Advertisement

ಮನೆ ನಿರ್ಮಾಣ: ಉಡುಪಿ ಜಿಲ್ಲೆಯಲ್ಲಿ ಮಳೆ ಕೊಯ್ಲು ಕಡ್ಡಾಯ

01:21 AM Jul 11, 2019 | Sriram |

ಉಡುಪಿ: ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಮಳೆ ನೀರು ಮರು ಪೂರಣ ಯೋಜನೆ ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದರೆ, ಮನೆ ನಿರ್ಮಾಣ ಅನಂತರ ಕಂಪ್ಲೀಷನ್‌ ಸರ್ಟಿಫಿಕೆಟ್‌ (ಸಿಸಿ) ಸಿಗುವುದಿಲ್ಲ.

Advertisement

ಭಾರತ ಸರಕಾರವು ಜಲಭದ್ರತೆಗಾಗಿ “ಜಲ ಶಕ್ತಿ ಅಭಿಯಾನ’ ಕಾರ್ಯಕ್ರಮವನ್ನು ರಾಜ್ಯ ಸರಕಾರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಬುಧವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈಗಾಗಲೇ ಪ್ರಗತಿಯಲ್ಲಿರುವ ಮನೆಗಳು ಕಾಮಗಾರಿ ಪೂರ್ಣಗೊಳ್ಳುವ ಮೊದಲು ಮಳೆ ನೀರು ಕೊಯ್ಲು ಯೋಜನೆಯನ್ನು ಕೈಗೊಳ್ಳಬೇಕು. ಹೊಸದಾಗಿ ನಿರ್ಮಾಣಗೊಳ್ಳಲಿರುವ ಮನೆಗಳ ಮೂಲ ಪ್ಲಾನ್‌ನಲ್ಲಿಯೇ ಮಳೆ ಕೊಯ್ಲು ಯೋಜನೆ ಇರಬೇಕು. ಇಲ್ಲದಿದ್ದರೆ ಅಂತಹ ಮನೆ ನಿರ್ಮಾಣಕ್ಕೆ ಲೈಸೆನ್ಸ್‌ ನೀಡದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾ. ಪಂ.ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ತೆರೆದ ಬಾವಿ, ಬೋರ್‌ವೆಲ್‌ ಅಥವಾ ಪ್ರತ್ಯೇಕ ಇಂಗು ಗುಂಡಿ ಕೊರೆದು ಮಳೆ ನೀರು ಶೇಖರಣೆಗೆ ಯೋಜನೆ ಹಾಕಿಕೊಳ್ಳಬೇಕು ಎಂದು ಹೇಳಿದರು.

ಗಿಡ ನೆಡಲು ಸೂಚನೆ
ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪ್ರಮುಖ ಕೆರೆ, ಮದಗಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಗೊಳಿಸಲು ಅವರು ತಿಳಿಸಿದರು.

ಉಡುಪಿ ನಗರ ಸಭೆ ವ್ಯಾಪ್ತಿಯ 5 ವಾರ್ಡ್‌ಗಳನ್ನು ಆಯ್ಕೆ ಮಾಡಿ ಅಲ್ಲಿನ ಪ್ರತೀ ಮನೆಗೆ 5 ಗಿಡಗಳನ್ನು ನೀಡಿ ಬೆಳೆಸಲು ಪ್ರೋತ್ಸಾಹಿಸಬೇಕು. ಜುಲೈ ಅಂತ್ಯದೊಳಗೆ 20 ಸಾವಿರ ಗಿಡಗಳನ್ನು ಈ 5 ವಾರ್ಡ್‌ಗಳಲ್ಲಿ ನೆಟ್ಟು ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

Advertisement

ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಸಿ ಕಚೇರಿಯಲ್ಲಿ ಮಾಹಿತಿ
ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ ಹಾಗೂ ಪೂರ್ಣಗೊಂಡ ಮನೆಗಳ ಸಂಖ್ಯೆ ಹಾಗೂ ಅವುಗಳಲ್ಲಿ ಮಳೆ ಕೊಯ್ಲು ಅಳವಡಿಸಿರುವ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಗ್ರ ಮಾಹಿತಿ ಇಟ್ಟುಕೊಳ್ಳಲಾಗುವುದು. ಈ ಮಾಹಿತಿಗಳನ್ನು ಸಾರ್ವಜನಿಕವಾಗಿಯೇ ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next