ಚನ್ನರಾಯಪಟ್ಟಣ: ರಾಜ್ಯ ಸರ್ಕಾರದಿಂದ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತಾಲೂಕಿನಲ್ಲಿ ವಸತಿ ನಿಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 27 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಪಟ್ಟಣದ ಹೊರವಲಯದಲ್ಲಿ ಇಲಾಖೆಯಿಂದ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
200 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ: ಸುಮಾರು 200 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ತಂಗುವಂತೆ ಎರಡು ಕಟ್ಟಡಗಳನ್ನು 30 ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಲಾಗುವುದು.ಇದರಿಂದ ತಾಲೂಕಿನ ವಿದ್ಯಾರ್ಥಿಗಳಲ್ಲದೇ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ ಎಂದರು.
ಹಾಸ್ಟೆಲ್ ನಿರ್ಮಾಣ: 3.50 ಕೋಟಿ ರೂ. ವೆಚ್ಚದಲ್ಲಿ ಹಿರೀಸಾವೆ ಹೋಬಳಿ ಕೇಂದ್ರದಲ್ಲಿ ವಸತಿ ನಿಲಯ, ಪಟ್ಟಣದ ಆದರ್ಶ ನಗರದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಬಾಲಕಿಯರ ವಸತಿನಿಲಯ, ಒಂದು ಕೋಟಿ ರೂ. ವೆಚ್ಚದಲ್ಲಿ ದೇವರಾಜು ಅರಸು ಭವನ, ವೆಂಕಟೇಶ್ವರ ಲೇಔಟ್‌ನಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭಿಸಲಾಗಿದೆ. ಈಗಾಗಲೇ ಸುಮಾರು 27 ಕೋಟಿ ರೂ. ಅನುದಾನದಲ್ಲಿ ಶೇ.50 ರಷ್ಟು ಕಾಮಗಾರಿ ಮುಕ್ತಾಯವಾಗಿದೆ ಎಂದು ಹೇಳಿದರು.
ವಿವಿಧ ಅಭಿವೃದ್ಧಿ ಕಾಮಗಾರಿ: ಸುಮಾರು 11 ಕೋಟಿ ವೆಚ್ಚದಲ್ಲಿ ಹಿರೀಸಾವೆ ಹೋಬಳಿ ಕೇಂದ್ರದಲ್ಲಿ, ಚನ್ನರಾಯಪಟ್ಟಣದಲ್ಲಿ ಎರಡು ಹಿಂದುಳಿದ ವರ್ಗಗಳ ವಸತಿಗೃಹ ನಿರ್ಮಾಣ, ಗೂರಮಾರನಹಳ್ಳಿ ಮುರಾರ್ಜಿ ದೇಸಾಯಿ ಪ್ರಾಂಶುಪಾಲ ವಸತಿಗೃಹ, ವಸತಿ ಶಾಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಭಾಭವನ, ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಾಡಕಚೇರಿ ಕಟ್ಟಡ ನಿರ್ಮಾಣ, 2 ಕೋಟಿ ರೂ. ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕಿರ ವಸತಿ ನಿಲಯ ಮಾಡಲಾಗುತ್ತಿದೆ ಎಂದರು.
ಹೇಮಾವತಿ ನಾಲೆಗೆ ಬೇಲಿ: ಹೇಮವತಿ ಎಡದಂಡೆ ನಾಲೆ ಸಮೀಪದಲ್ಲಿ ವಿದ್ಯಾರ್ಥಿ ವಸತಿ ನಿಲಯ ಇರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಹೇಮಾವತಿ ನಾಲೆ ಎರಡೂ ಬದಿಗೆ ಫೆನ್ಸಿಂಗ್(ಬೇಲಿ) ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಎಂಬ ಕೀಳರಿಮೆ ಮಾಡಿಕೊಳ್ಳುವುದು ಬೇಡ ದೇಶದಲ್ಲಿ ಹವಲು ಸಾಧಕರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ ಎಂದು ಹೇಳಿದರು.
ಸೌಲಭ್ಯ ಸದ್ಬಳಕೆಯಾಗಲಿ: ಗ್ರಾಮೀಣ ಭಾಗದ ರೈತರ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ತಾಲೂಕಿನಲ್ಲಿ ಹೆಚ್ಚು ವಸತಿ ನಿಲಯ ಪ್ರಾರಂಭಿಸಲಾಗುತ್ತಿದೆ. ಸರ್ಕಾರ ನೀಡುವ ಸವಲತ್ತು ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂದಾಗಬೇಕು. ತಾಲೂಕಿನಲ್ಲಿ ಹೆಚ್ಚು ವಸತಿ ನಿಲಯ ಪ್ರಾರಂಭ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಲಾಗುವುದು ಎಂದು ತಿಳಿಸಿದರು. ಪುರಸಭೆ ಸದಸ್ಯ ಗಣೇಶ್, ಮಾಜಿ ಸದಸ್ಯ ಸಿ.ಟಿ.ಅಶೋಕ, ಬಿಸಿಎಂ ಅಧಿಕಾರಿ ಮಂಜುನಾಥ, ಲೋಕೋಪಯೋಗಿ ಇಲಾಖೆ ಅಭಿಯಂತರರಾದ ಕಾಡೇಗೌಡ, ರಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.