Advertisement
ಕಳೆದ ವಾರ ಸಂಸದ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಯಡಿಯಲ್ಲಿ ನಿರ್ಮಾಣವಾದ ನಗರದ ಬಸ್ ನಿಲ್ದಾಣಗಳ ಖರ್ಚು ವೆಚ್ಚದ ಕುರಿತಂತೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದಾಗ, ಈ ಬಸ್ ನಿಲ್ದಾಣಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಅನುಮಾನ ಮೂಡಿದೆ.
Related Articles
ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಈ ಬಸ್ ನಿಲ್ದಾಣಗಳು ಜನರ ಅನುಕೂಲಕ್ಕೆ ತಕ್ಕಂತೆ ಇಲ್ಲ ಎನ್ನುವುದು ಗಮನಾರ್ಹ.
Advertisement
ಸಾಮಾನ್ಯವಾಗಿ ಜೋರು ಮಳೆ ಬಂದರೆ, ಬಸ್ ನಿಲ್ದಾಣದೊಳಗೆ ಕೊಡೆ ಹಿಡಿದುಕೊಂಡೇ ನಿಲ್ಲಬೇಕಾದ ಪರಿಸ್ಥಿತಿಯಿದೆ. ಅಲ್ಲದೆ, ವಿಪರೀತ ಗಾಳಿಯಿರುವ ಕಾರಣ ಈ ಮಾದರಿಯ ಸ್ಮಾರ್ಟ್ ಬಸ್ ಶೆಲ್ಟರ್ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಪ್ರಯಾಣಿಕರು ಶೆಲ್ಟರ್ ಅಡಿಯಲ್ಲಿ ನಿಂತರೂ ಮಳೆಯಿಂದ ಅಥವಾ ಬೇಸಗೆಯಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದು. ಅದಕ್ಕಾಗಿ ಅಧಿಕಾರಿಗಳಿಗೆ ಲಿಖೀತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತಹ ಅವೈಜ್ಞಾನಿಕ ಬಸ್ ನಿಲ್ದಾಣಕ್ಕೆ 12ರಿಂದ 19 ಲಕ್ಷ ರೂ. ವರೆಗೆ ಖರ್ಚು ಮಾಡಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿರುವುದು ನಗರವಾಸಿಗಳು ಮತ್ತಷ್ಟು ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವಾರ ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ಮಾರ್ಟ್‌ಸಿಟಿ ಬಸ್ ನಿಲ್ದಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಪ್ರತಿ ಬಸ್ ಶೆಲ್ಟರ್‌ಗೆ ರೂ. 12 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಈ ಬಸ್ ಶೆಲ್ಟರ್‌ನಲ್ಲಿ ವಿನ್ಯಾಸ ಅವೈಜ್ಞಾನಿಕವಾಗಿದೆ. ಬಸ್ ಶೆಲ್ಟರ್‌ನ ವಿಸ್ತೀರ್ಣ 600 ಚದರ ಅಡಿಯಿದೆ ಎಂದು ತಿಳಿಸಲಾಗಿದೆ. ಆದರೆ ಅಷ್ಟೊಂದು ವಿಸ್ತೀರ್ಣ ಕಂಡು ಬರುತ್ತಿಲ್ಲ. ದಿಲ್ಲಿಯಲ್ಲಿ ಕೇವಲ ರೂ. 6 ಲಕ್ಷಗಳಿಗೆ ಇಂತಹ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಅಪಾರ ವೆಚ್ಚ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಸಿಟಿಯಡಿ ಬಸ್ ಶೆಲ್ಟರ್ ನಿರ್ಮಾಣ ಕೈಗೆತ್ತಿಕೊಳ್ಳದಂತೆ ಅವರು ತಿಳಿಸಿದ್ದರು.
ಗರಿಷ್ಠ 6 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣಕ್ಕೆ 12 ಲಕ್ಷ ಏಕೆ ?ನಗರದ 22 ಕಡೆಗಳಲ್ಲಿ ನಿರ್ಮಾಣವಾದ ಬಸ್ ನಿಲ್ದಾಣದ ಪ್ರತಿ ನಿಲ್ದಾಣಕ್ಕೂ 12 ಲಕ್ಷ ರೂ.ಗಿಂತ ಅಧಿಕ ಖರ್ಚು ಮಾಡಲಾಗಿದೆ. ಇದು 600 ಚದರ ಅಡಿ ವಿಸ್ತೀರ್ಣ ಹೊಂದಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಬಸ್ ನಿಲ್ದಾಣ ಗರಿಷ್ಠ 300 ಚದರ ಅಡಿಗಿಂತ ಅಧಿಕ ವಿಸ್ತೀರ್ಣ ಇರಲಾರದು. ಅಲ್ಲದೆ ನಿಲ್ದಾಣದ ನಾಲ್ಕು ಕಂಬಗಳನ್ನು ಸ್ಟ್ರೇಯಿನ್ ಲೆಸ್ ಸ್ಟ್ರೀಲ್‌ನಿಂದ ನಿರ್ಮಿಸಲಾಗಿದ್ದು, ಮೇಲ್ಭಾಗಕ್ಕೆ ತಗಡು ಹಾಕಲಾಗಿದೆ. ನೆಲಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಇದಕ್ಕೆ ಗರಿಷ್ಠ ಆರು ಲಕ್ಷ ರೂ. ಖರ್ಚು ತಗಲಬಹುದಾಗಿದ್ದು, ಇದಕ್ಕೆ 12 ಲಕ್ಷ ರೂ. ಖರ್ಚು ಹೇಗಾಯಿತು ಎಂಬುದೇ ಸಾರ್ವಜನಿಕರ ಪ್ರಶ್ನೆ. ಪರಿಶೀಲಿ ಸಲಾಗುವುದು
ಸ್ಮಾರ್ಟ್ ಸಿಟಿ ಬಸ್‌ನಿಲ್ದಾಣಗಳಿಗೆ ಟೆಂಡರ್ ಆಗಿ ಎರಡು ವರ್ಷಗಳು ಕಳೆದಿವೆ. ಹಾಗಾಗಿ ಅಂದಿನಿಂದ ಈವರೆಗಿನ ಬೆಳವಣಿಗೆಗಳ ಬಗ್ಗೆ ಗಮನಹರಿಸಬೇಕಾಗಿದೆ. ಬಸ್ ನಿಲ್ದಾಣಗಳು ನಿರ್ಮಾಣವಾದ ಸ್ಥಳ, ಆರ್ಕಿಟೆಕ್ಚರ್ ಮೊದಲಾದವುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು.
-ಅರುಣ್ ಪ್ರಭು, ಮಹಾಪ್ರಬಂಧಕರು(ತಾಂತ್ರಿಕ)