Advertisement

ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣ

07:47 AM Jan 19, 2019 | |

ಬೀದರ: ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢವಾಗಿರಬೇಕಾದರೆ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳ ಪ್ರೋತ್ಸಾಹಕ್ಕೆ ಜಿಲ್ಲೆಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುವುದಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಖಾತೆ ಸಚಿವ ರಹೀಮ್‌ಖಾನ್‌ ಭರವಸೆ ನೀಡಿದರು.

Advertisement

ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತಮ ಆರೋಗ್ಯಕ್ಕಾಗಿ ಜಿಲ್ಲಾದ್ಯಂತ ಕ್ರೀಡಾ ವಾತಾವರಣ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರೀಡಾ ಗ್ರಾಮವೊಂದು ನಿರ್ಮಿಸಿ ಕ್ರೀಡಾ ಸೌಕರ್ಯಗಳಿಂದ ಕೂಡಿರುವಂತೆ ಮಾಡಲಾಗುವುದು. ಈಗಾಗಲೇ ಕ್ರಿಯಾ ಯೋಜನೆಗಳು ರೂಪಿಸಲಾಗುತ್ತಿದೆ. ಅದಕ್ಕೆ ಸುಮಾರು 15 ರಿಂದ 25ಎಕರೆ ಜಮೀನು ಬೇಕಾಗಿದ್ದು, ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಹಣವನ್ನು ಕೊಟ್ಟು ಜಮೀನು ಖರೀದಿ ಮಾಡುವ ನಿಟ್ಟಿನಲ್ಲಿ ಕೂಡ ಚಿಂತನೆ ನಡೆಯುತ್ತಿದೆ. ಅಲ್ಲದೆ ಸುತ್ತಲಿನ ಪ್ರದೇಶದಲ್ಲಿ ಸರ್ಕಾರದ ಭೂಮಿಗಾಗಿ ಸಹ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಕ್ರೀಡಾ ಸೌಕರ್ಯ ಒದಗಿಸುವ ಕ್ರಿಯಾ ಯೋಜನೆ ಕೂಡ ತಯಾರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಇರುವ ಎಲ್ಲ ಕ್ರೀಡಾಂಗಣಗಳನ್ನು ದುರುಸ್ತಿಗೊಳಿಸಿ ಸೂಕ್ತ ಉಪಯೋಗಕ್ಕೆ ಬರುವಂತೆ ಮಾಡಲಾಗುವುದು. ಅಲ್ಲದೆ, ಹೊಸ ಕ್ರೀಡಾಂಗಣ ನಿರ್ಮಾಣದ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಜಿಲ್ಲೆಯಲ್ಲಿ ಸೂಕ್ತ ವ್ಯವಸ್ಥೆಗಳು ಇಲ್ಲದ ಕಾರಣ ಕ್ರೀಡಾ ಪ್ರತಿಭೆಗಳಿಗೆ ಹಿನ್ನಡೆಯಾಗುತ್ತಿದೆ. ಬರುವ ದಿನಗಳಲ್ಲಿ ಕ್ರೀಡಾಪಟುಗಳಿಗೆ ಎಲ್ಲ ಸೌಕರ್ಯಗಳು ಕಲ್ಪಿಸುವ ಪರಿಕಲ್ಪೆ ಇದೆ ಎಂದು ಹೇಳಿದರು.

ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಖರ್ಚು ವೆಚ್ಚಕ್ಕಾಗಿ ಕೇವಲ 50 ಸಾವಿರ ರೂ. ಅನುದಾನ ನೀಡುತ್ತಿದ್ದು, ಅದು ಯಾವುದಕ್ಕೂ ಸಾಲದಾಗಿದೆ. ಜಿಲ್ಲಾ ಮಟ್ಟದ ಅನುದಾನ 5 ಲಕ್ಷ ರೂ. ವರೆಗೆ ಹೆಚ್ಚಿಸಬೇಕು ಎಂದು ಹೇಳಿದರು. ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ಬೀದರನಲ್ಲಿ ಆಯೋಜಿಸಬೇಕು ಎಂದು ಒತ್ತಾಯಿಸಿದರು. ನಂತರ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಹಾಗೂ ಪದಕ, ಪಾರಿತೋಷಕ ನೀಡಿ ಗೌರವಿಸಿದರು.

Advertisement

ಇದೇ ಸಂದರ್ಭದಲ್ಲಿ ನೌಕರರ ಸಂಘದಿಂದ ಸಚಿವರಿಗೆ ಮನವಿ ಪತ್ರವೊಂದು ಸಲ್ಲಿಸಲಾಗಿದ್ದು, ಸರಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಸಚಿವರು ಭರವಸೆ ನೀಡಿದರು.

ರಾಜ್ಯ ಪರಿಷತ್‌ ಸದಸ್ಯ ರಾಜಕುಮಾರ ಮಾಳಗೆ, ನೌಕರರ ಸಂಘದ ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಔರಾದ ತಾಲೂಕು ನೌಕರ ಸಂಘದ ಅಧ್ಯಕ್ಷ ಶಿವಾಜಿರಾವ ಚಿಟಗಿರೆ, ನಗರಸಭೆ ಸದಸ್ಯ ಧನರಾಜ ಹಂಗರಗಿ, ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶಕ ಅಮೃತ ಎನ್‌. ಅಷ್ಟಗಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಶಿವಕುಮಾರ ಹಾಲಹಳ್ಳಿ, ಶ್ರೀಪತಿ ಮೇತ್ರೆ, ದಿಲೀಪ ಬಂದಗೆ, ಬಬ್ಲೂ, ಶಿವಾನಂದ ಹಿರೇಮಠ, ಮಲ್ಲಿಕಾರ್ಜುನ ಪಂಚಾಕ್ಷರಿ, ಪ್ರಭುಲಿಂಗ ತೂಗಾಂವಕರ್‌, ಬಸವರಾಜ ಜಕ್ಕಾ, ಶಿವಶಂಕರ ವಡ್ಡಿ, ರಮೇಶ ಕೆ. ಮಠಪತಿ, ಯೋಗೇಂದ್ರ ಯದಲಾಪುರೆ, ಶಿವಕುಮಾರ ಗಡ್ಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next