ಯಲಬುರ್ಗಾ: ತಾಲೂಕಿನ ಕರಮುಡಿ, ಬಂಡಿಹಾಳ ಹಾಗೂ ತೊಂಡಿಹಾಳ ಗ್ರಾಮಗಳ ರಸ್ತೆ ಮಧ್ಯೆ ಹರಿಯುತ್ತಿರುವ ಹಳ್ಳಗಳಿಗೆ ಸೇತುವೆ ನಿರ್ಮಾಣ ಈ ಮೂರು ಗ್ರಾಮಗಳ ಜನತೆ ದಶಕಗಳಿಂದ ಬೇಡಿಕೆಯಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕೃಷಿಕರು, ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಂಚಾರ ಮಾಡುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.
ಯಲಬುರ್ಗಾ ಪಟ್ಟಣದಿಂದ ಕರಮುಡಿ, ಬಂಡಿಹಾಳ ಹಾಗೂ ತೊಂಡಿಹಾಳ ರಸ್ತೆಯ ನರೇಗಲ್, ಬಿನ್ನಾಳ, ಯರೇಹಂಚಿನಾಳ ಮಾರ್ಗವಾಗಿ ಗದಗ ಜಿಲ್ಲೆ ತಲುಪಲು ಇದು ಪ್ರಮುಖ ರಸ್ತೆಯಾಗಿದೆ. ಕರಮುಡಿಯಿಂದ ತೊಂಡಿಹಾಳದವರೆಗೆ ಇರುವ ರಸ್ತೆಯ ಮಧ್ಯೆ ಏಳು ಹಳ್ಳಗಳು ಹಾದು ಹೋಗುತ್ತವೆ. ಕರಮುಡಿಯಿಂದ ಬಂಡಿಹಾಳದವರೆಗೆ ನಾಲ್ಕು ಹಳ್ಳ, ಬಂಡಿಹಾಳದಿಂದ ತೊಂಡಿಹಾಳದವರೆಗೆ ಮೂರು ಹಳ್ಳಗಳಿವೆ. ಈ ಹಿಂದೆ ಆಡಳಿತ ನಡೆಸಿದ ಕ್ಷೇತ್ರದ ಶಾಸಕರು, ಜಿಪಂ, ತಾಪಂ ಸದಸ್ಯರು ಸೇತುವೆ ನಿರ್ಮಾಣಕ್ಕೆ ನಿರ್ಲಕ್ಷ್ಯ ಮನೋಭಾವ ತೋರಿದ ಪರಿಣಾಮ ಈ ಭಾಗದ ಜನತೆ ಸಮಸ್ಯೆ ಅನುಭವಿಸುವಂತಾಗಿದೆ ಎಂಬುದು ಜನತೆಯ ಗಂಭೀರ ಆರೋಪವಾಗಿದೆ.
ಕಹಿ ಘಟನೆಗೆ ಸಾಕ್ಷಿ: ಭಾರಿ ಮಳೆಯಿಂದಾಗಿ ತುಂಬಿ ಬರುವ ಹಳ್ಳ ದಾಟಲು ಮೂರು ಗ್ರಾಮಗಳ ರೈತರು, ಜನತೆ ಹರಸಾಹಸ ಪಡಬೇಕಿದೆ. ಸಂಜೆ ಹೊತ್ತು ಕೃಷಿ ಕೆಲಸ ಮುಗಿಸಿ ಮನೆ ಸೇರಬೇಕು ಎನ್ನುವ ಹೊತ್ತಿಗೆ ಮಳೆಯಾದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಎರಡು ವರ್ಷಗಳ ಹಿಂದೆ ಕೃಷಿ ಕೆಲಸ ಮುಗಿಸಿ ಮನೆಗೆ ಬರುವಾಗ ಕರಮುಡಿಯ ಇಬ್ಬರು ಮಹಿಳೆಯರು ನೀರು ಪಾಲಾದ ಘಟನೆ ಇನ್ನು ಮಾಸಿಲ್ಲ. ಕಳೆದ ವರ್ಷ ಬೈಕ್ ಸವಾರ ನೀರಿನ ಸೆಳವಿಗೆ ಕೊಚ್ಚಿ ಹೋಗಿ, ಸಾವು-ಬದುಕಿನ ನಡುವೆ ಪಾರಾಗಿ ಬಂದಿರುವುದು, ತೊಂಡಿಹಾಳ ಹಳ್ಳದಲ್ಲಿ ಟ್ರಾಕ್ಟರ್ ಸಿಲುಕಿ ರೈತರ ಫಸಲು ನೀರು ಪಾಲಾಗಿದೆ. ಇನ್ನು ಕರಮುಡಿ-ಬಂಡಿಹಾಳ ಹಳ್ಳ ತುಂಬಿ ಬಂದಾಗ ಹಗ್ಗದ ಸಹಾಯದಿಂದ ಗ್ರಾಮಸ್ಥರು ಪಾರಾದ ಘಟನೆ ಪ್ರತಿಯೊಬ್ಬರಿಗೂ ಗೊತ್ತು. ಕೆಲ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ದಾಟಿಸಿದ್ದನ್ನು ಸ್ಮರಿಸಬಹುದು. ವಾರದ ಹಿಂದೆ ಬೈಕ್ ಸಹ ನೀರು ಪಾಲಾಗಿ ಹೋಗಿದೆ. ಇದೇ ರೀತಿ ಸಾವು, ಬದುಕಿನ ನಡುವೆ ಸೆಣಸಿ ಪಾರಾಗಿ ಬಂದ ಸಾಕಷ್ಟು ಉದಾಹರಣೆಗಳಿವೆ.
