Advertisement

ಭವ್ಯ ರಾಮ ಮಂದಿರ ನಿರ್ಮಾಣ: ಪೇಜಾವರ ಶ್ರೀ

12:32 AM Feb 22, 2020 | mahesh |

ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರವು ಶತ ಶತಮಾನಗಳ ಕಾಲ ಶಾಶ್ವತವಾಗಿ ಉಳಿಯಬೇಕೆಂಬ ಹಿನ್ನೆಲೆಯಲ್ಲಿ ಕಟ್ಟಡವನ್ನು ಯೋಜನಾಬದ್ಧವಾಗಿ, ಸದೃಢವಾಗಿ, ಭವ್ಯವಾಗಿ ನಿರ್ಮಿಸಲಾಗುವುದು ಎಂದು ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾಗಿರುವ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಹೊಸದಿಲ್ಲಿಯಲ್ಲಿ ಬುಧವಾರ ನಡೆದ ರಾಮ ಮಂದಿನ ಟ್ರಸ್ಟ್‌ನ ಮೊದಲ ಸಭೆಯಲ್ಲಿ ಭಾಗವಹಿಸಿ ವಾಪಸಾದ ಶ್ರೀಗಳು, ಗುರುವಾರ ಪೇಜಾವರದ ಮೂಲ ಮಠ ಮತ್ತು ಶುಕ್ರವಾರ ಬೆಳಗ್ಗೆ ಕಣ್ವತೀರ್ಥದಲ್ಲಿರುವ ಉಪ ಮಠಕ್ಕೆ ಭೇಟಿ ನೀಡಿದರು. ಬಳಿಕ ಮಧ್ಯಾಹ್ನ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ರಾಮ ಮಂದಿರ ಟ್ರಸ್ಟ್‌ನಲ್ಲಿ
ನಾನು ದಕ್ಷಿಣ ಭಾರತ ಪ್ರತಿನಿಧಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ದಕ್ಷಿಣ ಭಾರತದ ಎಲ್ಲ ಆಸ್ತಿಕರ ಸಹಕಾರ ಬೇಕು ಎಂದು ಶ್ರೀಗಳು ಹೇಳಿದರು.

ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ನಿಧಿ ಸಂಚಯನಕ್ಕಾಗಿ ಅಯೋಧ್ಯೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಖಾತೆಯನ್ನು ತೆರೆಯಲಾಗುವುದು. ಬಳಿಕ ಖಾತೆ ಸಂಖ್ಯೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ಸಾರ್ವಜನಿಕರು ತಮ್ಮ ದೇಣಿಗೆಯನ್ನು ಈ ಖಾತೆಗೆ ಸಂದಾಯ ಮಾಡಬಹುದಾಗಿದೆ. ಪೇಜಾವರ ಮಠದ ಹೆಸರಿನಲ್ಲಿ 5 ಲಕ್ಷ ರೂ. ಗಳನ್ನು ತಾನು ದಿಲ್ಲಿಯಲ್ಲಿ ಹಸ್ತಾಂತರಿಸಿದ್ದೇನೆ ಎಂದು ಸ್ವಾಮೀಜಿ ವಿವರಿಸಿದರು.

ರಾಮನವಮಿ ದಿನ ಶಿಲಾನ್ಯಾಸ ನೆರವೇರಿಸಲು ಉದ್ದೇಶಿಸಿದ್ದರೂ ಅಂದು 15ರಿಂದ 20 ಲಕ್ಷ ಜನರು ಅಯೋಧ್ಯೆಯಲ್ಲಿ ಸೇರುವ ನಿರೀಕ್ಷೆ ಇರುವುದರಿಂದ ಅಂದು ಶಂಕುಸ್ಥಾಪನೆ ಬೇಡವೆಂದು ಅಭಿಪ್ರಾಯ ಪಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

Advertisement

ರಾಮನವಮಿ ದಿನದಂದು ಪ್ರತಿ ಜಿಲ್ಲೆಯಲ್ಲಿ ರಾಮೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌ ತಿಳಿಸಿದರು. ಪ್ರದೀಪ್‌ ಕುಮಾರ್‌ ಕಲ್ಕೂರ, ಕಾರ್ಪೊರೇಟರ್‌ ಶಕೀಲಾ ಕಾವ ಉಪಸ್ಥಿತರಿದ್ದರು.

ರಾಮ ನಾಮ ಜಪ, ಭಜನೆ
ಹಿಂದೂ ಸಂಸ್ಕೃತಿಯ ಪುನರುಜ್ಜೀವನ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಮ ಮಂದಿರ ನಿರ್ಮಾಣ ಸಾಂಕೇತಿಕ ಮಾತ್ರ. ಸಾತ್ವಿಕ ಬಲವಾಗಿ ಮನೆ ಮನೆಗಳಲ್ಲಿ 108 ರಾಮ ನಾಮ ಜಪ, ಭಜನೆ, ರಾಮಾಯಣ ವಾಚನ ಮತ್ತು ಪ್ರವಚನ ನಡೆಯಬೇಕು. ಈ ವಿಷಯವನ್ನು ಸಭೆಯಲ್ಲಿ ನಾನೇ ಪ್ರಸ್ತಾವಿಸಿದ್ದು, ಅದಕ್ಕೆ ಒಪ್ಪಿಗೆ ಲಭಿಸಿದೆ ಎಂದರು. ಅಯೋಧ್ಯೆಯಲ್ಲಿ ಪ್ರಸ್ತುತ 67 ಎಕರೆ ಜಮೀನು ಲಭ್ಯವಿದ್ದು, ಮುಂದೆ ಸುತ್ತಮುತ್ತಲಿನ ಹೆಚ್ಚುವರಿ ಜಮೀನನ್ನು ಪಡೆಯವುದಕ್ಕೆ ಟ್ರಸ್ಟ್‌ ಪ್ರಯತ್ನಿಸಲಿದೆ ಎಂದು ಪೇಜಾವರ ಸ್ವಾಮೀಜಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next