Advertisement

ಶೇಕಮಲೆಯ 2 ಕಡೆ ಬಸ್ಸು ತಂಗುದಾಣ ನಿರ್ಮಾಣ

10:41 PM Jun 12, 2019 | mahesh |

ಬಡಗನ್ನೂರು: ಶೇಕಮಲೆಯ ಎರಡು ಕಡೆಗಳಲ್ಲಿ ಬಸ್ಸು ತಂಗುದಾಣ ನಿರ್ಮಾಣ ಮಾಡುವ ಬಗ್ಗೆ ಅರಿಯಡ್ಕ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಸ್‌. ಅವರ ಅಧ್ಯಕ್ಷತೆಯಲ್ಲಿ ಜೂ.  11ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

Advertisement

ಅರಿಯಡ್ಕ ಗ್ರಾಮದ ಕೆಳಗಿನ ಶೇಕಮಲೆ ಹಾಗೂ ಮೇಲಿನ ಶೇಕಮಲೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣದ ಬಗ್ಗೆ ಪರ ವಿರೋಧ ಸಾರ್ವಜನಿಕ ಅರ್ಜಿ ಪರಿಶೀಲಿಸಿ ಮಾತನಾಡಿದ ಪಿಡಿಒ ಪದ್ಮಾ ಕುಮಾರಿ, ಬಸ್ಸು ತಂಗುದಾಣದ ವಿಷಯದಲ್ಲಿ ನಾನು ತುಂಬಾ ಕಿರುಕುಳ ಅನುಭವಿಸಿದ್ದೇನೆ. ಅನೇಕ ಬೆದರಿಕೆ ಕರೆಗಳು ಬಂದಿದೆ. ಆಲೋಚನೆ ಮಾಡಿ ಕ್ರಿಯಾ ಯೋಜನೆ ತಯಾರಿಸಬೇಕು. ಈ ಬಗ್ಗೆ ಸರಿಯಾದ ತಿರ್ಮಾನ ಕೈಗೊಂಡ ಬಳಿಕವೇ ತಂಗುದಾಣ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದರು. ಅಧ್ಯಕ್ಷೆ ಸವಿತಾ ಎಸ್‌. ಮಾತನಾಡಿ, ತಂಗುದಾಣದ ವಿಷಯ ಕಳೆದ ಗ್ರಾಮಸಭೆಯಲ್ಲಿ ಪ್ರಸ್ತಾವಿಸಿ ಎರಡೂ ಕಡೆ ಬಸ್ಸು ತಂಗುದಾಣ ಮಾಡುವ ಬಗ್ಗೆ ತಿಳಿಸಲಾಗಿದೆ. ಮತ್ತೆ ಆ ವಿಚಾರವನ್ನು ಸಾಮಾನ್ಯ ಸಭೆಗೆ ಏಕೆ ತರಬಾರದು ಎಂದರು.

ಈ ಹಿಂದೆ ನಿರ್ಧರಿಸಿದಂತೆ ಎರಡು ಕಡೆ ತಂಗುದಾಣ ಮಾಡವುದಾದರೆ ಮಾಡಿ. ಇಲ್ಲವಾದರೆ ಬೇಡ ಎಂದು ರಾಜೇಶ್‌ ಎಚ್‌. ತಿಳಿಸಿದರು. ಅವರಿಗೆ ಸಂತೋಷ್‌ ಕುಮಾರ್‌, ಹೊನ್ನಪ್ಪ ಪುಜಾರಿ, ರೋಹಿತ್‌ ಪೂಜಾರಿ, ಪ್ರಮಲತಾ ಜೆ. ರೈ ಧ್ವನಿಗೂಡಿಸಿದರು. ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ, ಎರಡು ಕಡೆಗಳಲ್ಲಿ ತಂಗುದಾಣದ ಅನಿವಾರ್ಯತೆ ಇದೆ. ಆಕ್ಷೇಪ ಕೊಟ್ಟವರ ಮನವೊಲಿಸಿ ಈ ಹಿಂದೆ ನಿಗದಿತ ಸ್ಥಳದಲ್ಲಿ ತಂಗುದಾಣ ನಿರ್ಮಾಣ ಮಾಡೋಣ ಎಂದರು. ಈ ಬಗ್ಗೆ ಸರ್ವ ಸದಸ್ಯರ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳಲಾಯಿತು.

ಕೊಳವೆಬಾವಿ: ಪರ-ವಿರೋಧ ಚರ್ಚೆ
ದಲಿತ ಕುಟುಂಬದ ರಾಮಚಂದ್ರ ಬಿನ್‌ ಮಲ್ಲ ಅವರು ಕೊಳವೆ ಬಾವಿ ಕೊರೆಯಲು ಅನುಮತಿ ಕೇಳಿದ್ದಾರೆ. ಒಂದು ವೇಳೆ ಪಂಚಾಯತ್‌ ಕೊಳವೆ ಬಾವಿಗೆ ಸಮಸ್ಯೆ ಉಂಟಾದಲ್ಲಿ ತನ್ನ ಕೊಳವೆ ಬಾವಿಯಿಂದ ನೀರು ಕೊಡುವ ಬಗ್ಗೆ ಅಫಿದವತ್‌ ಮುಖಾಂತರ ತಿಳಿಸಿದ್ದಾರೆ. ಅವರಿಗೆ ಕೊಳವೆ ಬಾವಿ ಮಾಡಲು ಅನುಮತಿ ನೀಡೊಣ ಎಂದು ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ ಹೇಳಿದರು.

