರ್‌ಒ, ಕೊಂಕಣ ರೈಲ್ವೇ

ಅನುಮತಿ ಲಭ್ಯ
ರೈಲ್ವೇ ಸೇತುವೆ ನಿರ್ಮಾಣಕ್ಕೆ ಅನುಮತಿ ಕೋರಿ ಕೊಂಕಣ ರೈಲ್ವೇಗೆ ಸಲ್ಲಿಸಿದ್ದ ಮನವಿಗೆ ಕೊನೆಗೂ ಅನುಮೋದನೆ ಸಿಕ್ಕಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
-ಮಂಜುನಾಥ್‌ ನಾಯಕ್‌, ಎಂಜಿನಿಯರ್‌, ರಾ.ಹೆ. ಪ್ರಾಧಿಕಾರ

ಕಂಟಕವಾದ ರಸ್ತೆ
ಇಂದ್ರಾಳಿ ಸೇತುವೆ ಬಳಿ ಈ ಹಿಂದೆ ಹಾಕಲಾದ ಡಾಮರು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಜೆಲ್ಲಿ ಕಲ್ಲುಗಳು ಮೇಲೆ ಎದ್ದಿವೆ. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರವಾಹನಗಳು ಸ್ಕೀಡ್‌ ಆಗುತ್ತಿದ್ದು, ಸವಾರರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next