Advertisement

ಬೀದರನಲ್ಲಿ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ

09:35 AM Jan 28, 2019 | Team Udayavani |

ಬೀದರ: ನಗರದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಯಲು ರಂಗಮಂದಿರ ಕಟ್ಟಡ ನಿರ್ಮಿಸುವ ಆಲೋಚನೆ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕೂಡಲೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ರವಿವಾರ ನಾಟ್ಯಶ್ರೀ ನೃತ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಲಾ ಸಂಭ್ರಮೋತ್ಸವ ಹಾಗೂ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ವ್ಯವಸ್ಥೆಗಳು ಇರುವಂತೆ ಒಂದು ರಂಗಮಂದಿರ ನಿರ್ಮಿಸಲಾಗುವುದು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಪ್ರಸ್ತಾವನೆ ಸಲ್ಲಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಗಮನಕ್ಕೆ ತಂದು ಮಂಜೂರು ಮಾಡಿಸಲಾಗುವುದು. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ತಹಶೀಲ್ದಾರರು ಕೂಡಲೇ ಎರಡು ಎಕರೆ ಸರ್ಕಾರಿ ಜಮಿನು ಗುರುತಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ದಕ್ಷಿಣ ಕರ್ನಾಟಕದ ಸುಪ್ರಸಿದ್ದ ಕಲೆಯಾದ ಭರತನಾಟ್ಯವನ್ನು ಬೀದರ್‌ಗೆ ಪರಿಚಯಿಸುವಲ್ಲಿ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಪರಿವಾರದ ಕೊಡುಗೆ ಬಹಳಷ್ಟಿದೆ. ಇಲ್ಲಿಯ ಮಕ್ಕಳು ಮಂಗಳೂರಿಗೆ ತೆರಳಿ ಭರತ ನಾಟ್ಯ ಜ್ಯೂನಿಯರ್‌ ಪರೀಕ್ಷೆ ಬರೆಯುವುದನ್ನು ತಪ್ಪಿಸಿ ಜಿಲ್ಲೆಯಲ್ಲಿಯೇ ಭರತನಾಟ್ಯ ತರಬೇತಿ ಕೇಂದ್ರ ಹಾಗೂ ಪರಿಕ್ಷಾ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಆಸ್ತಿ ಎಂದರೆ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯ. ಇದರಲ್ಲಿ ಮುಖ್ಯವಾಗಿ ಭರತನಾಟ್ಯ ಹಾಗೂ ಜಾನಪದ ಕಲೆ ಪ್ರಧಾನವಾಗಿದೆ. ಇದನ್ನು ಉಳಿಸಿ ಬೆಳೆಸಬೇಕಾಗಿದೆ. ನಮ್ಮವರು ಜಗತ್ತಿನ ಅನೇಕ ಅಭಿವೃದ್ಧಿಪರ ದೇಶಗಳಿಗೂ ತೆರಳಿ ಭಾರತೀಯ ಸಂಸ್ಕೃತಿ ಕಲಿಸಿ ಕೊಡುತ್ತಿರುವುದರಿಂದ 2020ರಲ್ಲಿ ಭಾರತ ಜಗತ್ತಿನ ಗುರುವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

Advertisement

ಬ್ರಹ್ಮಕುಮಾರಿ ಶಿವಶಕ್ತಿ ಭವನದ ಸಂಚಾಲಕಿ ಬಿ.ಕೆ. ಸುನಂದ ಸಹೋದರಿ ಮಾತನಾಡಿ, ಕಲೆ, ನೃತ್ಯ ಹಾಗೂ ಸಂಗೀತ ನಮ್ಮ ಆರೋಗ್ಯಕ್ಕೆ ದಿವ್ಯ ಔಷಧಗಳಾಗಿದ್ದು, ಭರತ ನಾಟ್ಯ ವಿಶೇಷವಾಗಿ ಅನೇಕ ಭೀಕರ ಕಾಯಿಲೆಗಳಿಗೆ ರಾಮಬಾಣದಂತಿವೆ. ಇಂಥ ಕಲಾತ್ಮಕ ಸಂಸ್ಕೃತಿಯು ವಾಣಿಜ್ಯದ ವಸ್ತುವಾಗದೇ ಪುಣ್ಯದ ಕಾರ್ಯವಾಗಬೇಕು. ಅದು ಸದಾ ಆರಾಧನೆಗೆ ಸೀಮಿತವಾದಲ್ಲಿ ಅದಕ್ಕೆ ಪೂಜ್ಯನಿಯ ಸ್ಥಾನವಿರುತ್ತದೆ ಎಂದು ಹೇಳಿದರು.

ಬೆಂಗಳೂರಿನ ಹಾಸ್ಯ ಕಲಾವಿದ ವೈ.ವಿ. ಗುಂಡುರಾವ್‌ ಮಾತನಾಡಿ, ಬೀದರ್‌ ನಿಜವಾದ ಏಕೀಕರಣದ ಬೀಡಾಗಿದೆ. ಮಂಗಳೂರಿನ ಭರತನಾಟ್ಯವನ್ನು ಬೀದರ್‌ನ ಜಾನಪದ ಜಗತ್ತಿಗೆ ಸಂಯೋಜಿಸಿರುವುದು ಸಂತೋಷದ ಸಂಗತಿಯಾಗಿದೆ. ನೃತ್ಯ ನಿಜವಾಗಿ ಕುಣಿದಾಡುವ ದೇವತೆಯಾಗಿದ್ದು, ಅದನ್ನು ಬರೀ ಆನಂದಿಸದೆ ಆರಾಧಿಸಬೇಕು. ಬೆಂಗಳೂರು ಹಾಗೂ ಮೈಸೂರು ಜನ ಪಕ್ಕಾ ಸೋಮಾರಿಗಳಾಗಿದ್ದು, ಮಂಗಳೂರಿನವರು ಹಾಗೂ ಬೀದರ್‌ ಜನ ನಿಜವಾದ ಶ್ರಮಜೀವಿಗಳು. ಹಾಗೂ ಕಲಾ ರಕ್ಷಕರಾಗಿರುವುದರಿಂದಲೇ ಕನ್ನಡ ನಾಡು ಸಂಸ್ಕೃತಿ ಶ್ರೀಮಂತಗೊಳ್ಳಲು ಈ ಎರಡು ಜಿಲ್ಲೆಗಳ ಸಾಧನೆ ಬಹಳಷ್ಟಿದೆ ಎಂದು ಕೊಂಡಾಡಿದರು.

ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಮಂಗಳೂರಿನ ಭರತನಾಟ್ಯ ಗುರು ವಿದ್ವಾನ್‌ ಕೆ.ಚಂದ್ರಶೇಖರ ನಾವಡ ಹಾಗೂ ನಾಟ್ಯಶ್ರೀ ನೃತ್ಯಾಲಯದ ಪಾಲಕರ ಪ್ರತಿನಿಧಿ ಸತೀಶ ಪಾಟೀಲ ಗೌರವ, ರಾಘವೇಂದ್ರ ಅಡಿಗ, ಪ್ರತಿಭಾ ಚಾಮಾ, ಕೆ.ಸತ್ಯಮೂರ್ತಿ, ವೀರಶೆಟ್ಟಿ ಮೈಲೂರಕರ್‌, ಶಂಭುಲಿಂಗ ವಾಲ್ದೊಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next