ಬಂಕಾಪುರ: ಅನಧಿಕೃತವಾಗಿ ಕಾನೂನು ನಿಯಮ ಗಾಳಿಗೆ ತೂರಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಮೊಬೈಲ್ ಟವರ್‌ಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ನಡೆ ಸಂಶಯಕ್ಕೆ ಎಡೆ ಮಾಡಿದೆ.
ಸಾಮಾನ್ಯವಾಗಿ ಪುರಸಭೆ ವ್ಯಾಪ್ತಿಯಲ್ಲಿ ಮೊಬೈಲ್ ಕಂಪನಿಗಳ ಟವರ್ ನಿರ್ಮಾಣ ಮಾಡಬೇಕಾದರೆ ಅನುಮತಿ ಪಡೆಯಬೇಕು. ಅನುಮತಿಗೆ ಅರ್ಜಿ ಸಲ್ಲಿಸುವಾಗ ಟವರ್ ನಿರ್ಮಾಣಕ್ಕೆ ಕೆಲವು ಕಟ್ಟು ನಿಟ್ಟಿನ ನಿಯಮ ಪಾಲಿಸಲು ಆದೇಶಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿ ಕಾನೂನು ಪಾಲನೆಯಾಗಿದ್ದರೆ ಮಾತ್ರ ಟವರ್ ನಿರ್ಮಾಣಕ್ಕೆ ಅನುಮೊದನೆ ನೀಡಿ, ಅಗತ್ಯ ತೆರಿಗೆ ಆಕರ ಮಾಡಲಾಗುವುದು. ಆದರೆ, ಪಟ್ಟಣದ ವ್ಯಾಪ್ತಿಯ ಹಲವು ಟವರ್‌ಗಳು ಅನುಮತಿ ಇಲ್ಲದೆಯೇ ನಿರ್ಮಿಸಲಾಗಿದೆ ಎನ್ನುವುದು ಆಶ್ಚರ್ಯಕರ ಸಂಗತಿ.
ನಿಯಮ ಪಾಲನೆಯಾಗದ ಪರಿಣಾಮ ಪುರಸಭೆಗೆ ಲಕ್ಷಾಂತರ ರೂ. ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ. ಈ ಕುರಿತು ಪ್ರಶ್ನಿಸಿ ಅನಧಿಕೃತವಾಗಿ ನಿರ್ಮಿಸಿರುವ ಟವರ್ ಸಂಸ್ಥೆಗಳಿಗೆ ನೋಟಿಸ್ ಸಹ ಜಾರಿ ಮಾಡದ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಪಟ್ಟಣದ ತಹಶೀಲ್ದಾರ್ ಪ್ಲಾಟ್‌ನಲ್ಲಿ ಪುರಸಭೆಯಿಂದ ಪರವಾನಗಿ ಪಡೆಯದೆ ನೂತನವಾಗಿ ಮೊಬೈಲ್ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ತಡೆಯುವಂತೆ ಅಲ್ಲಿ ವಾಸಿಸುವ ಸಾರ್ವಜನಿಕರು ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪುರಸಭೆ ಅಧಿಕಾರಿಗಳು ಬೇಕಾಬಿಟ್ಟಿ ಸ್ಥಳ ಭೇಟಿ ನಡೆಸಿ ಬಂದರೇ ಹೊರತು, ಸಾಧಕ ಬಾಧಕಗಳ ಕುರಿತು ಕ್ರಮ ವಹಿಸಿಲ್ಲ.
ಸಾರ್ವಜನಿಕರಿಂದ ಒತ್ತಡಗಳು ಬಂದಾಗ ಸ್ಥಳದ ಮಾಲೀಕರಿಗೊಂದು ನೋಟಿಸ್ ನೀಡಿ ಅಷ್ಟೋ ಇಷ್ಟೋ ದಂಡ ಹಾಕಿ ಸುಮ್ಮನಾಗುತ್ತಿದ್ದಾರೆ. ಸಾರ್ವಜನಿಕ ಸ್ಥಳ, ಶಾಲಾ, ಕಾಲೇಜು, ಆಸ್ಪತ್ರೆಗಳು ಇರುವ ಪ್ರದೇಶಗಳಲ್ಲಿ ಟವರ್ ನಿರ್ಮಾಣ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದ್ದರೂ ಈ ಎಲ್ಲ ಆದೇಶ ಗಾಳಿಗೆ ತೂರಿರುವ ಕಂಪನಿಗಳು ಎಲ್ಲೆಂದರಲ್ಲಿ ಟವರ್ ನಿರ್ಮಿಸಿ ಜನರ ಆರೋಗ್ಯದೊಂದೆಗೆ ಚಲ್ಲಾಟವಾಡುತ್ತಿವೆ.
ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ನಿದ್ದೆಯಿಂದ ಎಚ್ಚುತ್ತುಕೊಂಡು ಅನಧಿಕೃತವಾಗಿ ನಿರ್ಮಾಣವಾಗಿರುವ ಟವರ್ ಸಂಸ್ಥೆಗಳಿಗೆ ನೋಟಿಸ್ ನೀಡಿ, ಶುಲ್ಕ ಭರಿಸಲು ಕ್ರಮ ಕೈಗೊಳ್ಳಬೇಕು.
ಶಾಲಾ-ಕಾಲೇಜಿನ ಬಳಿ ನಿರ್ಮಿಸಿರುವ ಟವರ್‌ಗಳ ಸ್ಥಳಾಂತರಕ್ಕೆ ಆದೇಶಿಸಬೇಕು ಇಲ್ಲವಾದರೆ ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪುರಸಭೆಯಿಂದ ಪರವಾನಗಿ ಪಡೆಯದೆ ಶಾಲೆ-ಕಾಲೇಜು, ಜನವಸತಿ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಟವರ್ ನಿರ್ಮಣ ಕಾರ್ಯ ನಿಲ್ಲಿಸುವಂತೆ ಮನವಿ ಸಲ್ಲಿಸಿದರೂ ಯಾವ ಸ್ಪಂದನೆಯೂ ಸಿಕ್ಕಿಲ್ಲ.
– ಎನ್.ವಿ. ಪದ್ಮ, ಪುರಸಭೆ ಸದಸ್ಯೆ
-ಸದಾಶಿವ ಹಿರೇಮಠ