ಸದಸ್ಯೆ ಶಶಿಕಲಾ ಚೌಟ ಮಾತನಾಡಿ, ಗ್ರಾ.ಪಂ. ಕೊಳವೆ ಬಾವಿಯ 500 ಮೀ. ಒಳಗಡೆ ಬೇರೆ ಕೊಳವೆ ಬಾವಿ ತೆಗೆಯಬಾರದು ಎನ್ನುವ ನಿಯಮ ಇದೆ. ಈ ಭಾಗದ 22 ಫ‌ಲಾನುಭವಿ ಕುಟುಂಬಗಳು ಪಂಚಾಯತ್‌ ಕೊಳವೆ ಬಾವಿಯಿಂದ ನೀರು ಪಡೆಯುತ್ತಿವೆ. ಅವರಿಗೆ ಅನ್ಯಾಯವಾಗಬಾರದು. ನೀರಿನ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಎಂದು ಹೇಳಿದರು.

Advertisement

ತಾರತಮ್ಯ ಮಾಡಬೇಡಿ
ಸದಸ್ಯ ಸಂತೋಷ್‌ ಕುಮಾರ್‌ ಕುತ್ಯಾಡಿ ಪ್ರತಿಕ್ರಿಯಿಸಿ, ಶ್ರೀಮಂತರಿ ಗಾದರೆ ತತ್‌ಕ್ಷಣ ಅನುಮತಿ ಕೊಡುತ್ತೀರಿ, ಬಡವರಿಗೆ ಏಕೆ ತಾರತಮ್ಯ ಮಾಡುವುದು ಎಂದು ಪ್ರಶ್ನಿಸಿದರು. ಪಂಚಾಯತ್‌ ಕೊಳವೆ ಬಾವಿಯ ಸುತ್ತಲಿನ ಎಲ್ಲ ಕೊಳವೆ ಬಾವಿಯನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಣಯ ಮಾಡುವಂತೆ ಒತ್ತಾಯಿಸಿದರು. ಸದಸ್ಯರಾದ ರೋಹಿತ್‌ ಪೂಜಾರಿ ಹಾಗೂ ರಾಜೇಶ್‌ ಧ್ವನಿಗೂಡಿಸಿದರು.

ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಬಹುಮತದ ಆಧಾರದ ಮೇಲೆ ಸರ್ವಾನುಮತದಿಂದ ಅನುಮತಿ ನೀಡಲು ತೀರ್ಮಾನಿಸಿದರು. ವಿಪಕ್ಷ ಸದಸ್ಯರು ಸಭೆ ಕರೆದು ತೀರ್ಮಾ ನಿಸುವಂತೆ ಒತ್ತಾಯಿಸಿದರು. ಎರಡು ರೀತಿಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು. ನೀರಿನ ಸಮಿತಿಯ ಸಭೆ ಕರೆಯಲು ತೀರ್ಮಾನಿಸಲಾಯಿತು.

ಸದಸ್ಯರಾದ ತಿಲಕ್‌ ರೈ ಕುತ್ಯಾಡಿ, ಮಹಾಲಿಂಗ ನಾಯ್ಕ, ರವೀಂದ್ರ ಪೂಜಾರಿ, ನವೀನ ಬಿ.ಡಿ., ಚಿತ್ರಾ ಎನ್‌., ಸಾವಿತ್ರಿ ಕುರುಂಜ, ಹೊನ್ನಪ್ಪ ಪೂಜಾರಿ, ಸುಂದರ, ಸದಾನಂದ ಮಣಿಯಾಣಿ, ಅಮೃತಾ, ಸರೋಜಿನಿ, ಸಹನಾ ನಳಿನಾಕ್ಷಿ, ಹೇಮಾವತಿ, ಸೀತರಾಮ ಮೇಲ್ಪಾದೆ, ನಿರ್ಮಲಾ ಎಸ್‌.ಪಿ., ಪಿಡಿಒ ಪದ್ಮಾ ಕುಮಾರಿ, ಕಾರ್ಯದರ್ಶಿ ಕೃಷ್ಣರಾಜ್‌ ಭಟ್‌ ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ರವೀಂದ್ರ ಪಾಟೀಲ್‌ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಗುಮಾಸ್ತ ಪ್ರಭಾಕರ ಸರಕಾರದ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿ ಓದಿ ವಂದಿಸಿದರು. ಸಿಬಂದಿ ಸಹಕರಿಸಿದರು.

ತೆರಿಗೆ ಬಳಿಕ ಪರವಾನಿಗೆ
ಅರಿಯಡ್ಕ ಮಸೀದಿ ಕಟ್ಟಡದ ತೆರಿಗೆ ವಿನಾಯಿತಿ ಮಾಡಿ ಕಟ್ಟಡ ನವೀಕರಣ ಪರವಾನಿಗೆ ನೀಡುವಂತೆ ಬಂದಿದ್ದ ಅರ್ಜಿ ಬಗ್ಗೆ ಚರ್ಚಿಸಲಾಗಿ ತೆರಿಗೆ ಪಡೆದುಕೊಂಡ ಬಳಿಕ ಕಟ್ಟಡ ಪರವಾನಿಗೆ ನೀಡಲು ತೀರ್ಮಾನಿಸಲಾಯಿತು. ಕಾವು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಪರಿಸರ ಮಲಿನ ಮಾಡುತ್ತಿರುವ ಬಗ್ಗೆ ಉಪಾಧ್ಯಕ್ಷ ಪ್ರಸ್ತಾವಿಸಿದರು. ಈ ಬಗ್ಗೆ ಸಂಸ್ಥೆಗೆ ನೋಟಿಸ್‌ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next