ಆಶಾಭಾವನೆ ಮೂಡಿಸಿದ ಸಚಿವರ ಹೇಳಿಕೆ: ಪ್ರಮುಖವಾಗಿ ಹಳ್ಳಗಳ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ 12 ಕೋಟಿ ರೂ. ಮಂಜೂರಾಗಿದ್ದು ಶೀಘ್ರದಲ್ಲೇ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಿದ್ದ ವೇಳೆ ಸಚಿವ ಹಾಲಪ್ಪ ಆಚಾರ್ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದು ಈ ಭಾಗದ ರೈತರಲ್ಲಿ ಆಶಾಭಾವ ಮೂಡಿಸಿದೆ. ಸಚಿವರು ಬ್ರಿಡ್ಜ್ ನಿರ್ಮಾಣದ ಮಾತುಗಳನ್ನಾಡಿದ್ದು ಆಶಾಭಾವ ಮೂಡಿದೆ. ಆದಷ್ಟು ಶೀಘ್ರದಲ್ಲಿ ಈ ಕಾರ್ಯಕ್ಕೆ ಮುಂದಾಗಲಿ ಎಂಬುದು ಜನತೆ ಆಗ್ರಹವಾಗಿದೆ.
ಮೂರು ಗ್ರಾಮಗಳಿಂದ ಈ ಹಿಂದೆ ಆಯ್ಕೆಯಾದ ಜಿಪಂ, ತಾಪಂ ಸದಸ್ಯರು ಕ್ಷೇತ್ರದ ಶಾಸಕರಿಗೆ ಒತ್ತಡ ಹಾಕಿ ಸೇತುವೆ ನಿರ್ಮಾಣದ ಪ್ರಯತ್ನ ಮಾಡಿಲ್ಲ. ಅವರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಸದ್ಯ ಮಳೆಗಾಲವಿದ್ದು, ಸ್ವಲ್ಪ ಮಳೆಯಾದರೇ ಸಾಕು ಸ್ವಲ್ಪ ಹೊತ್ತಿನಲ್ಲಿಯೇ ಹಳ್ಳಗಳು ತುಂಬಿ ಬರುತ್ತವೆ. ಸಚಿವರು 12 ಕೋಟಿ ಅನುದಾನ ನೀಡಿರುವುದು ಖುಷಿ ವಿಚಾರ, ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರ ಕಾಮಗಾರಿ ಆರಂಭಿಸಲಿ. –
ಭೀಮಪ್ಪ ಹವಳಿ, ಕರಮುಡಿ ಗ್ರಾಮಸ್ಥ, ಮಂಜುನಾಥ ಕಳಸಪ್ಪನವರ, ಬಂಡಿಹಾಳ ಗ್ರಾಮಸ್ಥ
ಹಳ್ಳಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣಕ್ಕೆ ಕೆಆರ್‌ಐಡಿಸಿಎಲ್‌ನಿಂದ 12 ಕೋಟಿ ಅನುದಾನ ಮಂಜೂರಾಗಿದ್ದು, ಆಡಳಿತಾತ್ಮಕ ಕಾರಣಗಳಿಂದ ವಿಳಂಬವಾಗಿತ್ತು. ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಿ ಇದೇ ಅವಧಿಯಲ್ಲಿ ಸೇತುವೆಗಳ ನಿರ್ಮಾಣವಾಗಲಿದೆ. ಆ ಭಾಗದ ಜನರ ಬಹುದಿನದ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಈ ಹಿಂದೆ ಆಡಳಿತ ನಡೆಸಿದ ಜನಪ್ರತಿನಿಧಿಗಳ ನಿ ನಿರ್ಲಕ್ಷ್ಯದಿಂದ ಸೇತುವೆ ಕನಸು, ಕನಸಾಗಿಯೇ ಉಳಿದಿತ್ತು.
-ಹಾಲಪ್ಪ ಆಚಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ
ಹಳ್ಳಗಳ ಸೇತುವೆ ನಿರ್ಮಾಣಕ್ಕೆ ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ) ವಿಶೇಷ ಅಧಿ ಕಾರಿಗಳ ತಂಡ ಸಮೀಕ್ಷೆ ನಡೆಸಿದ್ದು, ಈಗಾಗಲೇ ಡಿಪಿಆರ್ ಸಹ ಆಗಿದೆ. 12 ಕೋಟಿ ವೆಚ್ಚದಲ್ಲಿ ಸೇತುವೆಗಳ ನಿರ್ಮಾಣವಾಗಲಿದೆ. ಸಚಿವರು ವಿಶೇಷ ಆಸಕ್ತಿ ವಹಿಸಿ ಮಂಜೂರು ಮಾಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯಲಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.
-ಈರಪ್ಪ ಹೊಸೂರು ಎಇಇ, ಲೋಕಪಯೋಗಿ ಇಲಾಖೆ
ಮಳೆ ಬಂದರೆ ಸಾಕು ಈ ಮೂರು ಗ್ರಾಮಗಳ ಜನತೆ ಸಾಕಷ್ಟು ಸಮಸ್ಯೆ ಎದುರಿಸಬೇಕಿದೆ. ಹಳ್ಳ ತುಂಬಿ ಬಂದಾಗ ಯಾರಾದರೂ ತುರ್ತು ಚಿಕಿತ್ಸೆಗಳಿಗೆ ಪಟ್ಟಣ ಪ್ರದೇಶಗಳಿಗೆ ಹೋಗಬೇಕೆಂದರೆ ಅವರ ಕಷ್ಟ ದೇವರಿಗೆ ಗೊತ್ತು. ಮಳೆ ಬಂದಾಗ ಭಯದಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ತಾಲೂಕಾಡಳಿತ ಸ್ಥಳೀಯರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
–ಮಲ್ಲಪ್ಪ ಮಾಟರಂಗಿ