ವಿಜಯಪುರ: ಕನಕದಾಸ ಬಡಾವಣೆಯಿಂದ ರಾಷ್ಟ್ರೀಯ ಹೆದ್ದಾರಿ-51ಕ್ಕೆ ನೇರ ಸಂಪರ್ಕ ಕಲ್ಪಿಸುವ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡುವ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಾರ್ವಜನಿಕ ಹಿತಾಸಕ್ತಿಯ ಸದರಿ ಬೇಡಿಕೆಗೆ ನಿಯಮದ ಪ್ರಕಾರ ಒಪ್ಪಿಗೆ ನೀಡುವುದಾಗಿ ರೈಲ್ವೆ ಅಕಾರಿಗಳು ಭರವಸೆ ನೀಡಿದ್ದಾರೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ಮುಖ್ಯಸ್ಥ ಜನರಲ್ ಮ್ಯಾನೇಜರ ಸಂಜೀವ ಕಿಶೋರ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಶಾಸಕ ಯತ್ನಾಳ ಅವರು, ನಗರದ ಜಿಪಂ ಹತ್ತಿರ ಕನಕದಾಸ ಬಡಾವಣೆ ಮೂಲಕ ಬಿಎಸ್‌ಎನ್‌ಎಲ್ ಸಿಬ್ಬಂದಿ ವಸತಿ ಗೃಹದಿಂದ ರೈಲ್ವೆ ಹಳಿ ದಾಟಿ ರಾಷ್ಟ್ರೀಯ ಹೆದ್ದಾರಿ ನಂ. 51ಕ್ಕೆ ಸಂಪರ್ಕ ಕಲ್ಪಿಸುವ ಅಗತ್ಯವಿದೆ. ನಕ್ಷೆಯ ಪ್ರಕಾರ ರಸ್ತೆ ಇದ್ದು, ಸದರಿ ರಸ್ತೆಯ ಮಧ್ಯದಲ್ಲಿ ನೈಸರ್ಗಿಕ ಗುಡ್ಡಗಳ 4 ಮೀಟರ್ ಕೆಳಗೆ ರೈಲ್ವೆ ಹಳಿ ಇದೆ. ಸದರಿ ಮಾರ್ಗದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮೇಲ್ಸೇತುವೆ ನಿರ್ಮಿಸಲು ರೈಲ್ವೇ ಇಲಾಖೆಯ ಅನುಮತಿ ಕೋರಿದರು.
ಸದರಿ ರೈಲ್ವೇ ಹಳಿಯ ಪಶ್ಚಿಮ ಭಾಗದಲ್ಲಿ ಸಾಕಷ್ಟು ಬಡಾವಣೆಗಳ ಜೊತೆಗೆ ಸರಕಾರಿ ಕಚೇರಿಗಳಾದ ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ, ತಹಶೀಲ್ದಾರ್ ಕಚೇರಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ ಪ್ರಾಧಿಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ಸರಕಾರಿ ಕಚೇರಿಗಳೂ ಇವೆ ಎಂದು ಮೇಲ್ಸೇತುವೆ ನಿರ್ಮಾಣದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಲ್ಲದೇ ಈ ಪರಿಸರದಲ್ಲಿ ಮಂಗಲ ಕಾರ್ಯಾಲಯ, ಸರಕಾರಿ-ಖಾಸಗಿ ಶಾಲಾ-ಕಾಲೇಜುಗಳಿವೆ.
ಪೂರ್ವ ಭಾಗಗದಲ್ಲಿ ಸಾಕಷ್ಟು ಬಡಾವಣೆಗಳ ಮನೆಗಳು, ವಾಣಿಜ್ಯ ಮತ್ತು ವಿವಿಧ ಕಂಪನಿಗಳ ವಾಹನಗಳ ಶೊರೋಂಗಳು, ಹೈಪರ್ ಮಾರ್ಕೇಟ್ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಇವೆ. ಇದರಿಂದ ಪೂರ್ವ-ಪಶ್ಚಿಮ ಭಾಗದ ಜನರಿಗೆ ಪರಸ್ಪರ ಸುಲಭವಾಗಿ ಸಂಪರ್ಕಕ್ಕೆ ಅವಕಾಶವಾಗುತ್ತದೆ. ಮೇಲ್ಸೇತುವೆ ಇಲ್ಲದ ಕಾರಣ ಇದೀಗ 7 ಕಿ.ಮೀಟರ್ ಸುತ್ತುವರಿದು ಸಂಚರಿಸಬೇಕಿದೆ. ಸಮೀಪದ ರೈಲ್ವೇ ಹಳಿಗೆ ನೈಸರ್ಗಿಕ ಪರಿಸರದಲ್ಲಿ ಮೇಲ್ಸೇತುವೆ ನಿರ್ಮಿಸುವುದರಿಂದ ಸಮಸ್ಯೆ ಬಗೆಹರೆಯಲಿದೆ. ಸಂಚಾರ ದಟ್ಟಣೆಯೂ ಕಡಿಮೆ ಆಗಲಿದೆ. ರಾಷ್ಟ್ರೀಯ ಇಂಧನದ ಉಳಿತಾಯದ ಮೂಲಕ ರಾಷ್ಟ್ರೀಯ ಅಪವ್ಯಯವೂ ತಪ್ಪಲಿದೆ ಎಂದು ವಿವರಿಸಿದ್ದಾರೆ.
ಮನವಿಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಕಿಶೋರ ಅವರು, ಲೋಕೋಪಯೋಗಿ ಇಲಾಖೆ ಅಂದಾಜು ಪತ್ರಿಕೆ, ನೀಲ ನಕ್ಷೆ ಸಹಿತ ಸಮಗ್ರ ಯೋಜನಾ ವರದಿಯ ಪ್ರಸ್ತಾವನೆ ಸಲ್ಲಿಸಿದಲ್ಲಿ ಸಾರ್ವಜನಿಕ ಹಿತದೃಷ್ಟಿಯಿ ಸದರಿ ಯೋಜನೆಗೆ ಅನುಮತಿಸುವುದಾಗಿ ಭರವಸೆ ನೀಡಿದ್ದಾರೆ.